ಉಡುಪಿ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ರೈಲ್ವೇ ರಾಜ್ಯ ಸಚಿವರನ್ನು ಭೇಟಿಯಾಗಿ ಮತ್ಸ್ಯಗಂಧ ರೈಲಿಗೆ 2024ರಲ್ಲಿ ತಯಾರಾದ ಹೊಸ LHB ಕೋಚ್‌ಗಳ ಜೊತೆಗೆ 2020ರಲ್ಲಿ ತಯಾರಾದ ಹಳೆಯ LHB ಕೋಚ್‌ಗಳನ್ನು ಸೇರಿಸುವ ಇಲಾಖೆಯ ಕಾರ್ಯವನ್ನು ಸಚಿವರ ಗಮನಕ್ಕೆ ತಂದಿದ್ದಾರೆ. ಮತ್ಸ್ಯಗಂಧ ರೈಲಿನ ಎಲ್ಲಾ ಟ್ರಿಪ್‌ಗಳಿಗೂ ದೂರುಗಳು ಬಾರದಂತೆ ಉತ್ತಮ 2024ರ ಕೋಚ್‌ಗಳನ್ನೇ ಬಳಸುವಂತೆ ಸಂಬಂಧಿಸಿದ ಜೋನಲ್ ರೈಲ್ವೇಗಳಿಗೆ ತಿಳಿಸಲು ಕೋರಿದ್ದು, ಸಚಿವರಿಂದ ಈ ಬಗ್ಗೆ ಸಕಾರತ್ಮಕ ಪ್ರತಿಕ್ರಿಯೆ ಲಭಿಸಿದೆ ಎಂದು ಸಂಸದರು ತಿಳಿಸಿದ್ದಾರೆ.
ಕರಾವಳಿ ಹಾಗೂ ಮುಂಬೈ ಬೆಸೆಯುವ ಮತ್ಸ್ಯಗಂಧ ರೈಲು ಇದೀಗ LHB ಕೋಚುಗಳೊಂದಿಗೆ ಕಳೆದ ಪೆಬ್ರವರಿ 17ರಿಂದ ಮೇಲ್ದರ್ಜೆಗೇರಿದ್ದು ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣದ ಭರವಸೆ ನೀಡಿದೆ.
ಆದರೆ ಮತ್ಸ್ಯಗಂಧ ರೈಲಿನ ಎರಡೂ ರೇಕುಗಳ ಜತೆ ಮಂಗಳೂರು ಮತ್ತು ಕೇರಳದ ತಿರುವನಂತಪುರಂ ನಡುವೆ ಓಡುವ ಇನ್ನೊಂದು ರೈಲಿನ ರೇಕುಗಳ ಹೊಂದಾಣಿಕೆ ವ್ಯವಸ್ಥೆ ಇದ್ದು, ಈ ರೈಲಿನ ಎರಡು ರೇಕೂಗಳೂ ಸೇರಿ 2024ರ ಎರಡು ಹೊಸ ರೇಕುಗಳ ಜತೆ ಮತ್ತೆರಡು 2020ರ ಹಳೇ ರೇಕುಗಳೂ ಸೇರಿಕೊಂಡ ಕಾರಣ, ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಕೆಲವು ಟ್ರಿಪ್‌ಗಳಲ್ಲಿ ಹಳೆಯ LHB ರೇಕುಗಳು ಸೇರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಕೋಚುಗಳ ಸಮಸ್ಯೆಗಳ ಬಗ್ಗೆ ಬಂದ ದೂರುಗಳು ಸಂಸದರಿಗೆ ತಲುಪಿತ್ತು. ಈಗಾಗಲೇ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ತಿಳಿಸಿದ್ದು ಜತೆಗೆ ಈ ಬಗ್ಗೆ ಸಮಸ್ಯೆ ಪರಿಹಾರಕ್ಕೆ ಸಂಸದರು ಸಚಿವರನ್ನು ಭೇಟಿಯಾಗಿದ್ದರು.
ಮಂಗಳೂರು ಮುಂಬಯಿ ನಡುವೆ ಓಡುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿಗೆ ಉತ್ತಮ ಕೋಚುಗಳನ್ನಷ್ಟೇ ಜೋಡಿಸಲು ತಿಳಿಸಿದ್ದು, ಹಳೆಯ ಕೋಚುಗಳನ್ನು ಅಳವಡಿಸುವ ಪದ್ದತಿಗೆ ಮತ್ತು ಹೊಸ ಹಾಗು ಹಳೇ ಕೋಚುಗಳ ಮಿಶ್ರಣ ಮಾಡಿ ಓಡಿಸುವ ಪದ್ದತಿಯನ್ನು ಅನುಸರಿಸದಂತೆ ಸಚಿವರಿಗೆ ಸಂಸದರು ಮನವಿ ಮಾಡಿದ್ದಾರೆ. ಸಚಿವರು ಈ ಬಗ್ಗೆ ಮತ್ಸ್ಯಗಂಧ ರೈಲಿನ ಮೂಲ ವಲಯವಾದ ದಕ್ಷಿಣ ರೈಲ್ವೇಗೆ ತಕ್ಷಣವೇ ಸಮಸ್ಯೆ ಪರಿಹರಿಸಲು ಸೂಚನೆ ನೀಡಿದ್ದಾರೆ ಎಂದು ಸಂಸದರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.