ಬಿಪಿಎಲ್ ಕಾರ್ಡ್ ರದ್ದತಿ ಸಮರ್ಥಿಸಿಕೊಂಡ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯ ಹೇಳಿಕೆಯಿಂದ ಕಾಂಗ್ರೆಸ್ ಬಡವರ ಮೇಲಿನ ಕಾಳಜಿ ಬಯಲು : ದಿನೇಶ್ ಅಮೀನ್ ವ್ಯಂಗ್ಯ

ಉಡುಪಿ : ಉಡುಪಿ ಜಿಲ್ಲೆಗೆ ಯಾವುದೇ ಅನುದಾನ ನೀಡದೆ ನಿರ್ಲಕ್ಷ್ಯವಹಿಸಿರುವ ಬಗ್ಗೆ ಉಡುಪಿ ಶಾಸಕರು ರಾಜ್ಯ ಸರ್ಕಾರದ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ ಕೂಡಲೇ ಬುಡಕ್ಕೆ ಬೆಂಕಿ ಬಿದ್ದಂತೆ ಎದ್ದು ಬಿದ್ದು ಶಾಸಕರ ವಿರುದ್ಧ ಪತ್ರಿಕಾ ಹೇಳಿಕೆ ನೀಡುವ ಭರದಲ್ಲಿ ಪ್ರಸಾದ್ ಕಾಂಚನ್ ರಾಜಕೀಯವಾಗಿ ತಮ್ಮ ಬೌದ್ಧಿಕ ಅಜ್ಞಾನವನ್ನು ಜನತೆಯ ಮುಂದೆ ಬಿಚ್ಚಿಟ್ಟಿದ್ದಾರೆ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್ ವ್ಯಂಗ್ಯವಾಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 30 ಸಾವಿರ ಅಂತರದಲ್ಲಿ ಸೋತು ಸುಣ್ಣವಾಗಿರುವ ಪ್ರಸಾದ್ ಕಾಂಚನ್ ಇದೀಗ ಶಾಸಕರ ವಿರುದ್ಧ ಪತ್ರಿಕಾ ಹೇಳಿಕೆ ಭರದಲ್ಲಿ ಉಡುಪಿ ಜಿಲ್ಲೆಯಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡುವ ನೆಪದಲ್ಲಿ ಸರಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುವ ಮೂಲಕ ಬಡವರ ಮೇಲಿನ ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯವನ್ನು ಬಯಲು ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಸಂದರ್ಭದಲ್ಲಿ ಆಮದು ಅಭ್ಯರ್ಥಿಯಾಗಿ ಕಾಂಗ್ರೆಸ್ ಕಾರ್ಯಕರ್ತರ ವಿಶ್ವಾಸ ಗಳಿಸಲು ವಿಫಲರಾದ ಪ್ರಸಾದ್ ಇದೀಗ ಕಾಂಗ್ರೆಸ್ ಮುಖಂಡರ ಓಲೈಕೆಗಾಗಿ ಇಂತಹ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ.

ಉಡುಪಿ ಶಾಸಕರು ಪರಾಜಿತ ಅಭ್ಯರ್ಥಿ ಸಹಿತ ಕಾಂಗ್ರೆಸ್ ನಾಯಕರಿಗೆ ಉಡುಪಿ ಜನತೆಯ ಬಗ್ಗೆ ಕಾಳಜಿ ಇದ್ದರೆ ಅಭಿವೃದ್ದಿಗೆ ರಾಜ್ಯ ಸರ್ಕಾರ ನೀಡಿದ್ದ ಅನುದಾನದ ಬಗ್ಗೆ ಶಾಸಕರ ಜೊತೆ ದಾಖಲೆಯೊಂದಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿದ್ದರೂ ಈವರೆಗೆ ಮುಂದೆ ಬಂದಿಲ್ಲ.

ರಾಜ್ಯ ಸರಕಾರ ಬಿಲ್ ಪಾವತಿಗೆ ಅನುದಾನ ನೀಡದೆ ಶಾಲಾ ಕಾಲೇಜು, ಪ್ರವಾಸಿ ಮಂದಿರ, ಪಡುಬಿದ್ರಿ ಗ್ರಾಮ ಪಂಚಾಯತ್ ಕಚೇರಿಯ ವಿದ್ಯುತ್ ಸಂಪರ್ಕ ಕಡಿತ ಮಾಡಿರುವ ಮೆಸ್ಕಾಂ ಬಗ್ಗೆ ಚಕಾರ ಎತ್ತದೇ ಬಡ ಮಕ್ಕಳ ಶಿಕ್ಷಣದ ಬಗ್ಗೆ ತಮ್ಮ ನಿರ್ಲಕ್ಷ್ಯತೆಯನ್ನು ಪ್ರದರ್ಶಿಸಿದ್ದಾರೆ.

ಖುದ್ದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೇ ಜನವರಿ 17 2024 ರಂದು ಮಾಧ್ಯಮಗಳ ಮುಂದೆ ಉಡುಪಿ ನಗರದ ಮೂಲಸೌಕರ್ಯ ಅಭಿವೃದಿಗೆ 10 ಕೋಟಿ ಅನುದಾನದ ಘೋಷಣೆ ಮಾಡಿದ್ದರೂ, ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದ ಮುಂದೆಯೇ ಯಾವುದೇ ಅನುದಾನ ಘೋಷಿಸಿಲ್ಲ ಎಂದು ತಮ್ಮ ಅಜ್ಞಾನವನ್ನು ಜನತೆಯ ಮುಂದೆ ಬಿಚ್ಚಿಟ್ಟಿದ್ದಾರೆ.

ತಮ್ಮದೇ ಬಡಾನಿಡಿಯೂರು ಗ್ರಾಮದಲ್ಲಿ ಕಾನೂನುಬಾಹಿರವಾಗಿ ಅಕ್ರಮ ರೆಸಾರ್ಟ್ ನಿರ್ಮಾಣದ ಬಗ್ಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರೂ, ಬಂಡವಾಳಶಾಹಿಗಳ ಜೊತೆ ಶಾಮೀಲಾಗಿ ಒಳ ಒಪ್ಪಂದ ಮಾಡಿರುವುದನ್ನು ಜನತೆ ಇನ್ನೂ ಮರೆತಿಲ್ಲ.

ಅಂಗನವಾಡಿ ಕಾರ್ಯಕರ್ತರ ಸಂಬಳ ಬಾಕಿ, ಅಭಿವದ್ಧಿ ಕಾಮಗಾರಿ ಅನುದಾನ ಕೊರತೆ ಬಗ್ಗೆ ಕಾಂಗ್ರೆಸ್ ಶಾಸಕರೇ ಮಾಧ್ಯಮದಲ್ಲಿ ಹೇಳಿಕೆ ನೀಡುತ್ತಿದ್ದರೂ, ಕ್ಷೇತ್ರದ ಶಾಸಕರಿಗೆ ಬಿಟ್ಟಿ ಸಲಹೆ ನೀಡಿ ಜನರ ಮುಂದೆ ತಮ್ಮ ಅಜ್ಞಾನ ಪ್ರದರ್ಶನ ಮಾಡುತ್ತಿದ್ದಾರೆ

ಸದಾ ಶಾಸಕರ ವಿರುದ್ಧ ಹೇಳಿಕೆ ನೀಡುತ್ತಾ ಪ್ರಚಾರ ಬಯಸುವ ಬದಲು ತಮ್ಮದೇ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಗೆ ಈಗಾಗಲೇ ಜಿಲ್ಲಾಧಿಕಾರಿಗಳು ವರದಿ ನೀಡಿರುವ ಪ್ರಾಕೃತಿಕ ವಿಕೋಪದ ಹಾನಿಯ ಪರಿಹಾರ ಬಿಡುಗಡೆ ಮಾಡಿಸಲು ಮನವಿ ಮಾಡಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !