ವಿದ್ಯಾಪೋಷಕ್ ವಿಂಶತಿ ನೆನಪಿನಲ್ಲಿ ಶೌಚಾಲಯ ಕೊಡುಗೆ

ಕುಂದಾಪುರ : ಬೀಜಾಡಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರ ಶೌಚಾಲಯ ಕೊರತೆಯನ್ನು ಮನಗಂಡು ಉಡುಪಿ ಯಕ್ಷಗಾನ ಕಲಾರಂಗವು ವಿದ್ಯಾಪೋಷಕ್‍ನ ವಿಂಶತಿಯ ನೆನಪಿನಲ್ಲಿ 2.5 ಲಕ್ಷ ರೂಪಾಯಿ ವೆಚ್ಚದ ನೂತನ ಶೌಚಾಲಯವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದೆ.

ಇದರ ಉದ್ಘಾಟನೆಯನ್ನು ಕುಂದಾಪುರ ಶಾಸಕರಾದ ಶ್ರೀ ಕಿರಣ್ ಕುಮರ್ ಕೊಡ್ಗಿಯವರು ಜೂನ್ 27, ಗುರುವಾರದಂದು ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಗಳಿಸಿದ ಶಾಲೆ ಅಭಿನಂದನಾರ್ಹವಾದುದು. ಈ ಶಾಲೆಯ ಮುಖ್ಯ ಬೇಡಿಕೆಯಾದ ಸಭಾಂಗಣ ನಿರ್ಮಾಣವು ತನ್ನ ಮೊದಲ ಆದ್ಯತೆಯಾಗಿದೆ. ಈ ಬಗ್ಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಆನಂದ ಸಿ. ಕುಂದರ್ ಮಾತನಾಡಿ ಗ್ರಾಮೀಣ ಪ್ರದೇಶದ ಬಡ ಮಕ್ಕಳೇ ತುಂಬಿದ ಈ ಪ್ರೌಢಶಾಲೆಯ ಅಗತ್ಯತೆಗಳನ್ನು ನಮ್ಮ ಫೌಂಡೇಶನ್ ಮೂಲಕ ಸಾಧ್ಯವಾದಷ್ಟು ನೆರವೇರಿಸಲು ಬದ್ಧನಾಗಿದ್ದೇನೆ. ಉಡುಪಿಯ ಯಕ್ಷಗಾನ ಕಲಾರಂಗದ ಸಮಾಜಮುಖಿಯ ಚಟುವಟಿಕೆಗಳು ಎಲ್ಲಾ ಸಂಘಟನೆಗಳಿಗೂ ಆದರ್ಶಪ್ರಾಯವಾಗಿದೆ. ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಎಲ್ಲರೂ ಅಭಿನಂದನಾರ್ಹರು ಎಂದು ನುಡಿದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮಾತನಾಡಿ ಶಾಲೆಯ ಅಗತ್ಯವನ್ನು ಆಡಳಿತ ಮಂಡಳಿಗೆ, ಶಾಸಕರಿಗೆ ತಿಳಿಸಿ ಇದನ್ನು ಈಡೇರಿಸಬೇಕೆಂದು ಮನವಿ ಮಾಡುವ ಮುಖ್ಯಶಿಕ್ಷಕರು ಸಾಮಾನ್ಯ; ಆದರೆ ಇಲ್ಲಿ ಮುಖ್ಯ ಶಿಕ್ಷಕಿ ವಿನೋದ ಎಂ. ಅವರು ತಮ್ಮ ಸ್ವಂತ ಖರ್ಚಿನಲ್ಲಿ ಇದನ್ನು ನಿರ್ಮಿಸಿ ಆ ಗೌರವವನ್ನು ಕಲಾರಂಗಕ್ಕೆ ಅರ್ಪಿಸಿದ್ದಾರೆ. ಸಂಸ್ಥೆ ಅವರಿಗೆ ಋಣಿಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಯಕ್ಷಶಿಕ್ಷಣ ಟ್ರಸ್ಟ್‌ನ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಶಿಕ್ಷಣ ತರಬೇತಿಯ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸಿ ನೆರವೇರಿಸಲಾಯಿತು. ವೇದಿಕೆಯಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಶಾಲಾ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಶೇಷಗಿರಿ ಗೋಟ, ಅಧ್ಯಕ್ಷ ಶೇಖರ ಚಾತ್ರಬೆಟ್ಟು, ಎಸ್.ಡಿ.ಎಮ್.ಸಿ ಅಧ್ಯಕ್ಷ ಲಕ್ಷ್ಮಣ ಟಿ. ನಾಯಕ್, ಶಿಕ್ಷಣ ಪ್ರೇಮಿ, ದಾನಿ ಮಂಜುನಾಥ ರಾವ್, ನಿವೃತ್ತ ಶಿಕ್ಷಕ ಯು. ಎಸ್. ರಾಜಗೋಪಾಲ ಆಚಾರ್ಯ, ಯಕ್ಷಗಾನ ಕಲಾರಂಗದ ಸದಸ್ಯರಾದ ವಿ. ಜಿ. ಶೆಟ್ಟಿ, ನಾರಾಯಣ ಎಂ. ಹೆಗಡೆ, ಯು. ಅನಂತರಾಜ ಉಪಾಧ್ಯ, ದಿನೇಶ ಪಿ. ಪೂಜಾರಿ, ಪ್ರಸಾದ್ ರಾವ್, ಯಕ್ಷಗುರು ನವೀನ್ ಕೋಟ ಹಾಗೂ ಶಾಲಾ ಶಿಕ್ಷಕರು ಮತ್ತು ರಕ್ಷಕರು ಉಪಸ್ಥಿತರಿದ್ದರು. ಶೌಚಾಲಯದ ಪ್ರಾಯೋಜಕರೂ, ಶಾಲಾ ಮುಖ್ಯಶಿಕ್ಷಕರೂ ಆದ ಎಂ. ವಿನೋದ ಸ್ವಾಗತಿಸಿ, ಶಾಲೆಯ ಅಗತ್ಯತೆಯ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ