ಸಂಘಟನೆಯಿದ್ದಲ್ಲಿ ಅಭಿವೃದ್ಧಿ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು

ಉಡುಪಿ : ಯಾವುದೇ ಸಮುದಾಯ ಸಂಘಟಿತವಾಗಿ, ಒಗ್ಗಟ್ಟಿನಿಂದ ಇದ್ದರೆ ಅದನ್ನು ಸಮಾಜ ಗುರುತಿಸುತ್ತದೆ. ಆ ಸಮುದಾಯದ ಬೇಡಿಕೆಗಳು ಈಡೇರುತ್ತವೆ. ಸಮಸ್ಯೆಗಳು ಬಗೆ ಹರಿಯುತ್ತವೆ. ಕಲೆ, ಸಂಸ್ಕೃತಿಯ ಬೆಳವಣಿಗೆಯಾಗುತ್ತದೆ. ಈ ನಿಟ್ಟಿನಲ್ಲಿ ಅಂಜಾರು ಶ್ರೀ ದುರ್ಗಾಪರಮೇಶ್ವರಿ ಮರಾಟಿ ಕಲಾ ಸಂಘ ಉತ್ತಮ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಇತ್ತೀಚಿಗೆ ಹಿರಿಯಡಕ ಸಮೀಪದ ಅಂಜಾರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆದ ಅಂಜಾರು ಶ್ರೀ ದುರ್ಗಾಪರಮೇಶ್ವರಿ ಮರಾಟಿ ಸಮುದಾಯ ಕಲಾ ಸಂಘದ 14ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ನಮ್ಮ ಸಂಸ್ಕೃತಿ, ನಮ್ಮ ಜಾನಪದ ಆಚರಣೆಗಳು ಉಳಿಯಬೇಕಾದರೆ ಸಂಘಟಿತರಾಗಿದ್ದರೆ ಮಾತ್ರ ಸಾಧ್ಯ. ಪ್ರಸ್ತುತ ಮರಾಟಿ ಸಮುದಾಯ ಜನಸಂಖ್ಯೆಯಲ್ಲಿ ಕಡಿಮೆಯಾಗಿದ್ದರೂ, ಸಾಂಸ್ಕೃತಿಕ ದೃಷ್ಟಿಯಿಂದ ಅತ್ಯಂತ ಶ್ರೀಮಂತವಾಗಿದೆ. ಈ ಸಮಾಜದ ಗೋಂದೊಳು, ಹೋಲಿ ಕುಣಿತಕ್ಕೆ ಹೆಚ್ಚಿನ ಮನ್ನಣೆ ಸಿಗಬೇಕು. ಹಲವಾರು ಮರಾಟಿ ತಂಡಗಳು, ಉತ್ತಮ ಕಲಾ ತಂಡಗಳಿದ್ದರೂ ಸೂಕ್ತ ಅವಕಾಶ ವಂಚಿತರಾಗಿದ್ದಾರೆ ಎಂದು ಅವರು ತಿಳಿಸಿದರು.

ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷನಾಗಿ ನಾನು ಕಲಾಮಯಂ ಎಂಬ ಕಲಾತಂಡಕ್ಕೆ ಪ್ರೋತ್ಸಾಹ ನೀಡಿದ್ದರ ಪರಿಣಾಮವಾಗಿ ಆ ತಂಡ ಇಂದು ಬಿಡುವಿಲ್ಲದ ಕಾರ್ಯಕ್ರಮಗಳ ಮೂಲಕ ಜನಪ್ರಿಯವಾಗಿದೆ. ಒಂದಷ್ಟು ಯುವ ಪ್ರತಿಭೆಗಳು ಸಂಘಟಿತರಾಗಿ ಅದನ್ನು ಬೆಳೆಸುತ್ತಿದ್ದಾರೆ. ಮರಾಟಿ ಕಲಾತಂಡಗಳು ಕೂಡಾ ಇದೇ ರೀತಿ ಬೆಳೆಯಲು ಸಮಾಜದ ಪ್ರೋತ್ಸಾಹದ ಅಗತ್ಯವಿದೆ. ಅವರ ಗೋಂದೋಳು, ಹೋಲಿ ಕುಣಿತದಂತಹ ಜಾನಪದ ಪ್ರಕಾರಗಳು ನಾಡಿಗೆ ಪರಿಚಯವಾಗಬೇಕು. ಈ ಕಲಾಪ್ರಕಾರ ಉಳಿಯಬೇಕು, ಬೆಳೆಯಬೇಕು ಎಂಬುದೇ ನನ್ನ ಸದಾಶಯ. ಈ ನಿಟ್ಟಿನಲ್ಲಿ ಮರಾಟಿ ಸಂಘಕ್ಕೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಘದ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಮಾತನಾಡಿ, 2010ರಲ್ಲಿ ಪ್ರಾರಂಭವಾದ ಈ ಸಂಸ್ಥೆ, ಇದೀಗ 14ನೇ ವರ್ಷದ ಕಾರ್ಯಕ್ರಮವನ್ನು ನಡೆಸುತ್ತಿದೆ. ಮರಾಟಿ ಸಮುದಾಯ ಸುಮಾರು 12-13ನೇ ಶತಮಾನದಲ್ಲಿ ಇಲ್ಲಿಗೆ ಬಂದು ನೆಲೆ ನಿಂತು, ಅನ್ಯ ಸಮುದಾಯದ ಜೊತೆಗೆ ಸೌಹಾರ್ದವಾಗಿ ಬದುಕಿ, ತುಳು ನಾಡಿನ ಸಂಸ್ಕೃತಿಯ ಜೊತೆಗೆ ತನ್ನ ಸಂಸ್ಕೃತಿಯನ್ನು ಬೆಳೆಸಿಕೊಂಡಿದೆ. ಹೊಳೆ ಬದಿ ಕೃಷಿ, ಕುಮೇರಿ ಬೇಸಾಯದಲ್ಲಿ ತೊಡಗಿಸಿಕೊಂಡು ಕಷ್ಟ ಸಹಿಷ್ಣುಗಳಾಗಿ ಬದುಕನ್ನು ಸಾಗಿಸುತ್ತಿದ್ದಾರೆ. ಹೋಳಿ ಕುಣಿತ, ಭೈರವಾರಾಧನೆ. ಗೋಂದೋಳು ಮೊದಲಾದ ಜಾನಪದ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದೆ. ಸಮಾಜದಿಂದ ಬಂದ ದೇಣಿಗೆಯನ್ನು ಸಮಾಜಕ್ಕೆ ಮೀಸಲಿಟ್ಟಿದ್ದೇವೆ. ಸಂಘದ ವತಿಯಿಂದ ಮರಾಟಿ ಜನಾಂಗದ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹದ ಜೊತೆಗೆ ಬೇಸಗೆ ಶಿಬಿರವನ್ನು ಆಯೋಜಿಸಿ ಅಲ್ಲಿ ಚಿತ್ರಕಲೆ, ಭಜನೆ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಆಚರಣೆಗಳ ಬಗ್ಗೆಯೂ ಹೇಳಿ ಕೊಡುತ್ತಿದ್ದೇವೆ, ಸಮಾಜದ ವಿಶೇಷವಾಗಿ ಗೋಂದೋಳು ಆಚರಣೆ ಬಗ್ಗೆ ಪುಸ್ತಕವನ್ನು ಪ್ರಕಟಿಸಿದ್ದೇವೆ. ಈ ಮೂಲಕ ಮರಾಟಿ ಸಮುದಾಯದ ಬಗ್ಗೆ ಸಾಮಾಜಿಕ ಅರಿವನ್ನು ಮೂಡಿಸುವ ಕಾರ್ಯ ನಿರಂತರವಾಗಿ ಸಾಗಿದೆ ಎಂದರು. ಮರಾಟಿ ಸಮುದಾಯದ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆ ಇದೆ. ಹೆಚ್ಚಿನವರು ಎಸ್‌ಎಸ್‌ಎಲ್‌ಸಿಯಲ್ಲಿಯೇ ಶಿಕ್ಷಣವನ್ನು ಮೊಟಕುಗೊಳಿಸಿ ಸಣ್ಣಪುಟ್ಟ ಜೀವಾನಾಧಾರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಸಮಾಜದ ಅಭಿವೃದ್ಧಿಗೆ ಸಮಾಜದ ಪ್ರೋತ್ಸಾಹ ಅಗತ್ಯವಿದೆ. ಪ್ರಸ್ತುತ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ನಮಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ. ಜಾನಪದ ವೈಭವದ ನಮ್ಮ ಕಲೆ, ಸಾಂಸ್ಕೃತಿ ಆಚರಣೆಗೆ ಪ್ರೋತ್ಸಾಹ ನೀಡಿರುವುದಲ್ಲದೆ ಕೊರೊನಾದ ಸಂಕಷ್ಟದ ಸಂದರ್ಭದಲ್ಲಿ ಸಮುದಾಯದ 150ಕ್ಕೂ ಕಲಾವಿದರಿಗೆ ನೆರವಿನ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮರಾಟಿ ಸಂಘದ ಮಾಜಿ ಅಧ್ಯಕ್ಷ ಅನಂತ ನಾಯ್ಕ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಡಿಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್ ಮಡಿವಾಳ, ಸದಸ್ಯೆ ಯಶೋಧಾ, ವಿನಯ ಕುಮಾರ್, ಉದ್ಯಮಿಗಳಾದ ಸದಾನಂದ ಪ್ರಭು, ಸಂತೋಷ್ ಪಕ್ಕಾಲ್, ಅಂಜಾರು ಮಠದ ಸೀತಾರಾಮ ಆಚಾರ್ಯ, ಸಂಧ್ಯಾ ಕಾಮತ್ ಹಿರಿಯಡಕ ಉಪಸ್ಥಿತರಿದ್ದರು.

Related posts

SII 2025 ಗ್ರೀನ್ ಶ್ರೇಯಾಂಕಗಳ ಪ್ಲಾಟಿನಂ+ ಬ್ಯಾಂಡ್‌ನಲ್ಲಿ ಮಾಹೆಗೆ ಅಗ್ರ ಸ್ಥಾನ

ಋಷಿಯಾಗದವ, ಖುಷಿ ಇಲ್ಲದವ ಕವಿಯಾಗಲಾರ – ಹೆಚ್ ಡುಂಡಿರಾಜ್​

ಬೈಕ್‌ನಲ್ಲಿ ಬಂದು ಮಹಿಳೆಯ ಸರ ಎಗರಿಸಿದ ಕಳ್ಳನ ಬಂಧನ