ಉಡುಪಿ ಭುಜಂಗ ಪಾರ್ಕ್‌ನಲ್ಲಿ ಮರಗಳ ಮಾರಣಹೋಮ; ಗುತ್ತಿಗೆದಾರನ ತರಾಟೆ, ದಂಡ ವಿಧಿಸಿದ ಪೌರಾಯುಕ್ತ

ಉಡುಪಿ : ಉಡುಪಿ ನಗರಸಭೆಯ ಅನುಮತಿ ಇಲ್ಲದೆ ನಗರದ ಭುಜಂಗ ಪಾರ್ಕ್‌‌ನಲ್ಲಿದ್ದ ನಾಲ್ಕೈದು ಮರಗಳನ್ನು ಕಡಿದು ಹಾಕಿದ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಪೌರಾಯುಕ್ತರು, ಆತನಿಗೆ 25ಸಾವಿರ ರೂ. ದಂಡ ವಿಧಿಸಿದ್ದಾರೆ.

ಪಾರ್ಕ್‌ನಲ್ಲಿ ಬೆಳೆದು ನಿಂತ ಮರಗಳನ್ನು ಅಪಾಯಕಾರಿ ಎಂಬ ನೆಲೆಯಲ್ಲಿ ಪಾರ್ಕ್ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರ ಸುರೇಶ್ ಎಂಬವರ ಸೂಚನೆಯಂತೆ ಕಾರ್ಮಿಕರು ಕಡಿಯುತ್ತಿದ್ದರು. ಇದಕ್ಕೆ ಪಾರ್ಕ್‌ನಲ್ಲಿ ವಿಹರಿಸುವ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಕಾರ್ಮಿಕರು ನಾಲ್ಕೈದು ಮರಗಳನ್ನು ಕಡಿದು ಧರೆಗೆ ಉರುಳಿಸಿದ್ದರು. ಉಳಿದ ಮರಗಳನ್ನು ಕಡಿಯಲು ಸಿದ್ಧತೆ ಮಾಡುತ್ತಿದ್ದಾಗ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ರಾಯಪ್ಪ, ಮರ ಕಡಿಯುವುದನ್ನು ತಡೆದರು.
ಈ ವೇಳೆ ಗುತ್ತಿಗೆದಾರರನನ್ನು ಸ್ಥಳಕ್ಕೆ ಕರೆಸಿ, ಯಾವುದೇ ಅನುಮತಿ ಇಲ್ಲದೇ ಮರ ಕಡಿದಿರುವುದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು. ಈ ತಪ್ಪಿಗೆ 25 ಸಾವಿರ ರೂ. ದಂಡ ಪಾವತಿಸುವಂತೆ ಮತ್ತು ಒಂದು ಮರದ ಬದಲು 10 ಗಿಡಗಳನ್ನು ನೆಡುವಂತೆ ಗುತ್ತಿಗೆದಾರನಿಗೆ ಪೌರಾಯುಕ್ತರು ಸೂಚಿಸಿದರು.

ಈ ಸಂದರ್ಭದಲ್ಲಿ ಪರಿಸರ ಇಂಜಿನಿಯರ್ ಸ್ನೇಹಾ ಕೆ.ಎಸ್. ಹಾಜರಿದ್ದರು. ಮಾಹಿತಿ ತಿಳಿದು ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರು ಮತ್ತು ಪರಿಸರಪ್ರೇಮಿಗಳು ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ