ಜನಪ್ರತಿನಿಧಿಗಳ ಬೆಂಬಲದ ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಭಿಗೆ ಸರಕಾರಿ ಕಾಲೇಜುಗಳನ್ನು ಬಲಿಯಾಗಿಸಲಾಗುತ್ತಿದೆ – ಮುನೀರ್ ಕಾಟಿಪಳ್ಳ

ಮಂಗಳೂರು : ಜನಪ್ರತಿನಿಧಿಗಳ ಬೆಂಬಲದ ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಭಿಗೆ ಸರಕಾರಿ ಕಾಲೇಜುಗಳನ್ನು ಬಲಿಯಾಗಿಸಲಾಗುತ್ತಿದೆ ಎಂದು ಹೋರಾಟಗಾರ, ಯುವಜನ ಮುಖಂಡ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಮಂಗಳೂರು ವಿ.ವಿ ಮುಂಭಾಗದಲ್ಲಿ ಕೊಣಾಜೆ ಸಹಿತ ಮಂಗಳೂರು ವಿವಿ ಘಟಕ ಕಾಲೇಜುಗಳಾದ ಬನ್ನಡ್ಕ, ನೆಲ್ಯಾಡಿ, ಮಂಗಳೂರು ಸಂಧ್ಯಾ ಕಾಲೇಜುಗಳನ್ನು ಉಳಿಸಲು, ಬಲಪಡಿಸಲು ಒತ್ತಾಯಿಸಿ ಮಂಗಳೂರು ವಿವಿ ಘಟಕ ಪದವಿ ಕಾಲೇಜುಗಳ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಾಮೂಹಿಕ ಜನಾಗ್ರಹ ಧರಣಿಯನ್ನು ಉದ್ಘಾಟಿಸಿ ಮಾತಾಡುತ್ತಾ ಅವರು ಆರೋಪಿಸಿದರು.

ಬಡವರ ಮನೆಯ ಮಕ್ಕಳು ತಮ್ಮ ಆಯ್ಕೆಯ ಪದವಿ ಶಿಕ್ಷಣ ಪಡೆಯಬೇಕಾದರೆ ಸರಕಾರಿ ಶಾಲಾ, ಕಾಲೇಜುಗಳು ಉಳಿಯಬೇಕು, ಬಲಗೊಳ್ಳಬೇಕು. ಹಣಕಾಸು, ಅನುದಾನದ ಕೊರತೆಯನ್ನು ಮುಂದಿಟ್ಟು ಕೊಣಾಜೆ, ಬನ್ನಡ್ಕ, ನೆಲ್ಯಾಡಿ ಸಹಿತ ನಾಲ್ಕು ಕಾಲೇಜು ಮುಚ್ಚಲು ಹೊರಟಿರುವುದು ನೆಪ ಮಾತ್ರ. ವಿವಿ ಆಡಳಿತದ ನಡೆಯನ್ನು ನಾಗರೀಕ ಸಮಾಜ ತೀವ್ರವಾಗಿ ವಿರೋಧಿಸಿದೆ. ವಿವಿಯಲ್ಲಿ ಆರ್ಥಿಕ ಮುಗ್ಗಟ್ಟು. ಅದಕ್ಕೆ ವಿ ವಿ ಅಡಳಿತದ ಭ್ರಷ್ಟಾಚಾರ, ಇದನ್ನೆಲ್ಲ ಕಂಡು ಕಣ್ಣು ಮುಚ್ಚಿ ಕೂತ ಜನಪ್ರತಿನಿಧಿಗಳೇ ನೇರ ಕಾರಣ‌. ಈಗ ಪರಿಸ್ಥಿತಿ ಕೈ ಮೀರಿದ್ದು ವಿ.ವಿ. ಘಟಕ ಕಾಲೇಜುಗಳನ್ನು ರಾಜ್ಯ ಸರಕಾರವೇ ತನ್ನ ಅಧೀನಕ್ಕೆ ಪಡೆದು ನಡೆಸಲಿ. ದ.ಕ ಜಿಲ್ಲೆಯಲ್ಲಂತು ಖಾಸಗೀ ಶಿಕ್ಷಣ ಲಾಭಿಯದ್ದೇ ಏಕಸ್ವಾಮ್ಯ. ಧಣಿಕರ ಕಾಲೇಜುಗಳಿಗೆ ವಿದ್ಯಾರ್ಥಿಗಳ ಪೂರೈಸೋದಕ್ಕೋಸ್ಕರವೇ ಬ್ರೋಕರ್‌ಗಳು ತುಂಬಿಹೋಗಿದ್ದಾರೆ. ಇನ್ನೊಂದೆಡೆ ಕರ್ನಾಟಕ ವಿಧಾನಸೌಧದೊಳಗೆ ಇರುವ ಶಾಸಕರುಗಳಲ್ಲಿ ಬಹುತೇಕರು ಖಾಸಗೀ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಇವರುಗಳು ನಡೆಸುವ ಖಾಸಗೀ ಕಾಲೇಜುಗಳ ಲಾಭಿಯ ದಾಳಿಗೆ ಸರಕಾರಿ ಶಾಲಾ ಕಾಲೇಜುಗಳು ಬಲಿಯಾಗುತ್ತಿವೆ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತರಾದ ನಝೀರ್ ಉಳ್ಳಾಲ ಮಾತನಾಡುತ್ತಾ ಶಿಕ್ಷಣದ ಮಾಫಿಯಾ ಬಡವರ ಮಕ್ಕಳ ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ. ಶ್ರೀನಿವಾಸ್ ಮಲ್ಯರು ಅಂದು ಪ್ರಾರಂಭಿಸಿದ ಇಂಜನೀಯರಿಂಗ್ ಕಾಲೇಜು ಬಿಟ್ಟರೆ ಈವರೆಗೆ ಒಂದೇ ಒಂದು ಕಾಲೇಜನ್ನು ದ.ಕ. ಜಿಲ್ಲೆಯಲ್ಲಿ ತೆರೆಯಲು ನಮ್ಮನ್ನಾಳುವ ಸರಕಾರಗಳಿಗೆ ಸಾಧ್ಯವಾಗಿಲ್ಲ ಎಂದರು.

ಕಾರ್ಮಿಕ ಮುಖಂಡ ಬಿ ಶೇಖರ್ ಮಾತನಾಡುತ್ತಾ ಸದ್ಯದ ಪರಿಸ್ಥಿತಿಯಲ್ಲಿ ಬಡವರ ಮನೆಯ ಮಕ್ಕಳಿಗೆ ಖಾಸಗೀ ಕಾಲೇಜುಗಳು ವಿಧಿಸುವ ಶುಲ್ಕವನ್ನು ಬರಿಸಲು ಸಾಧ್ಯವಾಗುತ್ತಿಲ್ಲ. ಅಂತಹ ವಿಭಾಗದ ವಿದ್ಯಾರ್ಥಿಗಳ ಭವಿಷ್ಯದ ಬೆಳವಣಿಗೆಗೆ ವಿವಿಯಂತಹ ಸರಕಾರಿ ಕಾಲೇಜುಗಳು ಉಳಿಯಲೇಬೇಕು. ಇಲ್ಲದೇ ಹೋದಲ್ಲಿ ಅವುಗಳ ಉಳಿಗಾಗಿ ನಾವೆಲ್ಲಾ ಸಮಾನ ಮನಸ್ಕರು ಜೊತೆಗೂಡಿ ಹೋರಾಟಗಳನ್ನು ತೀವ್ರಗೊಳಿಸಬೇಕಾಗಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಅಝೀಝ್ ಮಲಾರ್, ಪ್ರಾಂತ ರೈತ ಸಂಘ ಮುಖಂಡರಾದ ಕೆ ಯಾದವ ಶೆಟ್ಟಿ, ಕಾರ್ಮಿಕ ಮುಖಂಡರಾದ ಎಚ್.ವಿ ರಾವ್, ಬಿ.ಎಮ್ ಭಟ್, ಸುಕುಮಾರ್ ತೊಕ್ಕೊಟ್ಟು, ಕೃಷ್ಣಪ್ಪ ಸಾಲ್ಯಾನ್, ಸುನೀಲ್ ಕುಮಾರ್ ಬಜಾಲ್, ಜಯಂತ ನಾಯ್ಕ್, ಹಿರಿಯ ದಲಿತ ಮುಖಂಡರು ಎಮ್ ದೇವದಾಸ್, ಡಿವೈಎಫ್ಐ ಮುಖಂಡರಾದ ಬಿ.ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ಜಗತ್ಪಾಲ್ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನಾ ಧರಣಿಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರುಗಳಾದ ಅಸುಂತ ಡಿಸೋಜ, ಪ್ರಮಿಳಾ ದೇವಾಡಿಗ, ಪ್ರಮೀಳಾ ಶಕ್ತಿನಗರ, ನವೀನ್ ಕೊಂಚಾಡಿ, ಸೋಶಿಯಲ್ ಫಾರೂಕ್, ಅಬ್ದುಲ್ ಖಾದರ್, ಶೇಖರ್ ಕುತ್ತಾರ್, ಜನರ್ಧಾನ ಕುತ್ತಾರ್, ಶಾಹುಲ್ ಹಮೀದ್, ಅಶ್ರಫ್ ಹರೇಕಳ, ರಫೀಕ್ ಹರೇಕಳ, ತಯ್ಯೂಬ್ ಬೆಂಗರೆ, ಪುನೀತ್ ಉರ್ವಸ್ಟೋರ್, ಜಗದೀಶ್ ಬಜಾಲ್, ಅಲ್ತಾಫ್ ದೇರಳಕಟ್ಟೆ, ರಜಾಕ್ ಮೊಂಟೆಪದವು, ರಜಾಕ್ ಮುಡಿಪು , ಭರತ್ ಕುತ್ತಾರ್, ವಿಲಾಸಿನಿ ತೊಕ್ಕೊಟ್ಟು, ಆಶಾ ಬೋಳೂರು, ಭರತ್ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.

ಪ್ರತಿಭಟನಾ ಧರಣಿಯನ್ನು ಹೋರಾಟ ಸಮಿತಿಯ ಸಂಚಾಲಕ ರಿಜ್ವಾನ್ ಹರೇಕಳ ಸ್ವಾಗತಿಸಿ ನಿರೂಪಿಸಿದರು.

ಧರಣಿ ಸ್ಥಳಕ್ಕೆ ಉಪಕುಲಪತಿ, ರಿಜಿಸ್ಟ್ರಾರ್ ಭೇಟಿ : ಮನವಿ ಸ್ವೀಕಾರ, ಪರಿಸ್ಥಿತಿಯ ವಿವರಣೆ

ಉಪಕುಲಪತಿ ಡಾ. ಪಿ. ಧರ್ಮ, ರಿಜಿಸ್ಟ್ರರ್ ರಾಜು ಮೊಗವೀರ ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಮಂಗಳೂರು ವಿ ವಿ ಎದುರಿಸುತ್ತಿರುವ ಆರ್ಥಿಕ ಸಮಸ್ಯೆ, ಕಾಲೇಜುಗಳಿಗೆ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಪಾವತಿಸುತ್ತಿರುವುದು, ಉಪನ್ಯಾಸಕರಿಗೆ ವೇತನ ಪಾವತಿಸಲು ಆಗದಿರುವ ಸ್ಥತಿಗಳನ್ನು ಹಂಚಿಕೊಂಡರು. ಸರಕಾರ ಘಟಕ ಪದವಿ ಕಾಲೇಜುಗಳನ್ನು ಅಧೀನಕ್ಕೆ ಪಡೆದು ನಡೆಸಬೇಕು ಎಂಬುದು ವಿ.ವಿ.ಯ ನಿಲುವು, ಅದನ್ನು ಈಗಾಗಲೆ ಸರಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ಉಪಚುನಾವಣೆ ಫಲಿತಾಂಶಕ್ಕೆ ಇನ್ನೊಂದೇ ದಿನ ಬಾಕಿ – ಡಿಕೆಶಿಯಿಂದ ಕೊಲ್ಲೂರು ಮೂಕಾಂಬಿಕೆ ದರ್ಶನ