ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅಗತ್ಯ ಸಿದ್ಧತೆ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಮಣಿಪಾಲ : ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟಗಳು 2025ರ ಜನವರಿ 16ರಿಂದ 23ರ ವರೆಗೆ ನಡೆಯಲಿದ್ದು, ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಭಾಗಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಸಿದ್ಧತೆಗಳನ್ನು ಕೈಗೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿದ ರಾಜ್ಯ ಒಲಿಂಪಿಕ್ಸ್‌ ಕ್ರೀಡೆಗಳನ್ನು ಜಿಲ್ಲೆಯಲ್ಲಿ ಸಂಘ‍‌ಟಿಸುವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 13ಕ್ಕೂ ಹೆಚ್ಚು ಕ್ರೀಡೆಗಳು 8 ದಿನಗಳ ಕಾಲ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಮಾಹೆಯ ವಿ.ವಿ. ಕ್ರೀಡಾಂಗಣದಲ್ಲಿ ನಡೆಯಲಿದ್ದು, 3,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.

ಕ್ರೀಡಾಪಟುಗಳು, ಅಧಿಕಾರಿಗಳು, ತೀರ್ಪುಗಾರರು ಸಹಿತ ಕ್ರೀಡಾಕೂಟಕ್ಕೆ ಸಂಬಂಧಿಸಿದವರಿಗೆ ಅಗತ್ಯ ವಸತಿ ಸೌಕರ್ಯ, ಊಟೋಪಹಾರದ ವ್ಯವಸ್ಥೆ ಸಹಿತ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಕ್ರೀಡಾಕೂಟದ ಉದ್ಘಾಟನೆಗೆ ಮುಖ್ಯಮಂತ್ರಿಗಳು, ಸಚಿವರು ಬರುವ ಸಾಧ್ಯತೆಯಿದೆ ಎಂದರು.

ಮಾಹೆಯ ವಿ.ವಿ ಕ್ರೀಡಾಂಗಣದಲ್ಲಿ ಲಾನ್‌ ಟೆನಿಸ್‌, ಟೇಬಲ್‌ ಟೆನಿಸ್‌, ಬ್ಯಾಡ್ಮಿಂಟನ್‌, ಹಾಕಿ ನಡೆಯಲಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್‌, ಕಬಡ್ಡಿ, ಟೈಕೊಂಡ, ವಾಲಿಬಾಲ್‌ ಮೊದಲಾದ ಕ್ರೀಡೆಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಕ್ರೀಡೆಗೆ ಅನುಗುಣವಾಗಿ ಮೈದಾನವನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಬೇಕು. ಕ್ರೀಡಾಪಟು‌ಗಳಿಗೆ ಯಾವುದೇ ಕೊರತೆ ಆಗದಂತೆ ನೋಡಿ‌ಕೊಳ್ಳಲು ಮುಂದಾಗಬೇಕು ಎಂದು ಸೂಚಿಸಿದರು. ಕ್ರೀಡೆಗಳನ್ನು ಯಶಸ್ವಿಯಾಗಿ ನಡೆಸಲು ಉಪ ಸಮಿತಿಗಳನ್ನು ರಚಿಸಬೇಕು ಹಾಗೂ ಸ್ವಯಂ ಸೇವಕರನ್ನು ನಿಯೋಜಿಸಿ ಶಿಸ್ತುಬದ್ಧವಾಗಿ ಕ್ರೀಡಾ ಕೂಟ ನಡೆಸಲು ಇಲಾಖೆಯ ಅ‌ಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ., ಜಿ.ಪಂ. ಮುಖ್ಯ ಯೋಜನಾಧಿಕಾರಿ ಉದಯ್‌ ಕುಮಾರ್‌ ಶೆಟ್ಟಿ ಮತ್ತಿತರರು ಸಭೆಯಲ್ಲಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !