ರಾಜ್ಯ ಸರಕಾರದ ದಿವಾಳಿತನ, ಹಗರಣಗಳನ್ನು ಮರೆಮಾಚಲು ಯತ್ನಿಸುತ್ತಿರುವ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ನಡೆ ಖಂಡನೀಯ : ಕಿಶೋರ್ ಕುಮಾರ್ ಕುಂದಾಪುರ

ಉಡುಪಿ : ಕೊನೆಯ ಚುನಾವಣೆ ಎಂದು ಡಂಗುರ ಸಾರುತ್ತಾ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಜನತೆಯಿಂದ ತಿರಸ್ಕರಿಸಲ್ಪಟ್ಟು, ಗೌರವಯುತವಾಗಿ ರಾಜಕೀಯ ನಿವೃತ್ತಿ ಪಡೆಯುವ ಬದಲು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ದಿವಾಳಿತನ ಮತ್ತು ಹಗರಣಗಳನ್ನು ಮರೆಮಾಚುವ ದುರುದ್ದೇಶದಿಂದ ಕ್ಷುಲ್ಲಕ ರಾಜಕಾರಣ ನಡೆಸುತ್ತಾ, ಕಾಪು ಕ್ಷೇತ್ರದ ಜನಪ್ರಿಯ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ವಿರುದ್ಧ ಕೀಳು ಮಟ್ಟದ ಅಪಪ್ರಚಾರ ನಡೆಸುತ್ತಿರುವ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ನಡೆ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದರು.

ಅವರು ಬಿಜೆಪಿ ಕಾಪು ಮಂಡಲದ ವತಿಯಿಂದ ಉಡುಪಿ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

‘ಅನುದಾನದ ಕೊರತೆಯ ಸಬೂಬು ಹೇಳಿ ಅಭಿವೃದ್ಧಿ ನಿರ್ಲಕ್ಷ್ಯ’ ಎಂದು ಆರೋಪಿಸಿರುವ ವಿನಯ ಕುಮಾರ್ ಸೊರಕೆ ಮೊದಲು ಕಾಂಗ್ರೆಸ್ ಪಕ್ಷದ ಶಾಸಕರಿಗೆ ರಾಜ್ಯ ಸರಕಾರ ಪ್ರಸಕ್ತ ಸಾಲಿನಲ್ಲಿ ಎಷ್ಟು ಅನುದಾನ ಬಿಡುಗಡೆಗೊಳಿಸಿದೆ ಮತ್ತು ಅವರು ಕೈಗೊಂಡಿರುವ ಮಹಾನ್ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ವಿವರ ನೀಡಲಿ. ಅಧಿಕಾರದ ಲಾಲಸೆಯಿಂದ ಘೋಷಿಸಿದ ನಕಲಿ ಗ್ಯಾರಂಟಿಗಳನ್ನು ಪೂರೈಸಲಾಗದೆ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಮುಳುಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ದಿವಾಳಿತನ ಜಗಜ್ಜಾಹೀರಾಗಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಇತರ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಚಿಕ್ಕಾಸನ್ನೂ ಬಿಡುಗಡೆ ಮಾಡದ ರಾಜ್ಯ ಸರಕಾರದ ಹುಳುಕನ್ನು ಮುಚ್ಚಿಟ್ಟು ಕಡಲ್ಕೊರೆತಕ್ಕೆ ಪರಿಹಾರ ಆಗಿಲ್ಲ ಎಂಬ ಆರೋಪ ಹೊರಿಸುತ್ತಿರುವ ಸೊರಕೆ ತಮ್ಮ ಸರಕಾರ ಅಭಿವೃದ್ಧಿಗಾಗಿ ಎಷ್ಟು ಹಣ ವ್ಯಯಿಸಿದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.

ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಮಟ್ಟು ಸ್ವಾಗತಿಸಿ, ಮಂಡಲ ವಕ್ತಾರ ನವೀನ್ ಎಸ್.ಕೆ. ವಂದಿಸಿದರು.

Related posts

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar