ಉಡುಪಿ : ಸಿಟಿ ರವಿ ಬಂಧನ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಭಯೋತ್ಪಾದಕರ ರೀತಿಯಲ್ಲಿ ಸಿ.ಟಿ. ರವಿಯನ್ನು ಪೊಲೀಸರು ಹೊತ್ತೊಯ್ದಿದ್ದಾರೆ. ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದಾರೆ. ಸಿ. ಟಿ. ರವಿ ತಲೆಗೆ ಗಾಯಗಳಾಗಿವೆ. ಈ ಎಲ್ಲ ವಿದ್ಯಮಾನಗಳ ಬಗ್ಗೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ಕೊಡಬೇಕು. ಶಾಸಕನನ್ನು ಬಂಧಿಸಲು ಸಭಾಪತಿ ಅವರ ಅನುಮತಿ ಬೇಕು. ಈ ಬೆಳವಣಿಗೆ ರಾಜ್ಯ ಸರ್ಕಾರಕ್ಕೆ ಗೌರವ, ಶೋಭೆ ತರುವುದಿಲ್ಲ. ಚಿಕ್ಕಮಗಳೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಸಹಿತ ನಾಯಕರನ್ನು ಬಂಧನ ಮಾಡಿದ್ದಾರೆ. ಪ್ರಯೋಗಾಲಯದ ವರದಿ ಬಂದ ನಂತರ ಕ್ರಮ ಕೈಗೊಳ್ಳಿ, ಈಗ ಹಾಕಿರುವ ಕೇಸು ವಾಪಸ್ ಪಡೆಯಿರಿ ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಕೋಟ, ಪಾಕಿಸ್ತಾನಕ್ಕೆ ಜೈ ಅಂದವರ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸಾಬೀತಾದರೆ ಕ್ರಮ ಎಂದು ಸರ್ಕಾರ ಹೇಳಿತ್ತು. ನಾನು ಯಾವುದೇ ಅಶ್ಲೀಲ ಶಬ್ದ ಬಳಸಿಲ್ಲ ಎಂದು ಸಿ.ಟಿ. ರವಿ ಅನೇಕ ಬಾರಿ ಸ್ಪಷ್ಟಪಡಿಸಿದ್ದಾರೆ. ಸಭಾಪತಿಗಳ ಸುಪರ್ದಿಯಲ್ಲಿರುವ ಎಲ್ಲಾ ಕಡತಗಳನ್ನು ತರಿಸಿ, ನಡೆದಿರುವ ವಿದ್ಯಮಾನ, ಆಡಿರುವ ಮಾತು ಪ್ರಯೋಗಾಲಯದಲ್ಲಿ ಪರಿಶೀಲನೆ ಆಗಲಿ. ಆರೋಪ ಸಾಬೀತಾದ ನಂತರ ಕ್ರಮ ತೆಗೆದುಕೊಂಡರೆ ಅರ್ಥ ಇದೆ.
ಸುವರ್ಣ ಸೌಧದಲ್ಲಿ ಸಿ.ಟಿ. ರವಿಯನ್ನು ಅಟ್ಟಾಡಿಸಿ ಗೂಂಡಾಗಿರಿ ತೋರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ವಿಪಕ್ಷವನ್ನು ಹೀಗೆ ನಡೆಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಡಿಕೆ ಶಿವಕುಮಾರ್ ಹೇಳುವ ದಾಖಲೆಗಳನ್ನು ಕೇಳಲು ಸಾಧ್ಯವಿಲ್ಲ ಎಂದ ಅವರು, ಸರ್ಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.