ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಡಾ. ಮಹಾಂತೇಶ ಶಿವಯೋಗಿಗಳ ಕೊಡುಗೆ ಅಪಾರ : ಅಪರ ಜಿಲ್ಲಾಧಿಕಾರಿ

ಉಡುಪಿ : ಮಾದಕ ವ್ಯಸನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದರೊಂದಿಗೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಡಾ.ಮಹಾಂತೇಶ ಶಿವಯೋಗಿಗಳು ನೀಡಿದ ಕೊಡುಗೆ ಅಪಾರ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದರು.

ಅವರು ಗುರುವಾರ ನಗರದ ಪೂರ್ಣಪ್ರಜ್ಞ ಇಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌ನ ಪ್ರಜ್ಞಾ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೂರ್ಣಪ್ರಜ್ಞ ಇಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ ಉಡುಪಿ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಮಹಾಂತೇಶ ಶಿವಯೋಗಿಗಳ ಜನ್ಮ ದಿನ-ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ.ಮಹಾಂತೇಶ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು. ಶ್ರೀಗಳು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದಾರೆ. ಅನೇಕ ವ್ಯಸನಿಗಳು ಕುಡಿತದ ಚಟದಿಂದ ಹೊರಬರುವಂತೆ ಮಾಡಿ ಹಲವು ಕುಟುಂಬಗಳಿಗೆ ಬೆಳಕಾದ ಇವರ ಹುಟ್ಟಿದ ದಿನವನ್ನು ರಾಜ್ಯ ಸರ್ಕಾರವು ವ್ಯಸನಮುಕ್ತ ದಿನಾಚರಣೆ ಎಂದು ಆಚರಿಸುತ್ತಿರುವುದು ಸಮಂಜಸವಾಗಿದೆ ಎಂದರು.

ಡಾ. ಮಹಾಂತೇಶ ಶಿವಯೋಗಿಗಳು ಆ ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ, ಅವರ ಶೈಲಿಯಲ್ಲಿ ಜನರಿಗೆ ಮನಮುಟ್ಟುವಂತೆ ತಿಳಿಸುವುದರೊಂದಿಗೆ ಸಾರ್ವಜನಿಕ ಹಾಗೂ ಸಾಮಾಜಿಕವಾಗಿ ಬದಲಾವಣೆ ಮಾಡಿದ್ದಾರೆ. ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು ಎಂದರು. ಡಾ. ಎ.ವಿ ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಉಪನ್ಯಾಸ ನೀಡಿ ಮಾತನಾಡುತ್ತಾ, ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೇ, ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ. ಆರಂಭದಲ್ಲಿ ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ತೊಡಗುವ ಮದ್ಯ ಅಥವಾ ಕಡಿಮೆ ಬೆಲೆಗೆ ಸಿಗುವ ತಂಬಾಕಿನಂತಹ ವಸ್ತುಗಳ ಸೇವನೆ ಕೊನೆಗೆ ಪ್ರಾಣಕ್ಕೆ ಕುತ್ತು ತರುವಂತಹ ಮಾದಕ ವಸ್ತುಗಳ ವ್ಯಸನಿಯನ್ನಾಗಿಸುತ್ತದೆ ಎಂದ ಅವರು, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ, ಜನರನ್ನು ತಪ್ಪು ದಾರಿಯಿಂದ ಸರಿ ದಾರಿಗೆ ತಲುಪಿಸಲು ಕೆಲಸ ಮಾಡಿದವರಲ್ಲಿ ಡಾ. ಮಹಾಂತೇಶ ಶಿವಯೋಗಿಗಳು ಒಬ್ಬರೂ ಎಂದರು. ಯುವಜನರು ದುಶ್ಚಟ ಎಂಬ ಚಕ್ರವ್ಯೂಹಕ್ಕೆ ಒಮ್ಮೆ ಸಿಲುಕಿದರೆ ಅದರಿಂದ ಹೊರಬರುವುದು ಕಷ್ಟಸಾಧ್ಯ. ವ್ಯಸನಿಗಳಾದ ಕೆಲವೇ ವ್ಯಕ್ತಿಗಳು ಮಾತ್ರ ವ್ಯಸನದ ಚಕ್ರವ್ಯೂಹದಿಂದ ಹೊರಬರುತ್ತಾರೆ. ಕೆಲವರು ಚಿಕಿತ್ಸೆ ಪಡೆದರೆ ಪೂರ್ಣ ಪ್ರಮಾಣದಲ್ಲಿ ಸದೃಢರಾಗುವುದಿಲ್ಲ ಎಂದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಮಹಾಂತೇಶ ಶಿವಯೋಗಿಗಳು ದೇಶ-ವಿದೇಶಗಳಲ್ಲಿ ಸಂಚರಿಸಿ, ಜನರಲ್ಲಿರುವ ದುಶ್ಚಟಗಳನ್ನೆ ತಮ್ಮ ಜೋಳೀಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ, ವ್ಯಸನಮುಕ್ತ ಸಮಾಜಕ್ಕೆ ಅವಿರತವಾಗಿ ಶ್ರಮಿಸಿದ್ದಾರು ಎಂದರು. ಪೂರ್ಣಪ್ರಜ್ಞ ಇಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌ನ ನಿರ್ದೇಶಕ ಡಾ. ಪಿ ಶ್ರೀರಮಣ ಐತಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಾದಕ ವಸ್ತುಗಳ ಸೇವನೆಯು ಒಂದು ರೀತಿಯ ಫ್ಯಾಷನ್ ಎಂಬುದಾಗಿ ತಿಳಿದ ಯುವಜನತೆ ಮಾದಕ ವಸ್ತುಗಳ ಕಡೆ ಆಕರ್ಷಿತರಾಗಿ ವ್ಯಸನಿಗಳಾಗುತ್ತಾರೆ. ಯುವಜನರಲ್ಲಿ ವ್ಯಸನದಿಂದ ಉಂಟಾಗುವ ದುಷ್ಟರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ರೋಗ ಬಂದು ಚಿಕಿತ್ಸೆ ಪಡೆಯುವ ಬದಲು ಮುಂಜಾಗ್ರತೆ ವಹಿಸುವುದು ಒಳ್ಳೆಯದು. ಅದೇ ರೀತಿ ವ್ಯಸನಿಗಳಾಗಿ ಚಿಕಿತ್ಸೆ ಪಡೆಯುವ ಬದಲು ಅದರಿಂದ ದೂರ ಉಳಿಯುವುದು ಒಳಿತು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್ ಮಾತನಾಡಿ, ಯುವಜನತೆ ಕ್ಷಣಿಕ ಸುಖಕ್ಕೆ ಮಾದಕ ವಸ್ತುಗಳ ಚಟಕ್ಕೆ ಮಾರುಹೋಗದೇ ಅವುಗಳಿಂದ ದೂರ ಉಳಿಯುವುದು ಒಳ್ಳೆಯದು. ಜಿಲ್ಲೆಯು ತಂಬಾಕು ಮುಕ್ತ ಸೇರಿದಂತೆ ಮತ್ತಿತರ ದುಶ್ಚಟಗಳಿಂದ ಜನರನ್ನು ಮುಕ್ತಗೊಳಿಸಲು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು. ಸಹಾಯಕ ಪ್ರಾಧ್ಯಾಪಕ ಡಾ. ನವೀನ್ ಕುಮಾರ್ ವ್ಯಸನಮುಕ್ತ ದಿನಾಚರಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ವಾರ್ತಾ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಶಿವಾನಂದ ಭಂಡರ‍್ಕರ್ ನಿರೂಪಿಸಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ್ತಿ ಮಂಜುಳಾ ಶೆಟ್ಟಿ ವಂದಿಸಿದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು