ಆ. 1ರಿಂದ 11ರವರೆಗೆ ಉಡುಪಿಯಲ್ಲಿ ‘ಕೈಮಗ್ಗ ಸೀರೆಗಳ ಉತ್ಸವ’

ಉಡುಪಿ : ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಆಗಸ್ಟ್ 1ರಿಂದ 11ರ‌ವರೆಗೆ ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ‘ಕೈಮಗ್ಗ ಸೀರೆಗಳ ಉತ್ಸವ- 2024’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ತಿಳಿಸಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಆಯೋಜನೆ ಹಾಗೂ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಆ.1ರಂದು ಬೆಳಿಗ್ಗೆ 9.30ಕ್ಕೆ ಕೈಮಗ್ಗ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ.

ಆ. 4ರಂದು ಬೆಳಿಗ್ಗೆ 9.30ಕ್ಕೆ ಸಾಂಸ್ಕ್ರತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಆ ಬಳಿಕ ಸಾರ್ವಜನಿಕರಿಗಾಗಿ “ಶ್ರೀಕೃಷ್ಣಲೀಲೋತ್ಸವ” ಗೋಪಿಕೆಯರೊಂದಿಗೆ ಮುದ್ದುಕೃಷ್ಣ / ಬಾಲಕೃಷ್ಣನ ಬಾಲ ಲೀಲೆಗಳನ್ನೊಳಗೊಂಡ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆ. 7ರಂದು ಬೆಳಿಗ್ಗೆ 9.30ಕ್ಕೆ ಉಡುಪಿ ಬ್ರಾಂಡ್ ಲಿನನ್ ಶರ್ಟಿಂಗ್ ಅನಾವರಣ, ಉಡುಪಿ ಹ್ಯಾಂಡ್ ಲೂಮ್ ವರ್ಲ್ಡ್‌ನ ಕೈಮಗ್ಗ ಪ್ರೀಮಿಯಂ ಸೀರೆಗಳ ಬಿಡುಗಡೆ, ನೂತನ ಬ್ಯಾಚ್‌ನ ಉದ್ಘಾಟನೆ ಹಾಗೂ ಎರಡೂವರೆ ಲಕ್ಷ ರೂ. ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ನೇಕಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು‌ ತಿಳಿಸಿದರು.

ಆ. 10ರಂದು ಬೆಳಿಗ್ಗೆ 10 ಗಂಟೆಗೆ ತುಳುನಾಡ ವೈಭವ ಎಂಬ ಶೀರ್ಷಿಕೆಯಡಿ ಕೈ ಮಗ್ಗ ಸೀರೆಗಳನ್ನುಟ್ಟು ವೈಯುಕ್ತಿಕ, ದಂಪತಿ, ತಂಡ ವಿಭಾಗಗಳಲ್ಲಿ ಸೌಂದರ್ಯ ಸ್ಪರ್ಧೆ ಜರುಗಲಿದೆ. ಆ.11ರಂದು ಬೆಳಿಗ್ಗೆ 9.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆ. 1ರಿಂದ 11ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ ಸಾಂಸ್ಕ್ರತಿಕ ಕಾರ್ಯಕ್ರಮ, ಆ.5ರಿಂದ 9 ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 4ಗಂಟೆಯವರೆಗೆ ಕುಣಿತ ಭಜನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆ. 4ರಿಂದ 10 ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಶಿಖರೋಪನ್ಯಾಸ ಮಾಲಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಆಯೋಜನಾ ಸಮಿತಿ ಅಧ್ಯಕ್ಷ ಚಂದನ್ ಶೆಟ್ಟಿಗಾರ್, ಕಾರ್ಯಾಧ್ಯಕ್ಷ ಮಂಜುನಾಥ್ ಮಣಿಪಾಲ್, ಕಾರ್ಯದರ್ಶಿ ಅವಿನಾಶ್ ಶೆಟ್ಟಿಗಾರ್, ಪ್ರತಿಷ್ಠಾನದ ಉಪಾಧ್ಯಕ್ಷೆ ಸರೋಜ ಯಶವಂತ್, ಕೋಶಾಧಿಕಾರಿ ಶ್ರೀನಿವಾಸ್ ಶೆಟ್ಟಿಗಾರ್, ಪದಾಧಿಕಾರಿಗಳಾದ ವಿಠಲ ಶೆಟ್ಟಿಗಾರ್, ರಾಜಕೇಸರಿ ಶೆಟ್ಟಿಗಾರ್, ಅಶೋಕ್ ಶೆಟ್ಟಿಗಾರ್ ಅಲೆವೂರು ಇದ್ದರು.

Related posts

ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ನಿಷೇಧಾಜ್ಞೆ, ಸಂತೆ, ಜಾತ್ರೆ ನಿಷೇಧ ಆದೇಶ ಹಿಂದೆಗೆತ : ಉಡುಪಿ ಜಿಲ್ಲಾಧಿಕಾರಿ

ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಸವಾರ ಮೃತ್ಯು