ಮುಳುಗಡೆ ಮುಂದುವರೆಸಿದ ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ.. ಹಲವೆಡೆ ರಸ್ತೆ ಸಂಚಾರ ಬಂದ್

ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಶೀರಾಡಿ ಘಾಟಿ ಪ್ರದೇಶ ಮತ್ತು ಕುಮಾರ ಪರ್ವತ ಶ್ರೇಣಿಯ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಇಲ್ಲಿನ ಸ್ನಾನಘಟ್ಟದಲ್ಲಿ ಐದನೇ ದಿನವೂ ಮುಳುಗಡೆ ಮುಂದುವರೆದಿದೆ.

ಪಶ್ಚಿಮ ಘಟ್ಟ ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಅತ್ಯಧಿಕ ಪ್ರಮಾಣದ ನೀರು ಕುಮಾರಧಾರ ನದಿಯಲ್ಲಿ ಹರಿದು ಬರುತ್ತಿದ್ದು ಕಳೆದ ಐದು ದಿನಗಳಿಂದ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆ‌ಗೊಂಡಿದೆ. ನಿನ್ನೆ ರಾತ್ರಿಯಿಂದ ನೀರಿನ ಮಟ್ಟ ಏರಿಕೆಯಾಗಿದ್ದು ಸುಬ್ರಹ್ಮಣ್ಯ ಪಂಜ ರಸ್ತೆಗೆ ನೆರೆನೀರು ಬಂದಿದೆ. ಸ್ಥಳದಲ್ಲಿ ಪೋಲಿಸ್, ಗೃಹರಕ್ಷಕ ದಳ, ದೇಗುಲದ ಸುರಕ್ಷತಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಯಾತ್ರಾರ್ಥಿಗಳಿಗೆ ನದಿ ತೀರಕ್ಕೆ ಹೋಗದಂತೇ ಎಚ್ಚರಿಕೆ ಸಂದೇಶಗಳನ್ನು ನೀಡಲಾಗುತ್ತಿದೆ. ತೀರ್ಥಸ್ನಾನ ನೆರವೇರಿಸಲು ಭಕ್ತರಿಗೆ ತೊಂದರೆಯಾಗಿದ್ದು, ನದಿ ನೀರನ್ನು ಡ್ರಮ್ ಮೂಲಕ ಸಂಗ್ರಹಿಸಿ ಭಕ್ತರಿಗೆ ತೀರ್ಥಸ್ನಾನಕ್ಕೆ ಅವಕಾಶ ನೀಡಲಾಗಿದೆ.

ಜಿಲ್ಲೆಯಾದ್ಯಂತಾ ಭಾರೀ ಮಳೆಯ ಹಿನ್ನೆಲೆಯಲ್ಲಿ ಇಂದು ಕೂಡ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಭಾರೀ ಮಳೆಯ ಹಿನ್ನಲೆಯಲ್ಲಿ ಕರಾವಳಿಯ ಬಹುತೇಕ ಎಲ್ಲಾ ನದಿಗಳು ತುಂಬಿ ಹರಿಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ರಜೆ ನೀಡಿರುವ ಸದ್ರಿ ತಾಲೂಕುಗಳಲ್ಲಿ ಸಂಬಂಧಪಟ್ಟ ವಿದ್ಯಾ ಸಂಸ್ಥೆಗಳು ಅವಕಾಶವಿದ್ದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅನ್ ಲೈನ್ ತರಗತಿಯನ್ನು ನಡೆಸಬಹುದರಾಗಿರುತ್ತದೆ ಎಂದೂ ತಿಳಿಸಿದೆ.

ಇನ್ನೂ ದುರ್ಬಲ, ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ ಪ್ರವಚನಗಳಿಗೆ ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಮುಖ್ಯಸ್ಥರು ಕಟ್ಟಡಗಳ ಸುಸ್ಥಿತಿಯ ಬಗ್ಗೆ ಗಮನಹರಿಸುವಂತೇ ಮತ್ತು ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು, ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸುವುದು. ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಹಾಗೂ ವಿದ್ಯುತ್ ಕಂಬ, ತಂತಿ ಸಮೀಪ ಹೋಗದಂತೆ ಎಚ್ಚರಿಕೆ ವಹಿಸುವಂತೆ ಆದೇಶ ನೀಡಲಾಗಿದೆ. ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಕಂಟ್ರೋಲ್ ರೂಂ 1077/2442590 ದೂರವಾಣಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ರಸ್ತೆ ಸಂಚಾರಗಳು ಬಂದ್

ದಿನಾಂಕ 18.07.2024 ರಂದು ಹಾಸನ ಜಿಲ್ಲಾ ದಂಡಾಧಿಕಾರಿಯವರು ಹೊರಡಿಸಿರುವ ಅದೇಶದಂತೆ, ರಾಷ್ಟ್ರೀಯ ಹೆದ್ದಾರಿ-48(75) ರ, ಬೆಂಗಳೂರು-ಮಂಗಳೂರು ರಸ್ತೆಯ, ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೊಡ್ಡತಪ್ಪಲು ಗ್ರಾಮದ ಬಳಿ ಗುಡ್ಡಕುಸಿತ ಉಂಟಾಗಿ, ಹೆದ್ದಾರಿ ಸಂಚಾರಕ್ಕೆ ಅಡಚಣೆಯಾಗಿರುತ್ತದೆ. ಆದ್ದರಿಂದ ಸದರಿ ರಸ್ತೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಸಾರ್ವಜನಿಕ ಹಿತದೃಷ್ಟಿಯಿಂದ. ಮುಂಜಾಗ್ರತಾ ಕ್ರಮವಾಗಿ ದಿನಾಂಕ:18/07/2024 ರಿಂದ ಮುಂದಿನ ಆದೇಶದವರೆಗೆ, ಎಲ್ಲಾ ರೀತಿಯ ವಾಹನ ಸಂಚಾರವನ್ನು (ತುರ್ತು ಪರಿಸ್ಥಿತಿ ವಾಹನ ಹೊರತುಪಡಿಸಿ) ನಿರ್ಬಂಧಿಸಲಾಗಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಖಾಂತರ ಬೆಂಗಳೂರಿನಿಂದ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ವಾಹನಗಳು, ಬದಲಿ ರಸ್ತೆಯಾದ ಹಾಸನ-ಬೇಲೂರು-ಮೂಡಿಗೆರೆ ಚಾರ್ಮಾಡಿ ಘಾಟ್ ಮಾರ್ಗವನ್ನು ಬಳಸಬಹುದಾಗಿ ತಿಳಿಸಲಾಗಿದೆ ಮತ್ತು
ದಿನಾಂಕ 18.07.2024 ರಂದು, ಕೊಡಗು ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿರುವ ಆದೇಶದಂತೆ. ರಾಷ್ಟ್ರೀಯ ಹೆದ್ದಾರಿ – 275ರಲ್ಲಿ, ಸಂಪಾಜೆಯಿಂದ ಮಡಿಕೇರಿ ನಡುವಿನ ಕರ್ತೋಜಿ ಎಂಬಲ್ಲಿ ಭೂಕುಸಿತ/ಗುಡ್ಡಕುಸಿತ ಉಂಟಾಗುವ ಸಂಭವವಿರುವುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ದಿನಾಂಕ 18.07.2024 ರಿಂದ 22.07.2024ರ ವರೆಗೆ, ಪ್ರತಿ ದಿನ ರಾತ್ರಿ 8.00 ಗಂಟೆಯಿಂದ, ಮರುದಿನ ಬೆಳಗ್ಗೆ 6.00 ಗಂಟೆಯವರೆಗೆ ಸದ್ರಿ ಮಾರ್ಗವಾಗಿ ಸಾಗುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು (ತುರ್ತು ಸೇವೆಗಳ ಮತ್ತು ಪ್ರಕೃತಿ ವಿಕೋಪ ಸಂಬಂಧಿತ ಕಾರ್ಯದ ನಿಮಿತ್ತ ಕಾರ್ಯನಿರ್ವಹಿಸುವ ಅಧಿಕಾರಿ / ಸಿಬ್ಬಂದಿಗಳು ಸಂಚರಿಸುವ ವಾಹನಗಳನ್ನು ಹೊರತುಪಡಿಸಿ) ನಿರ್ಬಂಧಿಸಲಾಗಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಖಾಂತರ, ಮೈಸೂರು, ಬೆಂಗಳೂರು ಮುಂತಾದ ಸ್ಥಳಗಳಿಗೆ ಸಂಚರಿಸುವ ವಾಹನಗಳು, ಬದಲಿ ಮಾರ್ಗವಾಗಿ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ ಮಾರ್ಗವನ್ನು ಬಳಸಬಹುದಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶವನ್ನು ಹೊರಡಿಸಿದ್ದಾರೆ.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ