ಬಂಟ್ವಾಳ ಬೋಳಂತೂರು ಗಣೇಶೋತ್ಸವ ಮೆರವಣಿಗೆ – ಮಸೀದಿಯಿಂದ ತಂಪು ಪಾನೀಯ, ಸಿಹಿತಿಂಡಿ ಹಂಚದಂತೆ ಪತ್ರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬೋಳಂತೂರು ಗಣೇಶೋತ್ಸವದಲ್ಲಿ ಕಳೆದ ವರ್ಷ ಮೆರವಣಿಗೆ ಸಂದರ್ಭ ಮುಸ್ಲಿಮರು ಸಿಹಿ ತಿಂಡಿ, ಪಾನೀಯ ನೀಡಿದ್ದರು. ಈ ರೀತಿಯ ಸೌಹಾರ್ದತೆ ಮೆರೆದಿರುವ ಸುದ್ದಿ ಕಳೆದ ವರ್ಷ ಆಗಿತ್ತು. ಆದರೆ ಈ ಬಾರಿ ಕಳೆದ ವರ್ಷದಂತೆ ಸಿಹಿ ತಿಂಡಿ, ಪಾನೀಯ ಹಂಚಬಾರದು ಎಂದು ಗಣೇಶೋತ್ಸವ ಆಯೋಜಿಸುವ ಸಮಿತಿಯವರೇ ಮುಸ್ಲಿಂ ಸಮುದಾಯದವರಿಗೆ ಪತ್ರ ಬರೆದಿರುವ ಕುರಿತು ವರದಿಯಾಗಿದೆ.

ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ ಮುಸಲ್ಮಾನ ಸಮಾಜ ಬಾಂಧವರು ನೀಡಿದ ಸಿಹಿ ತಿಂಡಿ ತಿಂದು ನಮ್ಮ ಮಕ್ಕಳು ಅಸ್ವಸ್ಥರಾಗಿದ್ದು, ಹಾಗಾಗಿ ಈ ಬಾರಿಯ ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ, ತಂಪು ಪಾನೀಯ ಹಂಚಬೇಡಿ ಎಂದು ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯಿಂದ ಬೋಳಂತೂರು ಮಸೀದಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.

ವೈರಲ್‌ ಪತ್ರದಲ್ಲಿರುವುದಾದರೂ ಏನು?

“ಕಳೆದ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಪಾನೀಯ ಮತ್ತು ಸಿಹಿತಿಂಡಿ ವಿತರಣೆಯನ್ನು ತಮ್ಮ ಸಮಾಜ ಬಾಂಧವರು ನೀಡಿರುತ್ತಾರೆ. ಅದನ್ನು ಸ್ವೀಕರಿಸಿದ ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿರುತ್ತಾರೆ. ಇದರಿಂದ ನಮ್ಮ ಸಾಮರಸ್ಯ ಕೆಡುತ್ತದೆ. ಇದರ ಮುಂಜಾಗೃತೆಗಾಗಿ ತಮ್ಮಲ್ಲಿ ಮನವಿ ಮಾಡುವುದೇನೆಂದರೆ, ಇನ್ನು ಮುಂದಕ್ಕೆ ಶೋಭಾಯಾತ್ರೆಯಲ್ಲಿ ತಮ್ಮ ಸಮಾಜ ಬಾಂಧವರು ಯಾವುದೇ ಪಾನೀಯ ಹಾಗೂ ತಿಂಡಿ ತಿನಸುಗಳನ್ನು ನೀಡಬಾರದಾಗಿ ಈ ಮೂಲಕ ವಿನಂತಿಸುತ್ತೇವೆ. ಆದ್ದರಿಂದ ನಮ್ಮ ಶೋಭಾಯಾತ್ರೆಗೆ ನಿಮ್ಮ ಎಲ್ಲಾ ಸಮಾಜ ಬಾಂಧವರು ಮೇಲಿನ ವಿಷಯಕ್ಕೆ ಸಹಕರಿಸುವಂತೆ ನಿಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇವೆ” ಎಂದು ಬರೆಯಲಾಗಿದೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ

ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಗೆ ಭಕ್ತರಿಂದ 1.5 ಲಕ್ಷ ಚೆಂಡು ಮಲ್ಲಿಗೆ ಸಮರ್ಪಣೆ