ದೊಡ್ಡ ಕನಸು ಕಂಡು ಅದನ್ನು ನಿಷ್ಠೆ, ಕಠಿಣ ಪರಿಶ್ರಮದಿಂದ ಸಾಕಾರಗೊಳಿಸಿ : ಪದವೀಧರರಿಗೆ ಎಲ್ ಕೆ ಅತೀಖ್ ಕರೆ

ಮಂಗಳೂರು : ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಮತ್ತು ಬ್ಯಾರೀಸ್ ಎನ್ವಿರೋ-ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬೀಡ್ಸ್) ವತಿಯಿಂದ ಬಿಐಟಿ 12ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಮತ್ತು ಬೀಡ್ಸ್ 5ನೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಮಂಗಳೂರಿನ ಇನೊಳಿಯಲ್ಲಿರುವ ಬ್ಯಾರಿಸ್ ನಾಲೆಜ್ ಕ್ಯಾಂಪಸ್‌ನಲ್ಲಿ ಶನಿವಾರ ನಡೆಯಿತು.

ಹೊಸ ಪದವೀಧರರನ್ನು ಅಭಿನಂದಿಸಿ ಮಾತನಾಡಿದ ಮುಖ್ಯ ಅತಿಥಿ, ಮುಖ್ಯಮಂತ್ರಿಗಳ ಹಾಗು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗು ಬೆಂಗಳೂರು ಬಿಸಿನೆಸ್ ಕಾರಿಡಾರ್ ಲಿ. ನ ಮುಖ್ಯಸ್ಥ ಎಲ್ ಕೆ ಅತೀಖ್ ಅವರು “ಇದು ನಿಮ್ಮ ಜೀವನದ ಒಂದು ಪ್ರಮುಖ ಮೈಲಿಗಲ್ಲು. ಶಿಸ್ತು, ನಿಷ್ಠೆ ಹಾಗು ಕಠಿಣ ಪರಿಶ್ರಮಗಳೇ ಯಶಸ್ವೀ ಹಾಗು ಅರ್ಥಪೂರ್ಣ ವೃತ್ತಿ ಜೀವನಕ್ಕೆ ಅಡಿಪಾಯ ಹಾಕುತ್ತವೆ ಹಾಗು ನಿರ್ಣಾಯಕ ಪಾತ್ರ ವಹಿಸುತ್ತವೆ. ನಮ್ಮ ಜೀವನದ ಗುರಿ ಸಾಧಿಸಲು ಈ ಮೂರು ಅಂಶಗಳು ಅನಿವಾರ್ಯ. ಸ್ಫೂರ್ತಿ ಬಹಳ ಮುಖ್ಯ ಆದರೆ ನಿರಂತರ ಪ್ರಯತ್ನ ಹಾಗು ಕಠಿಣ ಪರಿಶ್ರಮ ಅದರ ಜೊತೆಗಿದ್ದರೆ ಮಾತ್ರ ಫಲಿತಾಂಶ ಸಿಗಲಿದೆ ಎಂದು ಸಲಹೆ ನೀಡಿದರು. ತಮ್ಮ ವೃತ್ತಿ ಬದುಕಿನ ಬಗ್ಗೆ ಹೇಳಿದ ಅತೀಖ್ ಅವರು “ಜೀವನದಲ್ಲಿ ನಾವು ದೊಡ್ಡ ಕನಸುಗಳನ್ನು ಕಾಣಬೇಕು. ನಾನು ಕನಸು ಕಂಡು, ಗುರಿ ಇಟ್ಟುಕೊಂಡಿದ್ದರಿಂದ ವೃತ್ತಿ ಜೀವನದಲ್ಲಿ ಈ ಹಂತಕ್ಕೆ ಬರಲು ಸಾಧ್ಯವಾಯಿತು. ವೈಫಲ್ಯ ನಮ್ಮ ಜೀವನದ ಸಹಜ ಭಾಗ. ಅದನ್ನು ಎದುರಿಸಿ ಮುನ್ನುಗ್ಗಬೇಕು ” ಎಂದು ಕರೆ ನೀಡಿದರು.

ಆಡಳಿತ ಹಾಗು ಆರ್ಥಿಕ ರಂಗಗಳಲ್ಲಿ ಎಲ್ ಕೆ ಅತೀಖ್ ಅವರ ಅಪಾರ ಅನುಭವ, ಪರಿಣತಿ ಹಾಗು ಸಾಧನೆಯನ್ನು ಪ್ರಶಂಸಿಸಿದ ಸಯ್ಯದ್ ಬ್ಯಾರಿ ಅವರು “ಜಗತ್ತಿನ ಯಾರು ಏನೇ ಹೇಳಿದರೂ 21ನೇ ಶತಮಾನ ಭಾರತದ್ದು. ನಮ್ಮ ದೇಶಕ್ಕೆ ಭವ್ಯ ಭವಿಷ್ಯವಿದೆ. ಇಲ್ಲಿ ಧಾರಾಳ ಅವಕಾಶಗಳಿವೆ. ಆದರೆ ನೀವು ಉದ್ಯೋಗ ಕೇಳುವವರಾಗುವ ಬದಲು ಉದ್ಯೋಗ ಸೃಷ್ಟಿಸುವವರಾಗಬೇಕು” ಎಂದು ಪದವೀಧರರಿಗೆ ಕರೆ ನೀಡಿದರು. “ನಮ್ಮ ಸಮಾಜದಿಂದ ಭ್ರಷ್ಟಾಚಾರ, ಕೋಮುವಾದ ಹಾಗು ಅದಕ್ಷತೆ ನಿರ್ಮೂಲನೆಯಾಗಬೇಕು. ಭ್ರಷ್ಟಾಚಾರ ಅಂದರೆ ಕೇವಲ ಆರ್ಥಿಕ ಭ್ರಷ್ಟಚಾರ ಮಾತ್ರವಲ್ಲ, ಮನಸ್ಸು ಹಾಗೂ ಆತ್ಮಸಾಕ್ಷಿಯ ಭ್ರಷ್ಟಚಾರ ಕೊನೆಯಾಗಬೇಕು. ಇಲ್ಲಿ ಸಾರೆ ಜಹಾಂ ಸೆ ಅಚ್ಛಾ, ಹಿಂದೂಸ್ತಾನ್ ಹಮಾರಾ ಎಂಬ ಹಾಡಿನಂತೆ ನಮ್ಮ ಸಮಾಜದ ಎಲ್ಲರಲ್ಲಿ ಐಕ್ಯತೆ ಮೂಡಬೇಕು. ಪದವೀಧರರು ಕಾಲೇಜಿನ ಪರೀಕ್ಷೆ ಮಾತ್ರವಲ್ಲದೆ ಜೀವನದ ಪರೀಕ್ಷೆಗಳಲ್ಲೂ ಪಾಸಾಗಬೇಕು. ಬಿ ಐ ಟಿ ಹಾಗೂ ಬ್ಯಾರೀಸ್ ನ ಎಲ್ಲ ಶಿಕ್ಷಣ ಸಂಸ್ಥೆಗಳು ದೇಶದ ಪ್ರಗತಿಗೆ ಶ್ರಮಿಸುವ ಧ್ಯೇಯದೊಂದಿಗೆ ಸೇವೆ ಸಲ್ಲಿಸುತ್ತಿವೆ. ಅಹಂ, ದುರಾಸೆಗಳನ್ನು ಬದಿಗೊತ್ತಿ ಎಲ್ಲರೂ ದೇಶಕ್ಕೆ ನಾವು ಹೇಗೆ ಸೇವೆ ಸಲ್ಲಿಸಬಹುದು ಎಂಬ ಬಗ್ಗೆ ಚಿಂತಿಸಬೇಕು” ಎಂದು ಸಯ್ಯದ್ ಬ್ಯಾರಿ ಹೇಳಿದರು.

ಪದವಿ ಪ್ರದಾನ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು,”ಸೈಯದ್ ಮೊಹಮ್ಮದ್ ಬ್ಯಾರಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ನಾಯಕ” ಎಂದು ಶ್ಲಾಘಿಸಿದರು. ದೇಶಕ್ಕೆ ಯುವ ಪ್ರತಿಭೆಗಳನ್ನು ಸಮರ್ಪಿಸುತ್ತಿರುವ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು. ಪದವೀಧರ ವಿದ್ಯಾರ್ಥಿಗಳಿಗೆ ಸಾಮಾಜಿಕ ಮತ್ತು ರಾಜಕೀಯ ಜವಾಬ್ದಾರಿಗಳನ್ನು ನೆನಪಿಸಿದ ಪ್ರೊ.ಪಿ.ಎಲ್.ಧರ್ಮ, “ನೀವು ಉದ್ಯೋಗ ಪಡೆಯುವುದರ ಮೇಲೆ ಮಾತ್ರ ಗಮನಹರಿಸಬೇಡಿ. ದೇಶ ಮತ್ತು ವ್ಯವಸ್ಥೆ ನಿಮಗೆ ಬಹಳ ನೀಡಿದೆ, ಆದ್ದರಿಂದ ಅದನ್ನು ಹಿಂತಿರುಗಿಸುವುದು ನಿಮ್ಮ ಕರ್ತವ್ಯ” ಎಂದು ಹೇಳಿದ್ದಾರೆ. ಸಮಾಜ ಮತ್ತು ರಾಜಕೀಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರವನ್ನು ಪ್ರೊ.ಧರ್ಮ ಇದೇ ವೇಳೆ ಒತ್ತಿ ಹೇಳಿದರು.

“ನಾಳೆ ಜಾಗತಿಕ ನಾಯಕರಾಗುವವರಿಗೆ ಇಂತಹ ಸಾಮಾಜಿಕ, ರಾಜಕೀಯ ಪ್ರಜ್ಞೆ ಬಹಳ ಅಗತ್ಯ” ಎಂದು ಹೇಳಿದ ಪ್ರೊ. ಧರ್ಮ “ಸಯ್ಯದ್ ಬ್ಯಾರಿ ಅವರಿಂದ ಪ್ರೇರಣೆ ಪಡೆದು ಯುವ ಪದವೀಧರರು ಸಮಾಜದ ದುರ್ಬಲ ವರ್ಗಗಳ ಮಕ್ಕಳಿಗೆ ಶಿಕ್ಷಣ ಕೊಡಲು ಮುಂದೆ ಬರಬೇಕು” ಎಂದು ಕರೆ ನೀಡಿದರು.

ಶ್ನೈಡರ್ ಎಲೆಕ್ಟ್ರಿಕ್ ಬೆಂಗಳೂರು ಇದರ ಉಪಾಧ್ಯಕ್ಷರಾದ ಚಿತ್ರಾ ಸುಕುಮಾರ್ ಮಾತನಾಡಿ “ಬಿಐಟಿ ಹಸಿರುಮಯ ಸುಂದರ ಕ್ಯಾಂಪಸ್‌ನಿಂದಲೇ ಇಲ್ಲಿನ ಪದವೀಧರರು ಪರಿಸರ ಸ್ನೇಹಿ ಅಭಿವೃದ್ಧಿಯ ಪ್ರೇರಣೆ ಪಡೆಯಬಹುದು. ವಿದ್ಯಾರ್ಥಿಗಳು ರಾಜಕೀಯ, ಸಾಮಾಜಿಕ ಹಾಗು ತಾಂತ್ರಿಕ ಬದಲಾವಣೆಗಳಿಗೆ ತಕ್ಷಣ ಹೊಂದಿಕೊಳ್ಳುವ ವ್ಯಕ್ತಿತ್ವ ಹಾಗು ಮನೋಭಾವ ರೂಪಿಸಿಕೊಳ್ಳಬೇಕು” ಎಂದು ಹೇಳಿದರು.

ಐಜಿಬಿಸಿ ಮಂಗಳೂರು ಅಧ್ಯಕ್ಷರಾದ ವೆಂಕಟೇಶ್ ಪೈ ಮಾತನಾಡಿ “ನೀವು ಏನೇ ಮಾಡಿದರೂ ಅದನ್ನು ಅತ್ಯಂತ ಪ್ರೀತಿಯಿಂದ, ಶೃದ್ಧೆಯಿಂದ ಮಾಡಿ. ಯುವ ಆರ್ಕಿಟೆಕ್ಟ್‌ಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನೂ ಅರಿತುಕೊಳ್ಳಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಐಟಿಯ ಪ್ರಾಂಶುಪಾಲ ಡಾ.ಎಸ್.ಐ.ಮಂಝೂರ್ ಬಾಷಾ ಸ್ವಾಗತಿಸಿ , ಬ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್‌ನ ಪ್ರಾಂಶುಪಾಲರಾದ ಡಾ. ಅಝೀಝ್ ಮುಸ್ತಫ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಸಮಾರಂಭದಲ್ಲಿ ಪ್ರತಿ ವಿಭಾಗದಿಂದ Best out going student ಪ್ರಶಸ್ತಿ ಮತ್ತು ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಡಾ. ಅಝೀಝ್ ಮುಸ್ತಫಾ ಅವರು ಧನ್ಯವಾದವನ್ನು ಸಮರ್ಪಿಸಿದರು.

ವೇದಿಕೆಯಲ್ಲಿ ಬೀಡ್ಸ್‌ನ ಪ್ರಾಂಶುಪಾಲ ಡಾ.ಖಲೀಲ್ ರಝಾಕ್, ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕ ಡಾ. ಪೃಥ್ವಿರಾಜ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಾಯ್ಸನ್ ಮಿರಾಂಡಾ ಮತ್ತು ರೆಹಾನಾ ಹನೀನಾ ನಿರೂಪಿಸಿದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ