ಸಾವಿರಾರು ಜನರ ಸಮ್ಮುಖದಲ್ಲಿ ವೈಭವದ ವಿಟ್ಲಪಿಂಡಿ ಉತ್ಸವ ಸಂಪನ್ನ

ಚಿನ್ನದ ತೇರಿನಲ್ಲಿ ಬಾಲಕೃಷ್ಣನ ಮೆರವಣಿಗೆ…, ಗೊಲ್ಲರು ಮೊಸರಿನ ಕುಡಿಕೆಗಳನ್ನು ಒಡೆಯುತ್ತಾ ಸಾಗುವ ಸಾಂಪ್ರದಾಯಿಕ‌ ನಡೆ. ಕಣ್ಮಣಿಯಾದ ಕಡಗೋಲು ಕೃಷ್ಣ ಅಷ್ಟಮಠಗಳ ರಥ ಬೀದಿಯಲ್ಲಿ ತನ್ನ ಲೀಲೋತ್ಸವಗಳನ್ನು ತೋರಿಸುತ್ತಾ ಸಾಗಿಬಂದಾಗ ಭಕ್ತರಿಗೆ ಖುಷಿಯೋ ಖುಷಿ! ಹೌದು ಉಡುಪಿಯಲ್ಲಿ ಅಷ್ಟಮಿಯ ಪ್ರಯುಕ್ತ ನಡೆಯುವ ವಿಟ್ಲಪಿಂಡಿ ಮಹೋತ್ಸವ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು.

ಉಡುಪಿಯ ಅಷ್ಟಮಿ ಮಹೋತ್ಸವ ಜಗತ್ಪ್ರಸಿದ್ಧಿ ಪಡೆದಿದೆ. ಅದರಲ್ಲೂ ಈಗ ಪುತ್ತಿಗೆ ಮಠದ ಶ್ರೀಗಳು ವಿಶ್ವ ಪರ್ಯಾಯ ನಡೆಸುತ್ತಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಕೃಷ್ಣದೇವರ ಮೆರವಣಿಗೆ ನಡೆಸಲಾಗುವ ವಿಟ್ಲಪಿಂಡಿ ಮಹೋತ್ಸವವೆಂದರೆ ವೈಭವದ ಹಬ್ಬ. ಇಂದು ಚಿನ್ನದ ರಥದಲ್ಲಿ ಕೃಷ್ಣದೇವರ ಮೆರವಣಿಗೆ ನಡೆಯಿತು. ಚಾತುರ್ಮಾಸ್ಯ ಕಾಲವಾದ ಕಾರಣ ಉತ್ಸವ ಮೂರ್ತಿಯನ್ನು ಹೊರ ತರುವಂತಿಲ್ಲ, ಹಾಗಾಗಿ ಅಷ್ಟಮಿಗೆಂದೇ ತಯಾರಿಸಲಾಗುವ ಮಣ್ಣಿನ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ಅಷ್ಟಮಠಗಳ ಸುತ್ತಲೂ ರಥ ಬೀದಿಯಲ್ಲಿ ಕೊಂಡೊಯ್ಯಲಾಯಿತು. ಇದೇ ವೇಳೆ ನವರತ್ನ ರಥವನ್ನು ಕೂಡ ಎಳೆಯಲಾಯಿತು. ರಥೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಸಾಂಪ್ರದಾಯಿಕ ವೇಷದಾರಿ ಗೊಲ್ಲರು ಮೊಸರಿನ ಕುಡಿಕೆಗಳನ್ನು ಒಡೆಯುತ್ತಾ ಸಾಗಿದಂತೆ ಪ್ರದಕ್ಷಿಣಕಾರವಾಗಿ ಚಿನ್ನದ ರಥದಲ್ಲಿ ದೇವರ ಮೆರವಣಿಗೆ ನಡೆಯಿತು. ಪರ್ಯಾಯ ಪುತ್ತಿಗೆಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಪೂಜೆ ನಡೆಸಿ, ಬಳಿಕ ರಥದ ಮುಂದೆ ಭಕ್ತರೊಡನೆ ಸಾಗಿ ಬಂದರು. ಪುತ್ತಿಗೆ ಮಠದ ಕಿರಿಯ ಶ್ರೀಗಳು ಮತ್ತು ಭಂಡಾರ ಕೇರಿ ಮಠದ ಸ್ವಾಮೀಜಿ ಭಾಗಿಯಾದರು. ಹುಲಿ ವೇಷ ಸೇರಿದಂತೆ ಬಗೆ ಬಗೆಯ ವೇಷಧಾರಿಗಳು ಶ್ರೀ ಕೃಷ್ಣನ ಲೀಲೋತ್ಸವಕ್ಕೆ ಸಾಕ್ಷಿಯಾದರು. ಎಂಟು ಮಠಗಳ ಅಂಗಳದಲ್ಲಿ ನಿಂತ ಭಕ್ತರು ಕೃಷ್ಣ ಜಪ ಮಾಡುತ್ತಾ ಚಿನ್ನದ ರಥಕ್ಕೆ ಕೈಮುಗಿದರು.

ವಿಟ್ಲಪಿಂಡಿ ಕೃಷ್ಣನ ಹುಟ್ಟನ್ನು ಸಂಭ್ರಮಿಸುವ ಹಬ್ಬ. ಶುಕ್ರವಾರ ನಡುರಾತ್ರಿ 12.07 ಕ್ಕೆ ಅರ್ಘ್ಯಪ್ರದಾನ ನಡೆಸಿ ಬಳಿಕ ದೇವರಿಗೆ ಸಮರ್ಪಿಸಲಾದ ಉಂಡೆ ಚಕ್ಕುಲಿಗಳನ್ನು ಈ ವೇಳೆ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಯಿತು. ವಿಟ್ಲಪಿಂಡಿ ಮಹೋತ್ಸವದ ಪ್ರಯುಕ್ತ ಸಾವಿರಾರು ಮಂದಿಗೆ ಮಧ್ಯಾಹ್ನದ ಅನ್ನದಾಸೋಹ ನಡೆಯಿತು. ಒಂದೆಡೆ ಮುದ್ದುಕೃಷ್ಣರ ಕಲರವ, ಮತ್ತೊಂದೆಡೆ ನೂರೆಂಟು ಮುಖವರ್ಣಿಕೆಯ ವೇಷಗಳು, ಈ ಬಾರಿಯ ಹಬ್ವದ ಸಂಭ್ರಮಕ್ಕೆ, ನವಿರಾಗಿ ಸುರಿಯುತ್ತಿದ್ದ ತಿಳಿ ಮಳೆ ಕೂಡ ಅಡ್ಡಿಯಾಗಲಿಲ್ಲ. ರಥ ಬೀದಿಯ ಎರಡು ಕಡೆಗಳಲ್ಲಿ ಎಂದೆ ವಿಶೇಷ ಸ್ಪರ್ಧಾಕೂಟ ಆಯೋಜಿಸಲಾಗಿತ್ತು.

ಕಳೆದ ಎರಡು ದಿನಗಳಿಂದ ಉಡುಪಿಯ ಕಡಗೋಲು ಕೃಷ್ಣ ಲಕ್ಷಾಂತರ ಜನರ ಕಣ್ಮಣಿಯಾಗಿದ್ದಾನೆ. ಪರ್ಯಾಯ ಮಠಾಧೀಶರಿಂದ ಬಗೆ ಬಗೆಯ ಪೂಜೆಗಳನ್ನು ಸ್ವೀಕರಿಸಿ ಸಂಭ್ರಮಿಸಿದ್ದಾನೆ. ಕೃಷ್ಣದೇವರ ಕರುಣೆ ಸದಾ ನಮ್ಮ ಮೇಲಿರಲಿ ಎಂದು ಭಕ್ತರು, ಕೈಮುಗಿದು ಬೇಡಿಕೊಂಡು ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದಾರೆ.

Related posts

ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ನಿಷೇಧಾಜ್ಞೆ, ಸಂತೆ, ಜಾತ್ರೆ ನಿಷೇಧ ಆದೇಶ ಹಿಂದೆಗೆತ : ಉಡುಪಿ ಜಿಲ್ಲಾಧಿಕಾರಿ

ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಸವಾರ ಮೃತ್ಯು