ಉಳ್ಳಾಲ ಕ್ಷೇತ್ರಕ್ಕೆ 24×7 ಕುಡಿಯುವ ನೀರು ಯೋಜನೆಯ ಪ್ರಥಮ ಹಂತ ಶೀಘ್ರ ಉದ್ಘಾಟನೆ : ಯು.ಟಿ.ಖಾದರ್

ಮಂಗಳೂರು : ಚುನಾವಣೆ ಸಂದರ್ಭ ಕ್ಷೇತ್ರದ ಜನರಿಗೆ 24×7 ಕುಡಿಯುವ ನೀರು ಒದಗಿಸುವ ಯೋಜನೆ ಮಾಡುವ ಮಾತು ಕೊಟ್ಟಿದ್ದೆ. ಅದರಂತೆ 249 ಕೋಟಿ ರೂ. ವೆಚ್ಚದಲ್ಲಿ ಉಳ್ಳಾಲಕ್ಕೆ ಪ್ರತ್ಯೇಕ ನೀರಿನ ವ್ಯವಸ್ಥೆಯ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಥಮ ಹಂತದ ಉದ್ಘಾಟನೆ ಹಾಗೂ 2ನೇ ಹಂತದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರ ಮೂಲಕ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವನಾಗಿದ್ದಾಗ ಬಿಡುಗಡೆಯಾದ 249 ಕೋಟಿ ರೂ.ಗಳಲ್ಲಿ ಸಜಿಪದಲ್ಲಿ ಜಾಕ್ವೆಲ್‌ನಿಂದ ಕೊಣಾಜೆಗೆ ನೀರನ್ನು ಹಾಯಿಸಿ ಶುದ್ಧೀಕರಣಗೊಂಡು ಪೈಪ್ಲೈನ್ ಮೂಲಕ ಉಳ್ಳಾಲ, ತಲಪಾಡಿವರೆಗೆ ಹರಿಸುವ ಕಾಮಗಾರಿ ಪೂರ್ಣಗೊಂಡಿದೆ. ಚೆಂಬುಗುಡ್ಡೆಯಲ್ಲಿ ಕ್ಷೇತ್ರದ ನಗರ ಭಾಗಕ್ಕೆ ನೀರು ಪೂರೈಸಲು 70 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣವಾಗಿದೆ. 2ನೇ ಹಂತದಲ್ಲಿ ಗ್ರಾಮೀಣ ಮಟ್ಟಕ್ಕೂ ನೀರು ಪೂರೈಕೆಗಾಗಿ ಮುಖ್ಯ ಟ್ಯಾಂಕ್‌ಗೆ ನೀರು ಹರಿಸಿ ಅಲ್ಲಿಂದ ಸಣ್ಣ ಟ್ಯಾಂಕ್‌ಗಳಿಂದ ಮನೆಗಳಿಗೆ ಸಂಪರ್ಕ ನೀಡುವ ಕೆಲಸ ಆಗಲಿದೆ ಇದಕ್ಕಾಗಿ 386 ಕೋಟಿ ರೂ.ಗಳ ಅನುದಾನ ಬಿಡುಗಡೆ ಆಗಿದೆ ಎಂದು ಅವರು ಹೇಳಿದರು.

ಇದರ ಜೊತೆಯಲ್ಲಿ ರಸ್ತೆ ಹಾಗೂ ವಿದ್ಯುತ್, ಶಿಕ್ಷಣಕ್ಕೆ ಅನುದಾನ ಮೀಸಲಿಡಲಾಗಿದೆ. ಇದಲ್ಲದೆ, ಅಬ್ಬಕ್ಕ ಭವನ ಹಾಗೂ ಬ್ಯಾರಿ ಭವನ ಕೆಲಸ ಅಗಲಿದೆ ಎಂದು ಅವರು ಹೇಳಿದರು.

ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಸಭೆ, ಚರ್ಚೆ ನಡೆದಿದೆ. ಸಮುದ್ರ ಕಿನಾರೆಯಲ್ಲಿ ಶಾಶ್ವತ ಯೋಜನೆ ಮೂಲಕ ಮುಂಬೈ, ಚೆನ್ನೈ ಹಾಗೂ ಕೇರಳದಲ್ಲಿ ಮಾಡಿರುವ ಯೋಜನೆ ಫಲಪ್ರದವಾಗಿಲ್ಲ. ಹಾಗಾಗಿ ತಜ್ಞರನ್ನು ಕರೆಸಿಕೊಂಡು ಈ ಕುರಿತು ಸಭೆಯಲ್ಲಿ ಸಲಹೆ ನೀಡಲಾಗಿದೆ. ಕಳೆದ ವರ್ಷ ಮನೆ ನಾಶ ಆಗದ ರೀತಿಯಲ್ಲಿ ಕ್ರಮ ವಹಿಸಲಾಗಿತ್ತು. ಈ ಬಾರಿಯೂ ಅಪಾಯಕಾರಿ ಜಾಗವನ್ನು ಗುರುತಿಸಿ ಕ್ರಮ ವಹಿಸಲು ಮುಂದಾಗಿದ್ದರೂ ಯಾವ ಜಾಗದಲ್ಲಿ ಕಡಲ್ಕೊರೆತ ಸಂಭವಿಸುತ್ತದೆ ಎಂದು ಮುಂಚಿತವಾಗಿ ಹೇಳಲು ಸಾಧ್ಯವಾಗದೆ ತೊಂದರೆಯಾಗುತ್ತಿದೆ. ಬಟ್ಟಂಪಾಡಿಗೆ ಸಂಬಂಧಿಸಿ 2 ಪ್ರಸ್ತಾವ ಸಿದ್ಧವಾಗಿದೆ ಎಂದರು.

ಮುಂಬೈಯಿಂದ ಕೊಚ್ಚಿಗೆ ಕ್ರೂಸ್ – ಸೋಮೇಶ್ವರದಲ್ಲಿ ಬಂದರು ನಿರ್ಮಾಣ

ಕೇಂದ್ರ ಸರಕಾರ ಮಂಬೈನಿಂದ ಕೊಚ್ಚಿಗೆ ಕ್ರೂಸ್ (ಪ್ರಯಾಣಿಕ ಹಡಗು ಸೇವೆ) ಆರಂಭಿಸಲಿದೆ. ಸೋಮೇಶ್ವರದಲ್ಲಿ ನಿಲುಗಡೆಗೆ ಮಾಡಲು ಪೂರಕವಾದ ಬಂದರು ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಪ್ರದೇಶ ಪ್ರಯಾಣಿಕ ಹಡಗು ತಂಗುದಾಣ ನಿರ್ಮಿಸಲು ಪ್ರಶಾಂತವಾದ ಹಾಗೂ ಪ್ರವಾಸಿ ತಾಣವಾಗಿ ರೂಪಿಸಲು ಉತ್ತಮ ಸ್ಥಳವಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಆಗಬೇಕಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.

Related posts

ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆ

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours