ಶಿರ್ವ : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೋರ್ವರಿಗೆ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿ ಸ್ಕೈಫ್ ಆಫ್ ಕನೆಕ್ಟ್, ವಾಟ್ಸ್ ಆಪ್ ವೀಡಿಯೋ ಮೂಲಕ ಅರೆಸ್ಟ್ ಎಂದು ಬೆದರಿಸಿ ರೂ. 11,87,463 ಹಣವನ್ನು ಮೋಸದಿಂದ ವಂಚಿಸಿದ ಘಟನೆ ನಡೆದಿದೆ.
ಪ್ರಮೀಳಾ (39) ಅವರ ಮನೆಯಲ್ಲಿರುವಾಗ ಅ. 25 ರಂದು ಬೆಳಗ್ಗೆ ಓರ್ವ ವ್ಯಕ್ತಿ ಕರೆಮಾಡಿ ವಾಂಗ್ ಮಿಂಗ್ ಜಿ ಎಂಬವರು ನಿಮ್ಮ ಹೆಸರಿಗೆ ಪಾರ್ಸೆಲ್ ಕಳುಹಿಸಿದ್ದು ಅದರಲ್ಲಿ 5 ಕೆಜಿ ಬಟ್ಟೆ, 8 ಐಸಿಐಸಿಐ ಕ್ರೆಡಿಟ್ ಕಾರ್ಡ್ ಮತ್ತು 700 ಗ್ರಾಂ ಎಂಡಿಎಂಎ ಡ್ರಗ್ಸ್ ಇದೆ ಎಂದು ತಿಳಿಸಿ ನಿಮ್ಮ ಮೇಲೆ ಕೇಸು ದಾಖಲಾಗಿರುವುದಾಗಿ ತಿಳಿಸಿದ್ದಾನೆ.
ಕರೆ ಮಾಡಿದ ವ್ಯಕ್ತಿ ತಾನು ಮುಂಬೈ DTDC ಸೀನಿಯರ್ ಎಕ್ಸಿಕ್ಯೂಟಿವ್ ಮನೀಶ್ ಕುಮಾರ್ ಎಂದು ಪರಿಚಯಿಸಿಕೊಂಡು ಸ್ಕೈಫ್ ವಿಡಿಯೋ ಕಾಲ್‌ಗೆ ಕನೆಕ್ಟ್ ಆಗುವಂತೆ ತಿಳಿಸಿ, ಬಾಂಬೆ ಸೈಬರ್ ಕ್ರೈಂ ಬ್ರಾಂಚ್‌ಗೆ ಕಾಲ್ ಕನೆಕ್ಟ್ ಮಾಡಿರುವುದಾಗಿ ತಿಳಿಸಿದ್ದಾನೆ. ಪ್ಲೇಸ್ಟೋರ್‌ನಲ್ಲಿ ಸ್ಕೈಫ್ ಆಪ್ ಡೌನ್‌ಲೋಡ್ ಮಾಡಿ MCCDEPT2708@gov.in ಲಿಂಕ್ ಸರ್ಚ್ ಮಾಡುವಂತೆ ತಿಳಿಸಿದ್ದಾನೆ. ವೀಡಿಯೋ ಕಾಲ್‌ನಲ್ಲಿ ಚಾಟ್ ಮಾಡುತ್ತಾ ಆಧಾರ್ ಕಾರ್ಡ್ ಕೇಳಿದ್ದು, ಪ್ರಮೀಳಾ ಅವರು ಆಧಾರ್ ಕಾರ್ಡ್ ಕಳುಹಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಪ್ರಮೀಳಾ ಅವರ ಹೆಸರು, ವಿಳಾಸ ಹಾಗೂ ಆಧಾರ್ ನಂಬರ್ ಇರುವ ಅರೆಸ್ಟ್ ಆರ್ಡರ್ ಕಳುಹಿಸಿ ಅರೆಸ್ಟ್ ಎಂದು ಬೆದರಿಸಿದ್ದಾನೆ.
ನಿನ್ನ ಹೆಸರಿನ ಅಕೌಂಟ್ ನಂಬ್ರ ಹಾಗೂ ಅದರಲ್ಲಿ ಎಷ್ಟು ಹಣ ಇದೆ ಎಂದು ಕೇಳಿದಾಗ ಹೆದರಿದ ಮಹಿಳೆ ಅಳುತ್ತಾ ತನ್ನ ಆಕೌಂಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಆ ವ್ಯಕ್ತಿ ವಾಟ್ಸ್ ಆಪ್ ವಿಡಿಯೋ ಮೂಲಕ ಅರೆಸ್ಟ್ ಎಂದು ಬೆದರಿಸಿ ಮಹಿಳೆಯ ರೂ. 11,87,463 ಹಣವನ್ನು ಮೋಸದಿಂದ ಪಡೆದು ವಂಚಿಸಿದ್ದಾನೆ ಎಂದು ಮಹಿಳೆ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.