ಉಡುಪಿ : ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕರಾವಳಿ ಸೇರಿದಂತೆ 12 ಜಿಲ್ಲೆಗಳಿಗೆ 300 ಕಾಲುಸಂಕಗಳಿಗೆ ಅನುದಾನ ಮಂಜೂರು ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಉಡುಪಿ ಜಿಲ್ಲೆಯ ಐವರು ಶಾಸಕರು 500 ಕಾಲುಸಂಕಗಳಿಗೆ ಬೇಡಿಕೆ ಇಟ್ಟಿದ್ದು, ಉಡುಪಿಯೂ ಸೇರಿದಂತೆ ಎಲ್ಲಾ ಜಿಲ್ಲೆಗಳ ಕಾಲುಸಂಕಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು ಎಂದರು.
ಸರಕಾರದ ಗ್ಯಾರಂಟಿ ಯೋಜನೆಗಳಿಂದ ಲೋಕೋಪಯೋಗಿ ಇಲಾಖೆಗೆ ಯಾವುದೇ ಹಣಕಾಸಿನ ತೊಂದರೆ ಆಗಿಲ್ಲ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಅನುದಾನವನ್ನು ನೀಡಲಿದ್ದೇವೆ. ಗ್ಯಾರಂಟಿಗೆ ಬಳಕೆಯಾಗುವ ಅನುದಾನ ಹಾಗು ಅಭಿವೃದ್ಧಿ ಕಾರ್ಯದ ಅನುದಾನ ಪ್ರತ್ಯೇಕವಿದೆ ಎಂದರು.
ಉಡುಪಿಯಲ್ಲಿ ಈಗಿರುವ ಪ್ರವಾಸಿ ಮಂದಿರದಲ್ಲಿ ಸ್ಥಳವಕಾಶದ ಕೊರತೆ ಇರುವುದರಿಂದ ಜಿಲ್ಲಾ ಕೇಂದ್ರದಲ್ಲಿ 20 ಕೊಠಡಿಗಳ ಹೆಚ್ಚುವರಿ ಪ್ರವಾಸಿ ಮಂದಿರವನ್ನು ನಿರ್ಮಿಸಲಾಗುತ್ತದೆ ಎಂದರು. ಸಿಎಂ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂಬ ಸಚಿವ ರಾಜಣ್ಣ ಅವರ ಆರೋಪಕ್ಕೆ ಅದನ್ನೆಲ್ಲಾ ಉಡುಪಿ – ಮಂಗಳೂರಿನಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಖುದ್ದು ಅವರೊಂದಿಗೆ ಮಾತನಾಡುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಯಾವುದೇ ಸಮಾವೇಶ ಪ್ರಸ್ತಾಪ ಸದ್ಯಕ್ಕಿಲ್ಲ. ಭವಿಷ್ಯದಲ್ಲಿ ನಡೆಯಬಹುದು ಎಂದರು.