ಫಳ್ನೀರ್ ವಾಸ್ ಲೇನ್ ರೋಗ ಉತ್ಪತ್ತಿ ತಾಣ, ಸ್ಥಳೀಯರಿಂದ ಪಾಲಿಕೆಯೆದುರು ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು : ಫಳ್ನೀರ್ ವಾಸ್ ಲೇನ್ ಪರಿಸರ ನಿವಾಸಿಗಳು ಮನಪಾಗೆ ಅತ್ಯಧಿಕ ತೆರಿಗೆ ಪಾವತಿಸಿದರೂ ಮನಪಾ ನಿರ್ಲಕ್ಷ್ಯದಿಂದಾಗಿ ಸೊಳ್ಳೆ ಮತ್ತು ರೋಗ ಉತ್ಪತ್ತಿ ಕೇಂದ್ರ ಆಗಿದ್ದು ಇಲ್ಲಿನ ಜನರ ವಾಸಿಸಲೂ ಕಷ್ಟಪಡುತ್ತಿದ್ದಾರೆ. ತಕ್ಷಣ ಸಮಸ್ಯೆ ಬಗೆಹರಿಸದಿದ್ದಲ್ಲಿ ಮನಪಾ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಇಲ್ಲಿನ ಸಮಸ್ಯೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಮ್ಮದ್ ಅಫ್ತಾರ್ ಹುಸೈನ್, ಈ‌ ಭಾಗದಲ್ಲಿ ಕಳೆದ ಐದು ವರ್ಷಗಳ ಹಿಂದೆ ಒಳಚರಂಡಿಯ ಹೂಳು ತೆಗೆದು ರಸ್ತೆ ಬದಿ ಹಾಕಲಾಗಿದ್ದು ಇನ್ನೂ ತೆರವುಗೊಳಿಸಿಲ್ಲ. ಒಂದೆಡೆ ಕಂಕನಾಡಿ ಮಾರ್ಕೆಟ್‌ನ ತ್ಯಾಜ್ಯ ನೀರು, ಇನ್ನೊಂದೆಡೆ ಸ್ಥಳೀಯ ಪ್ಲಾಟ್‌ಗಳ ತ್ಯಾಜ್ಯ ನೀರು ಇಲ್ಲಿನ ಚರಂಡಿಯಲ್ಲಿ ಹರಿದು ಬರುವ ಕಾರಣ ದುರ್ನಾತ ಮತ್ತು ಸೊಳ್ಳೆ ಕಾಟದಿಂದಾಗಿ ಪರಿಸರದ ನಿವಾಸಿಗಳ ನಿದ್ದೆಗೆಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಬ್ದುಲ್ ಖಾದರ್ ಖೈಝರ್ ಮಾತನಾಡಿ, ನಾವು ಅತ್ಯಧಿಕ ತೆರಿಗೆ ಪಾವತಿಸಿದರೂ ಹೆಚ್ಚಿನ ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿನ ಆಸ್ಪತ್ರೆ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಳೆ ನೀರು ಹರಿಯಬೇಕಾದ ಚರಂಡಿಯಲ್ಲಿ ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರು ಹರಿದು ಬರುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ವಾಸಿಸುವುದೇ ಕಷ್ಟ ಎನಿಸಿದೆ. ಸ್ಥಳೀಯ ಜನಪ್ರತಿನಿಧಿಗೆ ಹೇಳಿದರೂ ಯಾವುದೇ ಪ್ರಯೋಜನ ಆಗಿಲ್ಲ. ಐದು ವರ್ಷಗಳಿಂದ ಸಮಸ್ಯೆ ಇದ್ದು ರಸ್ತೆ ಕಾಮಗಾರಿ ಅರ್ಧದಲ್ಲಿ ನಿಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ. ವಸಂತ ಶೆಟ್ಟಿ ಮಾತನಾಡಿ, ಈ ಭಾಗದಲ್ಲಿ ಸ್ಮಾರ್ಟ್ ಸಿಟಿ ರಸ್ತೆ ಯೋಜನೆಯಡಿ ಮಾಡಿರುವ ರಸ್ತೆ ಅಭಿವೃದ್ಧಿ ವಾಹನಗಳ ನಿಲುಗಡೆಗಾಗಿಯೇ ಮಾಡಿದಂತಿದೆ. ತುರ್ತು ಪರಿಸ್ಥಿತಿಯಲ್ಲಿ ಆ್ಯಂಬುಲೆನ್ಸ್ ಸಂಚರಿಸಲೂ ಪರದಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಸೊಳ್ಳೆ ಕಾಟ, ದುರ್ವಾಸನೆಗೆ ನಾವು ಕಂಗೆಟ್ಡಿದ್ದು ಸ್ಥಳೀಯ ಜನಪ್ರತಿನಿಧಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಆರೋಪಿಸಿದರು.

ಅರಣ್ಯ ಇಲಾಖೆಯ ಅಧಿಕಾರಿ ಶಾಹನವಾಝ್, ಮಹಮ್ಮದ್ ಕುಂಞಿ, ಡೈಡನ್ ಡಿಸೋಜ ಇನ್ನಿತರರು ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ