ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಸೌರಶಕ್ತಿ ಚಾಲಿತ ಬೀಜ ಬಿತ್ತನೆ ಯಂತ್ರದ ಅಭಿವೃದ್ಧಿ ಕಾರ್ಯ

ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಐಶ್ವರ್ಯ, ಕಿರಣ್, ಗುರುಕಿರಣ್, ಲಿಖಿತ್ ಎರ್ಮಾಳ್ ಇವರು ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ರಾಜಾ ಯತೀಶ್ ಯಾದವ್ ಇವರ ನೇತೃತ್ವದಲ್ಲಿ ಸೌರಶಕ್ತಿ ಚಾಲಿತ ಬೀಜ ಬಿತ್ತನೆ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ.

ರೈತರು ಕೃಷಿ ಭೂಮಿಯಲ್ಲಿ ಬೀಜಗಳನ್ನು ಬಿತ್ತಲು ಸಾಂಪ್ರದಾಯಿಕ ವಿಧಾನಗಳನ್ನು ಬಳಸುತ್ತಿದ್ದಾರೆ. ಈ ಹಳೆಯ ವ್ಯವಸ್ಥೆಯಲ್ಲಿ ಕೈಯಿಂದ ಬೀಜ ಬಿತ್ತಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಹಾಗೂ ಕಾರ್ಮಿಕರ ಕೊರತೆಯಿರುವುದರಿಂದ ಈ ಪದ್ಧತಿಯು ಕ್ರಮೇಣ ಅಪ್ರಸ್ತುತ ಎನಿಸುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ವಿದ್ಯಾರ್ಥಿಗಳು ಸ್ವಯಂಚಾಲಿತ ಬಿತ್ತನೆ ಬೀಜವನ್ನು ಅಭಿವೃದ್ದಿ ಪಡಿಸಿದ್ದಾರೆ.

ಈ ಯಂತ್ರವು ಸೌರಶಕ್ತಿ ಚಾಲಿತ ಬ್ಯಾಟರಿಯನ್ನು ಉಪಯೋಗಿಸುವುದರಿಂದ ಪರಿಸರ ಸ್ನೇಹಿಯಾಗಿದೆ. ಈ ಯಂತ್ರದಲ್ಲಿ ಬೀಜವನ್ನು ಮಣ್ಣಿನಲ್ಲಿ ಹಾಕುವ ಮೊದಲು ಸುಮಾರು ೪ ಸೆಂ. ಮೀ ಆಳಕ್ಕೆ ಮಣ್ಣನ್ನು ಅಗೆಯಲು ಅವಕಾಶವಿದೆ. ಬಿತ್ತನೆಯೊಂದಿಗೆ ನೀರು ಮತ್ತು ದ್ರವ ಗೊಬ್ಬರಗಳನ್ನು ಸಿಂಪಡಿಸುವುದು ಈ ಯಂತ್ರದ ಹೆಚ್ಚುವರಿ ವೈಶಿಷ್ಟ್ಯವಾಗಿದೆ.

ಈ ಯಂತ್ರವು ನೆಲಗಡಲೆ ಬೆಳೆಯುವ ರೈತರಿಗೆ ಹೆಚ್ಚು ಸೂಕ್ತವಾಗಿದೆ ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮತ್ತು ಉಪ ಪ್ರಾಶುಪಾಲರಾದ ಡಾ. ಗಣೇಶ್ ಐತಾಳ್ ಅಭಿನಂದಿಸಿದ್ದಾರೆ.

Related posts

ಕನಿಷ್ಟ ಕೂಲಿ, ತುಟ್ಟಿಭತ್ಯೆ ಕಡಿತಗೊಳಿಸಿದ ರಾಜ್ಯ ಸರಕಾರದ ಆದೇಶ ವಾಪಸಾತಿಗೆ ಒತ್ತಾಯಿಸಿ ಪ್ರತಿಭಟನೆ

ಕೋಟದಲ್ಲಿ ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಮೃತ್ಯು

ಮತ್ಸ್ಯಗಂಧ ರೈಲಿನಲ್ಲಿ ಲಕ್ಷಾಂತರ ಮೌಲ್ಯದ ವಜ್ರಾಭರಣ ಕಳವು – ದೂರು ದಾಖಲು