ಬೈಂದೂರು : ಬಜೆಟ್ ಅಧಿವೇಶನ ಮುಗಿದ ಕೂಡಲೇ ಮುಂದಿನ ಹಂತದ 94ಸಿ ಹಕ್ಕು ಪತ್ರ ವಿತರಣೆಗೆ ಬೇಕಾದ ತಯಾರಿ ಮಾಡಿಕೊಳ್ಳಿ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಂಡ್ಸೆ ಹೋಬಳಿಯ 94ಸಿ ಹಾಗೂ ಬಗರ್ ಹುಕುಂ ಕಡತಗಳ ಸಭೆಯಲ್ಲಿ ಮಾತನಾಡಿದ ಶಾಸಕರು, ವಂಡ್ಸೆ ವ್ಯಾಪ್ತಿಯ ಗ್ರಾಮಗಳಲ್ಲಿ 94ಸಿ ಅಡಿ ಅರ್ಜಿ ಹಾಕಿ ಭೂಮಿ ಹಕ್ಕಿಗಾಗಿ ಕಾಯುತ್ತಿರುವ ಅರ್ಹರನ್ನು ಹುಡುಕಿ ಅವರಿಗೆ ಹಕ್ಕು ಪತ್ರ ನೀಡಲಾಗುತ್ತಿದೆ ಎಂದರು.
ಈಗಾಗಲೇ 2023 ಏಪ್ರಿಲ್ ತಿಂಗಳಿನಿಂದ ಸುಮಾರು 275 ಕ್ಕೂ ಮಿಕ್ಕಿ 94ಸಿ ಹಕ್ಕು ಪತ್ರ ವಿತರಿಸಲಾಗಿದೆ, ಬಾಕಿ ಉಳಿದಿರುವ ಅರ್ಹ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಬಡವರಿಗೆ ಭೂ ಮಂಜೂರಾತಿ ಮಾಡುವ ಜವಾಬ್ದಾರಿ ಎಲ್ಲರ ಮೇಲೆ ಇರುವುದರಿಂದ ಬಜೆಟ್ ಅಧಿವೇಶನ ಮುಗಿದ ತಕ್ಷಣ ಇನ್ನುಳಿದ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸಬೇಕೆಂದು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಂಡ್ಸೆ ಹೋಬಳಿಯಲ್ಲಿ ನಮೂನೆ 50, 53 ಹಾಗೂ 57 ರಲ್ಲಿ ಸಾಕಷ್ಟು ಅರ್ಜಿಗಳು ವಿಲೇವಾರಿ ಬಾಕಿ ಇರುವುದು ಗಮನದಲ್ಲಿದ್ದು, ಎಲ್ಲಾ ಅರ್ಹ ಅರ್ಜಿಗಳನ್ನು ತಂತ್ರಾoಶದಲ್ಲಿ ಅಳವಡಿಸುವ ಕಾರ್ಯವನ್ನು ಗ್ರಾಮ ಆಡಳಿತ ಅಧಿಕಾರಿಗಳು ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ಕಾಲ ಮಿತಿಯಲ್ಲಿ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.