ಫೆ.7ರಿಂದ ಉಡುಪಿಯಲ್ಲಿ ಮಹಿಳಾ ಉದ್ಯಮಿಗಳ ‘ಪವರ್ ಪರ್ಬ’

ಉಡುಪಿ : ಉಡುಪಿಯ ಮಹಿಳಾ ಉದ್ದಿಮೆದಾರರ ಸಂಘಟನೆ ‘ಪವರ್’ ವತಿಯಿಂದ ಮಹಿಳಾ ಉದ್ಯಮಿಗಳ ಉತ್ಪನ್ನಗಳು ಹಾಗೂ ಕೌಶಲ್ಯಗಳಿಗೆ ವೇದಿಕೆಯಾದ ‘ಪವರ್ ಪರ್ಬ’ ಇದೇ ಫೆ. 7, 8 ಮತ್ತು 9ರಂದು ಉಡುಪಿಯ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ತನುಜಾ ಮಾಬೆನ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳು, ಅವರ ಸಂಸ್ಥೆಯ ಸೇವೆ, ಕೌಶಲ್ಯ, ಪಾಂಡಿತ್ಯವನ್ನು ಗ್ರಾಹಕರೆದುರು ಪ್ರದರ್ಶಿಸಿ ಅವರನ್ನು ಒಗ್ಗೂಡಿಸುವುದು ಪವರ್ ಪರ್ಬದ ಕಲ್ಪನೆಯಾಗಿದೆ ಎಂದರು.

ಫೆ. 7ರಂದು ಸಂಜೆ 4.30ಕ್ಕೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಪವರ್ ಪರ್ಬಕ್ಕೆ ಚಾಲನೆ ನೀಡಲಿದ್ದಾರೆ. ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎಮ್‌ಎಸ್‌ಎಮ್‌ಇ ಜಂಟಿ ನಿರ್ದೇಶಕ ಕೆ. ಸಾಕ್ರೊಟೀಸ್ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಕೌಶಲಾಭಿವೃದ್ದಿ ಮಳಿಗೆಯನ್ನು ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಪವರ್ ಪರ್ಬದ ಸಂಯೋಜಕಿ ಸುಗುಣಾ ಸುವರ್ಣ ಮಾತನಾಡಿ, ಕೇಂದ್ರ ಸರಕಾರದ ಪಿಎಂಎಸ್ ಸ್ಕೀಮ್ ಆಫ್ ಎಂಎಸ್‌ಎಂಇ ಸಹಯೋಗದೊಂದಿಗೆ ಈ ಪವರ್ ಪರ್ಬವನ್ನು ಆಯೋಜಿಸಲಾಗುತ್ತಿದ್ದು, ಒಟ್ಟು 150ಕ್ಕೂ ಅಧಿಕ ಮಳಿಗೆಗಳನ್ನು ಮಹಿಳಾ ಉದ್ಯಮಿಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 60 ಮಳಿಗೆಗಳು ಪಿಎಂಎಸ್ ಸ್ಕೀಮ್ ಆಫ್ ಎಂಎಸ್‌ಎಂಇ ಮಳಿಗೆಗಳಾಗಿರುತ್ತವೆ ಎಂದರು.

ಆಭರಣ, ಆಹಾರ, ಚಿತ್ರಕಲೆ, ಕರಕೌಶಲ್ಯ, ವಸ್ತ್ರ ವಿನ್ಯಾಸ, ಗೃಹಾಲಂಕಾರ, ಸೌಂದರ್ಯ ವರ್ಧಕಗಳು, ಕ್ರಿಯಾತ್ಮಕ ವಸ್ತುಗಳು ಮೊದಲಾದ ವಸ್ತುಗಳ ಮಳಿಗೆ ಇರಲಿದೆ. ಈ ಪವರ್ ಪರ್ಬದ ಪ್ರಚಾರದ ಭಾಗವಾಗಿ ಫೆ.5ರಂದು ಸಂಜೆ 4.30ಕ್ಕೆ ರಜತಾದ್ರಿ ಮಣಿಪಾಲದಿಂದ ಉಡುಪಿಯವರೆಗೆ ಕಾರು ಮತ್ತು ಬೈಕ್‌ ರ್‍ಯಾಲಿ ಆಯೋಜಿಸಲಾಗಿದೆ. ಪವರ್‌ನ ಸದಸ್ಯರು ಮತ್ತು ಪ್ರದರ್ಶಕರು ಈ ರ್‍ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಪ್ರಿಯಾ ಕಾಮತ್, ಕೋಶಾಧಿಕಾರಿ ಪುಷ್ಪಾ ಜಿ.ರಾವ್, ನೋಂದಣಿ ಸಂಯೋಜಕಿ ಸುಪ್ರಿಯಾ ಕಾಮತ್, ಸ್ಥಾಪಕ ಅಧ್ಯಕ್ಷ ರೇಣು ಜಯರಾಮ್, ನಿಕಟ ಪೂರ್ವ ಅಧ್ಯಕ್ಷರಾದ ತಾರಾ ತಿಮ್ಮಯ್ಯ, ಸುವರ್ಷಾ ಮಿಂಚ್, ಶೃತಿ ಶೆಣೈ ಉಪಸ್ಥಿತರಿದ್ದರು.

Related posts

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar