ಬಿಪಿಎಲ್ ಕಾರ್ಡ್ ರದ್ದತಿ ತೀರ್ಮಾನ ರಾಜ್ಯ ಕಾಂಗ್ರೆಸ್ ಸರಕಾರದ ದಿವಾಳಿತನಕ್ಕೆ ಜ್ವಲಂತ ಸಾಕ್ಷಿ : ಕಿಶೋರ್ ಕುಮಾರ್ ಕುಂದಾಪುರ

ಬಡ ಮತ್ತು ಮಧ್ಯಮ ವರ್ಗದ ಜನತೆಯನ್ನು ಗ್ಯಾರಂಟಿಗಳ ಜಾಲಕ್ಕೆ ಸಿಲುಕಿಸಿ ವಾಮ ಮಾರ್ಗದಿಂದ ಅಧಿಕಾರಕ್ಕೇರಿದ ಕಾಂಗ್ರೆಸ್ ಇದೀಗ ಜನತೆಯನ್ನು ವಂಚಿಸಿ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳ ರದ್ದತಿಗೆ ತೀರ್ಮಾನ ಕೈಗೊಂಡಿರುವುದು ರಾಜ್ಯ ಸರಕಾರದ ದಿವಾಳಿತನಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಸುಮಾರು 30ರಿಂದ 40 ಸಾವಿರ ಕುಟುಂಬಗಳು ಸೇರಿದಂತೆ ರಾಜ್ಯಾದ್ಯಂತ ಸುಮಾರು 12 ಲಕ್ಷ ಕುಟುಂಬಗಳ ಮೇಲೆ ಬಿಪಿಎಲ್ ಕಾರ್ಡ್ ರದ್ಧತಿಯ ಕರಿ ನೆರಳು ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಪ್ರಕ್ರಿಯೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅನ್ನ ಯೋಜನೆಯಡಿ ಪ್ರತೀ ಕುಟುಂಬಕ್ಕೆ ವಿತರಿಸುತ್ತಿರುವ 5 ಕೆಜಿ ಅಕ್ಕಿ ಹಾಗೂ ಇತರ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಪಡೆಯದಂತೆ ರಾಜ್ಯ ಸರಕಾರ ತಡೆಯೊಡ್ದಲು ನಡೆಸುತ್ತಿರುವ ಹುನ್ನಾರದಂತಿದೆ.

ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಗ್ಯಾರಂಟಿಗಳನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸಲು ವಿಫಲವಾಗಿ, ನಿಷ್ಕ್ರಿಯವಾಗಿರುವ ಸರಕಾರ ಕೇವಲ ಹಗರಣಗಳ ಗೋಜಲಿನಲ್ಲಿ ಮುಳುಗಿರುವುದು ಶೋಚನೀಯ.

ಮುಡಾ ಹಗರಣದ ತನಿಖೆಯಿಂದ ತೀವ್ರ ಮುಖಭಂಗ ಅನುಭವಿಸುತ್ತಿರುವ ಕಳಂಕಿತ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಯ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಲು ವಿವಿಧ ರೀತಿಯ ಕಸರತ್ತುಗಳನ್ನು ನಡೆಸುತ್ತಿರುವುದು ಜಗಜ್ಜಾಹೀರಾಗಿದೆ. ಈ ಸರಕಾರ ಸಂಪೂರ್ಣವಾಗಿ ಜನತೆಯ ವಿಶ್ವಾಸವನ್ನು ಕಳೆದುಕೊಂಡಿದೆ.

ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣ ಸಹಿತ ವಿವಿಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿದ್ದರಾಮಯ್ಯ ಸಂಪುಟದ ಸದಸ್ಯರುಗಳ ಹೆಸರು ಮುನ್ನೆಲೆಗೆ ಬರುತ್ತಿದ್ದು, ಜನರ ತೆರಿಗೆ ಹಣದ ದುರ್ಬಳಕೆ ಮತ್ತು ದುರಾಡಳಿತದಿಂದ ರಾಜ್ಯದ ಬೊಕ್ಕಸವನ್ನು ಬರಿದಾಗಿಸಿರುವ ಕಾಂಗ್ರೆಸ್ ಸರಕಾರಕ್ಕೆ ನಾಡಿನ ಜನತೆ ಹಿಡಿಶಾಪ ಹಾಕುತ್ತಿರುವುದು ವಾಸ್ತವ.

ಈ ಹಿನ್ನೆಲೆಯಲ್ಲಿ ಹಣವಿಲ್ಲದೇ ಪರದಾಡುತ್ತಿರುವ ರಾಜ್ಯ ಸರಕಾರ, ತನ್ನ ಹುಳುಕನ್ನು ಮುಚ್ಚಿಡಲು ಅಮಾಯಕ ಜನತೆಯನ್ನು ಬಲಿಪಶು ಮಾಡುವುದು ನ್ಯಾಯ ಸಮ್ಮತವಲ್ಲ. ಸರಕಾರ ತಕ್ಷಣ ಬಿಪಿಎಲ್ ಕಾರ್ಡ್ ರದ್ದತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ತಪ್ಪಿದಲ್ಲಿ ನೊಂದ ಬಿಪಿಎಲ್ ಪಡಿತರ ಚೀಟಿದಾರರ ಪರ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್