ಜಾತಿ ಪ್ರಮಾಣ ಪತ್ರ ನಿರಾಕರಣೆ; ಅಲೆಮಾರಿ ಜನಾಂಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕು : ರವೀಂದ್ರ ಶೆಟ್ಟಿ ಉಳಿದೊಟ್ಟು

ಉಡುಪಿ : ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಶೋಚನೀಯ ರೀತಿಯಲ್ಲಿ ಜೀವನ ಸಾಗಿರುತ್ತಿರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರು ವಸತಿ, ನಿವೇಶನ, ಮಕ್ಕಳಿಗೆ ಶಿಕ್ಷಣ ಮುಂತಾದ ಎಲ್ಲಾ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.

ಉಡುಪಿಯ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜನಾಂಗದ ಮಕ್ಕಳು ಶೈಕ್ಷಣಿಕ ವ್ಯವಸ್ಥೆಯಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು ಕಡೆ ರಾಜ್ಯದ ಕೆಲವು ತಾಲೂಕಿನ ತಹಶೀಲ್ದಾರರು ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಆಗುವುದಿಲ್ಲ ಎನ್ನುತ್ತಾರೆ. ಇನ್ನೊಂದು ಕಡೆ ಈ ಜನಾಂಗದ ವಿದ್ಯಾರ್ಥಿಗಳ ಪ್ರವೇಶಾತಿ ಸಂದರ್ಭದಲ್ಲಿ ಮೊರಾರ್ಜಿ ವಸತಿ ಶಾಲೆಯ ಪ್ರಾಚಾರ್ಯರು ಅಲೆಮಾರಿ ಜನಾಂಗ ಎಂದು ನಮೂದಿಸಿರುವ ಜಾತಿ ಪ್ರಮಾಣ ಪತ್ರವನ್ನೇ ತರಬೇಕೆಂದು ದಾಖಲಾತಿಯನ್ನು ನಿರಾಕರಣೆ ಮಾಡುತ್ತಿದ್ದಾರೆ. ಇದರಿಂದ ಈ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ ಎಂದರು. ನಮ್ಮ ರಾಜ್ಯದಲ್ಲಿರುವ ಎಲ್ಲಾ ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಲ್ಲಾ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ನ್ಯಾಯ ದೊರಕಿಸುವ ಕೆಲಸವನ್ನು ಸರಕಾರ ಮಾಡಬೇಕಾಗಿದೆ. ಸಿಇಟಿ ಮತ್ತು ನೀಟ್ ಪರೀಕ್ಷೆಯಲ್ಲಿ ಎಸ್.ಎಸಿ ಮತ್ತು ಎಸ್ಟಿ ಜನಾಂಗದ ವಿದ್ಯಾರ್ಥಿಗಳಲ್ಲಿ ನೀಡುವ ಮಾನದಂಡವನ್ನು ನಮ್ಮ ಅಲೆಮಾರಿ ಓಬಿಸಿ, ಎಸ್.ಎಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೂ ಅನುಸರಿಸಬೇಕು. ರಾಜ್ಯದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ನಮ್ಮ ಪ್ರತಿಭಾನ್ವಿತ ಅಲೆಮಾರಿ ವಿದ್ಯಾರ್ಥಿಗಳಿಗೆ ಸರಕಾರವೇ ಶುಲ್ಕವನ್ನು ಭರಿಸಿ ಪ್ರವೇಶಾತಿಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಸರಕಾರಿ ಜಾಗದಲ್ಲಿ ಕಳೆದ 10 ವರ್ಷಗಳಿಗಿಂತ ಹೆಚ್ಚು ಕಾಲ ಡೇರೆ, ಗುಡಿಸಲು, ಟೆಂಟ್ ಹಾಕಿ ಜೀವನ ನಡೆಸುತ್ತಿರುವವರಿಗೆ ಆ ಜಾಗವನ್ನು ಅವರ ಹೆಸರಿನಲ್ಲಿಯೇ ಪಹಣಿ ಪತ್ರ ನೀಡಬೇಕು. ಪ್ರತೀ ಜಿಲ್ಲೆ ತಾಲೂಕಿಗೆ ಸಂಬಂಧಿಸಿದಂತೆ ಅಲೆಮಾರಿ ಸಮುದಾಯ ಭವನ ನಿರ್ಮಿಸಬೇಕು. ಅಲೆಮಾರಿ ಜನರ ಅಂತಿಮ ಸಂಸ್ಕಾರಕ್ಕೆ ಅಲೆಮಾರಿ ರುದ್ರಭೂಮಿಯನ್ನು ನಿರ್ಮಿಸಿಕೊಡಬೇಕು. ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವುದರ ಮೂಲಕ ನೇರಸಾಲ, ಗಂಗಾ ಕಲ್ಯಾಣ, ಭೂಖರೀದಿ ಯೋಜನೆ, ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ಉನ್ನತ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲ ಯೋಜನೆ, ಸ್ವ ಉದ್ಯೋಗ, ಉದ್ಯಮಶೀಲತಾ ತರಬೇತಿ ಮುಂತಾದವುಗಳ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಕಾಶ್ ಎಂ.ಬೆಂಗಳೂರು, ಉಪಾಧ್ಯಕ್ಷರುಗಳಾದ ಅನಂತ ಕೃಷ್ಣ ಯಾದವ್, ಶಿವರಾಮ ರಘು ಬಳೇಗಾರ್, ಎಚ್.ಇ.ತೋಟಪ್ಪ ಶಿವಮೊಗ್ಗ, ಯುವ ಘಟಕದ ರಾಜ್ಯಾಧ್ಯಕ್ಷ ವೈ.ಕುಮಾರ್ ಮೈಸೂರು, ಉಡುಪಿ ಜಿಲ್ಲಾಧ್ಯಕ್ಷ ಕೃಷ್ಣಯ್ಯ ಜೋಗಿ, ಮಹಿಳಾ ಘಟಕದ ಅಧ್ಯಕ್ಷೆ ಅನುಪಮಾ ಜೋಗಿ, ಯುವ ಘಟಕದ ಜಿಲ್ಲಾಧ್ಯಕ್ಷ ರಾಜೇಶ್, ಜಿಲ್ಲಾ ಪ್ರಧಾನ ಸಂಚಾಲಕ ಕೇಶವ ಕೋಟೇಶ್ವರ, ಗೌರವಾಧ್ಯಕ್ಷ ಪುಟ್ಟಣ್ಣ ಯಾದವ್ ಉಪಸ್ಥಿತರಿದ್ದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ