ಉಡುಪಿ : ಉಡುಪಿ ಜಿಲ್ಲಾ ಕೃಷಿಕ ಸಂಘ ಜಿಲ್ಲೆಯಲ್ಲಿರುವ ರೈತರ ಕೃಷಿ ಪಂಪ್‌ಸೆಟ್‌ಗಳ ಗಣತಿಗಾಗಿ ಮಾತ್ರವೇ ಆಧಾರ್ ಜೋಡಣಿಗೆ ಒಪ್ಪಿಗೆ ನೀಡುತ್ತಿದ್ದೇವೆಯೇ ಹೊರತು ಬೇರೆ ಯಾವುದೇ ಉದ್ದೇಶಕ್ಕೂ ಒಪ್ಪಿಗೆ ಇಲ್ಲ. ಮೆಸ್ಕಾಂ ಹಾಗೂ ಸರಕಾರ ರೈತರ ಆಧಾರ್ ಲಿಂಕ್ ಅನ್ಯ ಉದ್ದೇಶಕ್ಕೆ ಬಳಸಿಕೊಂಡರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಕೃಷಿಕ ಸಂಘವು ಎಚ್ಚರಿಕೆ ನೀಡಿದೆ. ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಕುಂಜಿಬೆಟ್ಟು ಮೆಸ್ಕಾಂ ಅಧೀಕ್ಷಕರ ಕಚೇರಿಯಲ್ಲಿ ರೈತರು ಮತ್ತು ಮೆಸ್ಕಾಂ ಅಧಿಕಾರಿಗಳೊಂದಿಗೆ ನಡೆದ ಸಂವಾದದಲ್ಲಿ ಮುಖಂಡರು ಎಚ್ಚರಿಕೆ ನೀಡಿದರು.
ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಮಾತನಾಡಿ, ಆಧಾರ್ ಲಿಂಕ್ ಕೇವಲ ಪಂಪ್‌ಗಳ ಲೆಕ್ಕಕ್ಕಾಗಿ ಮಾತ್ರ. ಲಿಂಕ್ ಮಾಡಿದ ಮೇಲೆ ಇಲಾಖೆ ಅನ್ಯ ಉದ್ದೇಶಕ್ಕೆ ಬಳಸಿಕೊಂಡರೆ ರೈತರಿಗೆ ಕಿರಿಕಿರಿ ಮಾಡಿದರೆ ಸಹಿಸುವುದಿಲ್ಲ ಎಂದರು.
ಉಡುಪಿ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ದಿನೇಶ್ ಉಪಾಧ್ಯ ಮಾತನಾಡಿ, ಪಂಪ್‌ಗಳ ಗಣತಿಗಾಗಿ ಲಿಂಕ್ ಮಾಡಲಾಗುತ್ತಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಮೆಸ್ಕಾಂನಿಂದ ಫೋನ್ ಕರೆ ಬಂದರೆ ಆನ್‌ಲೈನ್ ವಂಚನೆಯ ಭೀತಿ ಹಿನ್ನೆಲೆಯಲ್ಲಿ ನೇರವಾಗಿ ಮೆಸ್ಕಾಂ ಕಚೇರಿಗೆ ಬಂದು ಲಿಂಕ್ ಮಾಡಿ ಎಂದರು.
ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ಉಡುಪಿ ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಸನ್ನ ಕುಮಾರ್, ಉಪನಿಯಂತ್ರಣಾಧಿಕಾರಿ ರಮೇಶ್ ಉಪಸ್ಥಿತರಿದ್ದರು.