ಮರದ ದಿಮ್ಮಿಗೆ ಮೀನುಗಾರಿಕಾ ಬೋಟ್ ಡಿಕ್ಕಿ : ಅಪಾರ ಹಾನಿ

ಗಂಗೊಳ್ಳಿ : ದುರಸ್ತಿಗೆಂದು ಹೋಗಿದ್ದ ಮಲ್ಪೆ ಬಂದರಿನ ಮೀನುಗಾರಿಕಾ ದೋಣಿ ಮರದ ದಿಮ್ಮಿಗೆ ಡಿಕ್ಕಿ ಹೊಡೆದು ದೋಣಿ ಭಾಗಶಃ ಮುಳುಗಡೆಯಾಗಿ 65 ಲಕ್ಷ ರೂ. ನಷ್ಟವಾದ ಘಟನೆ ಗಂಗೊಳ್ಳಿ ಅಳಿವೆ ಸಮೀಪ ಜನವರಿ 4ರಂದು ಸಂಭವಿಸಿದೆ.

ಸಂಜಾತ ಎಂಬವರ ಒಡೆತನದ ತವಕಲ್ ಎಂಬ ಹೆಸರಿನ ಮೀನುಗಾರಿಕೆ ದೋಣಿಯನ್ನು ಜ. 4ರ ಶನಿವಾರ ಸಂಜೆ ಸುಮಾರು 5.30ಕ್ಕೆ ಮೀನುಗಾರರಾದ ರವಿ ಸಾಲ್ಯಾನ್ ಮತ್ತು ಹರೀಶ್ ಮಲ್ಪೆ ಬಂದರಿನಿಂದ ಗಂಗೊಳ್ಳಿಗೆ ದುರಸ್ತಿಗಾಗಿ ತೆಗೆದುಕೊಂಡು ಹೋಗುತ್ತಿದ್ದರು.

ಇದೇ ಸಂದರ್ಭದಲ್ಲಿ ಸಂಜೆ 7.30ರ ಸುಮಾರಿಗೆ ಗಂಗೊಳ್ಳಿಯಿಂದ ಎರಡು ನಾಟಿಕಲ್ ಮೈಲು ದೂರದಲ್ಲಿ ಸಾಗುತ್ತಿದ್ದಾಗ ದೊಡ್ಡ ಮರದ ದಿಮ್ಮಿ ದೋಣಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ದೋಣಿಯ ಮುಂಭಾಗದ ಕೆಳಭಾಗಕ್ಕೆ ಹಾನಿಯಾಗಿ ನೀರು ನುಗ್ಗಿತ್ತು. ನೀರಿನ ಒಳ ಹರಿವು ಹೆಚ್ಚಾಗಿ ಬೋಟು ಮುಳುಗುವ ಸಂಭವ ಇರುವುದನ್ನು ಗಮನಿಸಿ, ರವಿ ಸಾಲ್ಯಾನ್ ದುರಸ್ತಿ ಕೆಲಸ ಮಾಡುವ ಗಂಗೊಳ್ಳಿ ಪುಂಡಲೀಕ ಹರಾಟೆ ಅವರನ್ನು ಸಂಪರ್ಕಿಸಿದಾಗ ಅವರು ಜಲರಾಣಿ ಎಂಬ ಹೆಸರಿನ ದೋಣಿಯನ್ನು ಸಹಾಯಕ್ಕಾಗಿ ಕಳುಹಿಸಿದರು. ಜಲರಾಣಿ ದೋಣಿ ಬಂದ ಬಳಿಕ ರವಿ ಸಾಲ್ಯಾನ್ ಮತ್ತು ಹರೀಶ್ ಅವರನ್ನು ರಕ್ಷಿಸಿ, ತವಕಲ್ ಮೀನುಗಾರಿಕೆ ದೋಣಿಯನ್ನು ಜಲರಾಣಿ ದೋಣಿಯೊಂದಿಗೆ ಕಟ್ಟಿ ದುರಸ್ತಿ ಮಾಡುವ ಸ್ಥಳಕ್ಕೆ ತರಲಾಗಿದೆ.

ಈ ಘಟನೆಯಿಂದ ಯಾವುದೇ ಜೀವಹಾನಿ ಆಗಲಿಲ್ಲ. ಮೀನುಗಾರಿಕಾ ದೋಣಿ ಸಂಪೂರ್ಣ ಹಾನಿಯಾಗಿ ಸುಮಾರು 65 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.

Related posts

ದೇಶದ ಸೈನಿಕರ ಶೌರ್ಯ, ಪರಾಕ್ರಮಕ್ಕೆ ಅಭಿನಂದನೆ – ಪರ್ಯಾಯ ಪುತ್ತಿಗೆ ಶ್ರೀ

ಸುಹಾಸ್‌ ಶೆಟ್ಟಿ ಪ್ರಕರಣ ಎನ್‌ಐಎಗೆ ವಹಿಸಿ : ಹಿಂದೂ ಮಹಾಸಭಾ

ಹಿರಿಯ ನಾದಸ್ವರ ವಾದಕ ಅಲೆವೂರು ಬೊಗ್ರ ಶೇರಿಗಾರ್ ನಿಧನ