ಸುರತ್ಕಲ್ ಬಂಟರ ಸಂಘದಲ್ಲಿ ಸಸಿ ವಿತರಣೆ, ಸಾಧಕರಿಗೆ ಸನ್ಮಾನ; “ಸ್ವಚ್ಛ ಪರಿಸರವಿದ್ದಲ್ಲಿ ಸ್ವಚ್ಛಂದ ಬದುಕು ಸಾಧ್ಯ“ – ಕರುಣಾಕರ ಎಂ.ಶೆಟ್ಟಿ

ಸುರತ್ಕಲ್ : ಬಂಟರ ಸಂಘ (ರಿ) ಸುರತ್ಕಲ್, ರೋಟರಿ ಕ್ಲಬ್ ಬೈಕಂಪಾಡಿ ಹಾಗೂ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಸುರತ್ಕಲ್ ಇದರ ಸಹಯೋಗದಲ್ಲಿ ಮೇಬೈಲು ಸದಾಶಿವ ಶೆಟ್ಟಿ ನೇತೃತ್ವದಲ್ಲಿ 15ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ ಕಾರ್ಯಕ್ರಮ ಆದಿತ್ಯವಾರ ಇಲ್ಲಿನ ಬಂಟರ ಭವನದಲ್ಲಿ ಜರುಗಿತು.

ಉದ್ಘಾಟನೆಯನ್ನು ನೆರವೇರಿಸಿ ಮಾತಾಡಿದ ವಿ.ಕೆ ಸಮೂಹ ಸಂಸ್ಥೆ ಮುಂಬಯಿ ಇದರ ಸಿಎಂಡಿ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಅವರು, “ಸಸಿ ವಿತರಣೆ ಬರೀ ಕಾಟಾಚಾರದ ಕಾರ್ಯಕ್ರಮವಾಗಬಾರದು. ಮನೆಗೆ ಕೊಂಡೊಯ್ದ ಗಿಡವನ್ನು ಮಕ್ಕಳ ಕೈಯಲ್ಲಿ ನೆಡುವಂತೆ ಸಲಹೆ ನೀಡಬೇಕು. ಇದರಿಂದ ಅವರಿಗೂ ಪ್ರಕೃತಿ ಮತ್ತು ಪರಿಸರ ರಕ್ಷಣೆಯ ಕಾಳಜಿ ಮತ್ತು ಪ್ರೀತಿ ಬೆಳೆಯುತ್ತದೆ. ಯಾವ ಗಿಡವೂ ಸಾಯದಂತೆ ನೋಡಿಕೊಳ್ಳಬೇಕು. ಮರಗಳನ್ನು ಬೇಕಾಬಿಟ್ಟಿ ಕಡಿಯುತ್ತಿರುವ ಈ ವೇಳೆಯಲ್ಲಿ ಇದೊಂದು ಸಾರ್ಥಕ ಕಾರ್ಯಕ್ರಮವಾಗಿದೆ. ಸ್ವಚ್ಛ ಪರಿಸರ ಇದ್ದಲ್ಲಿ ನಾವೆಲ್ಲರೂ ಸ್ವಚ್ಛಂದವಾಗಿ ಬದುಕಲು ಸಾಧ್ಯ. ಎಲ್ಲರೂ ಈ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ“ ಎಂದರು.

ದಿಕ್ಸೂಚಿ ಮಾತನ್ನಾಡಿದ ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ್ ಶೆಟ್ಟಿ ಅವರು, “ಸುರತ್ಕಲ್ ಬಂಟರ ಸಂಘದ ಆಶ್ರಯದಲ್ಲಿ ಹತ್ತು ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇಂದಿನ ಈ ಕಾರ್ಯಕ್ರಮ ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಹಣ್ಣುಗಳ ಗಿಡಗಳನ್ನು ನೆಡುವ ಮೂಲಕ ಪ್ರಾಣಿ ಪಕ್ಷಿಗಳ ಬದುಕಿಗೆ ನಾವು ಸಹಕಾರ ನೀಡಿದಂತಾಗುತ್ತದೆ. ಇದರಿಂದ ಅವುಗಳು ಬೆಳೆ ನಾಶ ಮಾಡುವುದಿಲ್ಲ. ಇಂತಹ ಕಾರ್ಯಕ್ರಗಳು ಹೆಚ್ಚೆಚ್ಚು ನಡೆಯುವ ಮೂಲಕ ಪರಿಸರಸ್ನೇಹಿಗಳಾಗಿ ಬದುಕೋಣ” ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ಸುರತ್ಕಲ್ ಇದರ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ವಹಿಸಿದ್ದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ, ರೋಟರಿ ಕ್ಲಬ್ ಬೈಕಂಪಾಡಿ ಇದರ ಅಧ್ಯಕ್ಷ ಹರೀಶ್ ಶೆಟ್ಟಿ, ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಇದರ ಅಧ್ಯಕ್ಷ ರಮೇಶ್ ಶೆಟ್ಟಿ, ಕೃಷಿ ಸಮಿತಿ ಸಂಚಾಲಕ ಮೇಬೈಲು ಸದಾಶಿವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಭಾರತೀಯ ವಾಯುಸೇನೆ ಮಾಜಿ ಯೋಧ ಜೆಡಬ್ಲ್ಯೂ ಮಹಾಬಲ ಭಂಡಾರಿ, ಅರಣ್ಯ ಇಲಾಖೆ ಎಸಿಎಫ್ಓ ಪಿ. ಶ್ರೀಧರ್, ನಾಗರಿಕ ಸಮಿತಿ (ರಿ) ಮಂಗಳೂರು ತಾಲೂಕು ಇದರ ಅಧ್ಯಕ್ಷ ಶುಭಾಶ್ಚಂದ್ರ ಶೆಟ್ಟಿ ಹೊಸಬೆಟ್ಟು, ಮೂಡಬಿದ್ರಿಯ ಸಸ್ಯ ಸಾಮ್ರಾಜ್ನಿ ಅಸ್ಮಭಾನು, ಸಮಾಜ ಸೇವಕ ಸತೀಶ್ ಸದಾನಂದ, ಕೃಷಿಕ ಸತೀಶ್ ಎಂ ಶೆಟ್ಟಿ ಪಂಜ ಬೈಲಗುತ್ತು ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕೃಷಿ ಸಮಿತಿ ಸಂಚಾಲಕ ಮೇಬೈಲು ಸದಾಶಿವ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿದರು. ಹರೀಶ್ ಶೆಟ್ಟಿ ಇಡ್ಯ ವಂದಿಸಿದರು. ಅರ್ಪಿತಾ ಶಿಶಿರ್ ಶೆಟ್ಟಿ ಕಾರ್ಯಕ್ರಮ‌ ನಿರ್ವಹಿಸಿದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ