ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ಉಡುಪಿ : ಕ್ಯಾಸನೂರು ಅರಣ್ಯರೋಗ ಅಥವಾ ಮಂಗನ ಜ್ವರ ಕಾಯಿಲೆ ಸಾಮಾನ್ಯವಾಗಿ ನವೆಂಬರ್‌ನಿಂದ ಜೂನ್ ವರೆಗೆ ಕಂಡುಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇವುಗಳ ನಿಯಂತ್ರಣಕ್ಕೆ ಇಲಾಖೆಗಳು ಸಮನ್ವಯದೊಂದಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಎಫ್‌ಡಿ ಹಾಗೂ ಇತರ ಪ್ರಾಣಿಜನ್ಯ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಆಯೋಜಿಸಲಾದ ಅಂತ‌ರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸಾಮಾನ್ಯವಾಗಿ ಪಶ್ಚಿಮ ಘಟ್ಟ ಪ್ರದೇಶಗಳು ಹಾಗೂ ಮಲೆನಾಡು ಭಾಗದಲ್ಲಿ ಕ್ಯಾಸನೂರು ಅರಣ್ಯರೋಗವು ಕಳೆದ ಹಲವು ವರ್ಷಗಳಿಂದ ಕಂಡು ಬರುತ್ತಿವೆ. ನಮ್ಮ ಜಿಲ್ಲೆಯಲ್ಲಿಯೂ ಸಹ ಕಾಡಂಚಿನ ಪ್ರದೇಶಗಳಲ್ಲಿ ಈ ಹಿಂದೆ ಆಗಿರುವುದು ಕಂಡು ಬಂದಿದೆ. ಆದರೆ ಪ್ರಸ್ತುತ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದರು.

ಉಷ್ಣಾಂಶ ಹೆಚ್ಚಿರುವ ನವೆಂಬರ್‌ನಿಂದ ಜೂನ್‌ವರೆಗೆ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಉರುವಲನ್ನು ತರಲು ಕಾಡಿಗೆ ಹೋಗಿ ಬಂದಾಗ ಅಥವಾ ಜಾನುವಾರುಗಳು ಕಾಡಿನಲ್ಲಿ ಮೇಯಲು ಹೋದಾಗ ಉಣ್ಣೆಗಳು ಅವುಗಳ ಜೊತೆಯಲ್ಲಿ ಬಂದು ಮನುಷ್ಯನಿಗೆ ಕಚ್ಚಿದಾಗ ಈ ಕಾಯಿಲೆ ಬರುತ್ತದೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು ಎಂದರು.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ