ಮೂಡುಬಿದಿರೆ : ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ನೂತನ ಸಭಾಭವನ ನಿರ್ಮಾಣ ಸಮಿತಿ ನೇತೃತ್ವದಲ್ಲಿ 3 ಕೋ.ರೂ. ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ವಿಶ್ವಕರ್ಮ ಸಭಾಭವನದ ಲೋಕಾರ್ಪಣೆಯು ಭಾನುವಾರ ನಡೆಯಿತು.
ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಸರಸ್ವತಿ ಪೀಠಾಧೀಶ್ವರ ಜಗದ್ಗುರು ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಅರಕಲಗೂಡು, ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಶಿವಸುಜ್ಞಾನಮೂರ್ತಿ ಸ್ವಾಮೀಜಿ ಭವನವನ್ನು ಉದ್ಘಾಟಿಸಿದರು.
ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಉತ್ತಮ ಕಾರ್ಯ ಸಾಧನೆಗೆ ಬೇಕಾದುದು ಸಲಕರಣೆ ಅಲ್ಲ ಸಂಕಲ್ಪ. ತಾನೊಬ್ಬ ಶಿಕ್ಷಕ, ಅರ್ಚಕ ತನ್ನಿಂದೇನಾದೀತೆಂಬ ಭಾವ ತೊರೆದು ಎಲ್ಲವೂ ಸಾಧ್ಯ ಎಂಬ ಸಂಕಲ್ಪ ತೊಟ್ಟ ಜಯಕರ ಆಚಾರ್ಯ, ಸುಂದರ ವಿನ್ಯಾಸ ನೀಡಿದ ಸುಂದರ ಆಚಾರ್ಯ, ವೇದಿಕೆ ಪ್ರಾಯೋಜಿಸಿ ಆನಂದವಿತ್ತ ಆನಂದ ಆಚಾರ್ಯ, ದಾನಿಗಳೆಲ್ಲರಿಂದಾಗಿ ಈ ಭವನ ಸುಂದರವಾಗಿ ನಿರ್ಮಾಣವಾಗಿದೆ. ಆಶಕ್ತರಿಗೆ ಹಾಗೂ ಶೈಕ್ಷಣಿಕವಾಗಿ ನೆರವಾಗಿ ಎಂದು ನುಡಿದರು.
ಶಿವ ಸುಜ್ಞಾನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಗುರು ಮತ್ತು ದೇವರ ಮೇಲೆ ಶ್ರದ್ಧಾಭಕ್ತಿ ಇರಿಸಿಕೊಂಡಾಗ ಎಲ್ಲ ಕಾರ್ಯವೂ ಹೂವೆತ್ತಿದಂತೆ ಆಗುತ್ತದೆ. ಯಾವ ಸಮುದಾಯ ತಮ್ಮ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಂಡು ಬರುವುದೋ ಆ ಸಮುದಾಯ ಪ್ರಗತಿಪಥದಲ್ಲಿ ಸಾಗುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಮಾತನಾಡಿ, ದೇಶದ ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾದದ್ದು. ತಾಳ್ಮೆ, ಸೃಜನಶೀಲತೆ, ಬದ್ದತೆ, ಪರಿಶ್ರಮ ಈ ಸಮುದಾಯಕ್ಕೆ ದೇವರು ಕೊಟ್ಟ ಕೊಡುಗೆಯಾಗಿದೆ ಎಂದರು.
ದೇವಳದ ಆಡಳಿತ ಮೊಕ್ತೇಸರ ಪುರೋಹಿತ ಎನ್.ಜಯಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಉಮಾನಾಥ ಎ.ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್ , ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಆನೆಗುಂದಿ ಮಹಾ ಸಂಸ್ಥಾನದ ಅಧ್ಯಕ್ಷ ಶ್ರೀಧರ ಆಚಾರ್ಯ, ದ.ಕ, ಉಡುಪಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಪುರಸಭೆ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸದಸ್ಯೆ ಶ್ವೇತಾ ಕುಮಾರಿ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ., ಶ್ರೀ ಹನುಮಂತ, ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಉಮೇಶ್ ಜಿ.ಪೈ, ಅಲಂಗಾರು ಬಡಗು ಶ್ರೀ ಮಹಾಲಿಂಗೇಶ್ವರ ದೇವಳದ ಅರ್ಚಕ ಸುಬ್ರಹ್ಮಣ್ಯ ಭಟ್, ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಳದ ಆಡಳಿತ ಮೊಕ್ತೇಸರ ರಘುನಾಥ ಎಲ್. ವಿ,ಎಸ್.ಕೆ.ಜಿ.ಐ. ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ, ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿವಿಧ ಕಾಳಿಕಾಂಬಾ ದೇಗುಲಗಳ ಮುಖ್ಯಸ್ಥರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಕೆ. ಪ್ರಭಾಕರ ಆಚಾರ್ಯ ಮಧೂರು, ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಉಮೇಶ ಆಚಾರ್ಯ ಮಂಗಳೂರು, ಸಿಎ ಶ್ರೀಧರ ಆಚಾರ್ಯ, ಪನ್ವೇಲ್, ಮುರಹರಿ ಆಚಾರ್ಯ ಕಟಪಾಡಿ, ಕ್ಷೇತ್ರದ ಮೊಕ್ತೇಸರ ಎಂ.ಕೆ. ಬಾಲಕೃಷ್ಣ ಆಚಾರ್ಯ. ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ್ ಆಚಾರ್ಯ, ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಎಸ್. ಆಚಾರ್ಯ, ಸಭಾಭವನ ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಸತೀಶ್ ಅಚಾರ್ಯ ಕಡಂದಲೆ, ಜತೆ ಕಾರ್ಯದರ್ಶಿಗಳಾದ ಶಿವರಾಮ ಆಚಾರ್ಯ, ಅರವಿಂದ ವೈ. ಆಚಾರ್ಯ, ಮಹೇಶ್.ಎನ್ ಗಂಟಾಲ್ಕಟ್ಟೆ ಉಪಸ್ಥಿತರಿದ್ದರು.
ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಎನ್. ಜಯಕರ ಆಚಾರ್ಯ, ಕಟ್ಟಡದ ಇಂಜಿನಿಯರ್, ವಿನ್ಯಾಸಕ ಸುಂದರ ಜಿ.ಆಚಾರ್ಯ, ಪ್ರಮುಖ ದಾನಿ ಆನಂದ ಆಚಾರ್ಯ ಉಜಿರೆ ಹಾಗೂ ಇತರ ದಾನಿಗಳನ್ನು ಸನ್ಮಾನಿಸಲಾಯಿತು.
ಕ್ಷೇತ್ರದ ಮೊಕ್ತೇಸರ ಉಳಿಯ ಶಿವರಾಮ ಆಚಾರ್ಯ ಸ್ವಾಗತಿಸಿದರು. ಧನಂಜಯ ಮೂಡುಬಿದಿರೆ, ಬೆಳುವಾಯಿ ಸೀತಾರಾಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಯಮುನಾ ಯೋಗೀಶ್ ಆಚಾರ್ಯ ಸನ್ಮಾನಿತರನ್ನು ಪರಿಚಯಿಸಿದರು.
ಬಳಿಕ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾಸಂಘದ ಸಂಯೋಜನೆಯಲ್ಲಿ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ ನಡೆಯಿತು.
ವಿಶ್ವಕರ್ಮ ಸಭಾಭವನದ ಉದ್ಘಾಟನೆಯ ಅಂಗವಾಗಿ ವೈದಿಕ ಸಂರಕ್ಷಣಾ ಸಭಾ ವತಿಯಿಂದ ಕ್ಷೇತ್ರದ ತಂತ್ರಿ ಕೇಶವ ಆಚಾರ್ಯ ಪುರೋಹಿತ್ ಆಚಾರ್ಯತ್ವದಲ್ಲಿ ವಿಶ್ವಕರ್ಮ ಯಜ್ಞ ಮತ್ತು ಮಹಾಪೂಜೆ ನಡೆಯಿತು.