ದೈತ್ಯ ಉದ್ಯಮಿ, ಸರಳತೆಯ ಹರಿಕಾರ ರತನ್ ಟಾಟಾ ಉಡುಪಿ ನಂಟು …..

ಉಡುಪಿ : ದೇಶದ ದಿಗ್ಗಜ ಉದ್ಯಮಿ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ಭಾರತದ ಮುಂಚೂಣಿ ಉದ್ಯಮಿಯಾಗಿದ್ದ ಅವರು ಸರಳತೆಗೆ ಹೆಸರುವಾಸಿಯಾಗಿದ್ದರು. ಸದಾ ಮಾಮೂಲಿ ದಿರಿಸು ತೊಡುವುದರ ಜೊತೆ ತಾನೊಬ್ಬ ಆಟೊಮೊಬೈಲ್ ಉದ್ಯಮಿಯಾಗಿದ್ದರೂ ಮಾಮೂಲಿ ಕಾರುಗಳಲ್ಲೇ ಓಡಾಡುತ್ತಿದ್ದರು. ಇಂತಹ ಉದ್ಯಮಿ ಉಡುಪಿ ಜೊತೆಗೆ ನಂಟು ಹೊಂದಿದ್ದರು.

ಇವತ್ತಿನ ಪರ್ಯಾಯ ಪುತ್ತಿಗೆ ಮಠಾಧೀಶರ ಆಹ್ವಾನದ ಮೇರೆಗೆ ಅವರು ಕೆಲವು ವರ್ಷಗಳ ಹಿಂದೆ ಉಡುಪಿಗೆ ಆಗಮಿಸಿದ್ದರು.
ಉಡುಪಿ ಸಮೀಪದ ಪುತ್ತಿಗೆ ಮಠದ ಮೂಲ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಹಿರಿಯ ಉದ್ಯಮಿ ಅಲ್ಲಿ ಕೆಲವು ಹೊತ್ತು ಕಳೆದಿದ್ದರು. ಇವರ ಆಗಮನದ ನಿರೀಕ್ಷೆಯಲ್ಲಿ ಸಾಕಷ್ಟು ಜನರು ಹಿರಿಯಡ್ಕ ಮೂಲಮಠದಲ್ಲಿ ಸೇರಿದ್ದರು. ಟಾಟಾ ಗತ್ತು ನೋಡಲು ಸೇರಿದ ಜನರಿಗೆ ಅವರ ಆಗಮನ ಕಂಡು ಆಶ್ಚರ್ಯ ಕಾದಿತ್ತು. ಯಾಕೆಂದರೆ ದೇಶದ ಶ್ರೀಮಂತ ಉದ್ಯಮಿಯಾಗಿದ್ದರೂ ಅತ್ಯಂತ ಸರಳ ರೀತಿಯಲ್ಲಿ ಬಂದು ಗ್ರಾಮೀಣ ಪರಿಸರದ ಮಠದಲ್ಲಿ ಸಮಯ ಕಳೆದಿದ್ದರು. ಮಠದಲ್ಲಿ ಮಾಮೂಲಿ ಜನರಂತೆಯೇ ಕಾಲ ಕಳೆದಿದ್ದರು.

ರತನ್ ಟಾಟಾ ಅಗಲಿಕೆ ವಿಷಯ ತಿಳಿದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ದೇಶ ಮೊದಲು ಎಂಬ ತತ್ವ ರತನ್ ಟಾಟಾ ಅವರದ್ದು. ಆದರ್ಶಮಯ ಜೀವನ ನಡೆಸಿದ ಅವರು ಮಠಕ್ಕೆ ಆಗಮಿಸಿ, ದೇವರ ದರ್ಶನ ಪಡೆದಿದ್ದರು.
ಭಗವದ್ಗೀತೆ ಬಗ್ಗೆ ತಮಗಿರುವ ಆದರ ವ್ಯಕ್ತಪಡಿಸಿದ್ದರು. ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರು ಅವರ ಆತ್ಮಕ್ಕೆ ಸದ್ಗತಿ ಕೊಡಲಿ ಎಂದು ಶ್ರೀಗಳು ತಮ್ಮ ಸಂತಾಪ ಸೂಚಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ