ಡಾ. ವಸುಂಧರಾ ದೊರೆಸ್ವಾಮಿಯವರ ಕಿತ್ತೂರು ರಾಣಿ ಚೆನ್ನಮ್ಮ

ಮಣಿಪಾಲ : ಮಣಿಪಾಲ ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ವಿಭಾಗವು ಆಗಸ್ಟ್ 22ರ ಗುರುವಾರ ಸಂಜೆ 06.30ಕ್ಕೆ ಸರಿಯಾಗಿ ಟಿ.ಎಂ.ಎ ಪೈ ಸಭಾಂಗಣದಲ್ಲಿ ಹಿರಿಯ ನೃತ್ಯಕಲಾವಿದೆ, ಗುರು ಡಾ. ವಸುಂಧರಾ ದೊರೆಸ್ವಾಮಿಯವರ ‘ಕಿತ್ತೂರು ರಾಣಿ ಚೆನ್ನಮ್ಮ’ಎಂಬ ಏಕವ್ಯಕ್ತಿ ನೃತ್ಯನಾಟಕ ಪ್ರದರ್ಶನವನ್ನು ವಿದ್ಯಾರ್ಥಿಗಳಿಗೆ ಹಾಗೂ ಊರಿನ ಕಲಾಸಕ್ತರಿಗಾಗಿ ಆಯೋಜಿಸಿದೆ.

ಪ್ರೊ. ಜ್ಯೋತಿ ಶಂಕರ್ ಅವರು ರಚಿಸಿ, ವಿದ್ವಾನ್ ಡಿ.ಎಸ್ ಶ್ರೀವತ್ಸ ಅವರ ಸಂಗೀತ ಸಂಯೋಜನೆಯ ಈ ನೃತ್ಯನಾಟಕದಲ್ಲಿ ಡಾ. ವಸುಂಧರಾ ಅವರ ನೃತ್ಯ-ನಾಟಕ-ಸಮರಕಲೆಗಳ ಸಿದ್ಧಿಯ ಸಮನ್ವಯವನ್ನು ಕಾಣಲಿದ್ದೀರಿ.

ಶಾಸ್ತ್ರೀಯ ಭರತನಾಟ್ಯ ಹಾಗೂ ಸೃಜನಶೀಲ ಪ್ರಸ್ತುತಿಗಳಿಗೆ ಹೆಸರಾಗಿರುವವರು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದೆ ಡಾ. ವಸುಂಧರಾ ದೊರೆಸ್ವಾಮಿಯವರು. ತನ್ನ 75ರ ಇಳಿವಯಸ್ಸಿನಲ್ಲಿಯೂ ನಿರಂತರ ಪ್ರದರ್ಶನ, ಕಲಾಸಂಯೋಜನೆ, ಅಧ್ಯಯನ, ಅಧ್ಯಾಪನದಲ್ಲಿ ತೊಡಗಿಕೊಂಡಿರುವ ಬದ್ಧತೆಯ ಕಲಾವಿದೆ ಇವರು. ದಕ್ಷಿಣಕನ್ನಡದ ಮೂಡಬಿದರೆಯ ಮಗಳು. ಸಾಂಸ್ಕೃತಿಕ ನಗರಿ ಮೈಸೂರಿನ ಹೆಮ್ಮೆಯ ಸೊಸೆ. ವಸುಂಧರಾ ಪ್ರದರ್ಶಕ ಕಲೆಗಳ ಕೇಂದ್ರವನ್ನು ಸ್ಥಾಪಿಸಿ ಕಳೆದ 40 ವರುಷಗಳಿಂದ ನಿರಂತರ ಕಲಾ ಉತ್ಸವಗಳನ್ನು ಆಯೋಜಿಸಿ ಹಿರಿಯ ಕಿರಿಯ ಕಲಾವಿದರಿಗೆ ವೇದಿಕೆಯನ್ನೊದಗಿಸಿದ್ದಾರೆ.

ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳಲ್ಲದೆ, ಹಲವಾರು ನೃತ್ಯನಾಟಕಗಳು, ಏಕವ್ಯಕ್ತಿ ನೃತ್ಯನಾಟಕಗಳನ್ನು ಇಂದಿಗೂ ಪ್ರದರ್ಶಿಸುತ್ತಿದ್ದಾರೆ. ಕರ್ನಾಟಕದ ಪ್ರತಿಷ್ಥಿತ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾತಿಲಕ ಬಿರುದು, ನಾಟ್ಯರಾಣಿ ಶಾಂತಲಾ ಬಿರುದು ಸೇರಿ ಗೌರವಾನ್ವಿತ ಕೇಂದ್ರ ಸಂಗೀತನಾಟಕ ಅಕಾಡೆಮಿಯ ಪ್ರಶಸ್ತಿಯೊಂದಿಗೆ, ಅಮೇರಿಕ, ಆಸ್ಟ್ತೇಲಿಯ, ಯುರೊಪ್ ಹಾಗೂ ಯುನೈಟೆಡ್ ಕಿಂಗ್ ಡಮ್ ದೇಶಗಳ ಪ್ರಶಸ್ತಿಗಳನ್ನೂ ಪಡೆದಿರುತ್ತಾರೆ.

ಮಾಗಿದ ಕಲಾತಪಸ್ವಿಯ ಪ್ರಸ್ತುತಿಯನ್ನು ಆಸ್ವಾದಿಸಲು ಕಲಾಸಕ್ತರಿಗೆ ಮುಕ್ತ ಪ್ರವೇಶ. ಕಾರ್ಯಕ್ರಮವು ಸಮಯಕ್ಕೆ ಸರಿಯಾಗಿ ಆರಂಭವಾಗಲಿದ್ದು, ಹದಿನೈದು ನಿಮಿಷ ಮುಂಚಿತವಾಗಿ ಪ್ರೇಕ್ಷಕರು ಆಸನ ಸ್ವೀಕರಿಸಬೇಕೆಂಬುದು ಆಯೋಜಕರ ವಿನಂತಿ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ