ಪಿಡಬ್ಲ್ಯುಡಿ ಗುತ್ತಿಗೆದಾರರ ಮನೆಗೆ ನುಗ್ಗಿದ ಡಕಾಯಿತಿ ಗ್ಯಾಂಗ್; ಮನೆಯವರನ್ನು ಕಟ್ಟಿ ಹಾಕಿ ಚೂರಿ ತೋರಿಸಿ ನಗ-ನಗದು ದರೋಡೆ

ಮಂಗಳೂರು : ನಗರದ ಹೊರವಲಯದಲ್ಲಿರುವ ಉಳಾಯಿಬೆಟ್ಟು ಎಂಬಲ್ಲಿ ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರ ಮನೆಗೆ ನುಗ್ಗಿದ ಡಕಾಯಿತಿ ಗ್ಯಾಂಗ್ ಒಂದು ಮನೆಯವರನ್ನು ಕಟ್ಟಿ ಹಾಕಿ ಚೂರಿ ತೋರಿಸಿ ನಗ-ನಗದು ದರೋಡೆ ನಡೆಸಿದೆ.

ಪಿಡಬ್ಲ್ಯುಡಿ ಗುತ್ತಿಗೆದಾರ ಉಳಾಯಿಬೆಟ್ಟುವಿನ ಪದ್ಮನಾಭ ಕೋಟ್ಯಾನ್ ಅವರ ಮನೆಯಲ್ಲಿ ಈ ದರೋಡೆ ಕೃತ್ಯ ನಡೆದಿದೆ‌. ಮುಖಕ್ಕೆ ಮಾಸ್ಕ್ ಧರಿಸಿದ್ದ 8-9 ಮಂದಿಯಿದ್ದ ತಂಡವೊಂದು ಶುಕ್ರವಾರ ರಾತ್ರಿ 8ಗಂಟೆಗೆ ಮನೆಗೆ ನುಗ್ಗಿದೆ. ಬಳಿಕ ಮನೆಯವರಿಗೆ ಚೂರಿ ತೋರಿಸಿ ಬೆದರಿಸಿದೆ‌. ಬಳಿಕ ಮನೆಯವರನ್ನೆಲ್ಲಾ ಬೆಡ್‌ಶೀಟ್ ನಲ್ಲಿ ಕಟ್ಟಿಹಾಕಿದೆ. ಈ ವೇಳೆ ಪದ್ಮನಾಭ ಕೋಟ್ಯಾನ್ ಅವರ ಬಲಗೈಗೆ ಚೂರಿಯಿಂದ ಇರಿಯಲಾಗಿದೆ.

ನಮ್ಮೊಂದಿಗೆ ಎಲ್ಲರೂ ಸಹರಿಸಬೇಕು‌. ಮನೆಯಲ್ಲಿ ಹಣವಿದೆಯೇ ಎಂದು ನೋಡುತ್ತೇವೆ ಎಂದು ದರೋಡೆಕೋರ ತಂಡ ಮನೆಯೆಲ್ಲಾ ಜಾಲಾಡಿ ಕೈಗೆ ಸಿಕ್ಕಿದ ಹಣ, ಒಡವೆಗಳನ್ನು ದೋಚಿ ಅಲ್ಲಿಂದ ಕಾಲ್ಕಿತ್ತಿದೆ‌. ಹೋಗುವಾಗ ಮನೆಯ ಮಾಲಕ ಪದ್ಮನಾಭ ಕೋಟ್ಯಾನ್ ಅವರ ವಾಹನವನ್ನು ತೆಗೆದುಕೊಂಡು ಹೋಗಿದೆ. ಆದರೆ ಮನೆಯಿಂದ ಸ್ವಲ್ಪ ದೂರದಲ್ಲಿ ವಾಹನವನ್ನು ಇಟ್ಟು ತಂಡ ಪರಾರಿಯಾಗಿದೆ‌. ಈ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿ; ಸವಾರ ಮೃತ್ಯು, ಸಹಸವಾರ ಗಂಭೀರ

ನಾಗರಿಕ ಸಮಿತಿಯ ನೇತೃತ್ವದಲ್ಲಿ ಅಪರಿಚಿತ ಶವದ ಅಂತ್ಯ ಸಂಸ್ಕಾರ

ರೈಲು ಚಲಿಸುತ್ತಿದ್ದ ವೇಳೆ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ಸಿಬ್ಬಂದಿ