ಕಮಲಶಿಲೆ ದೇವಸ್ಥಾನದಲ್ಲಿ ಗೋ ಕಳ್ಳತನಕ್ಕೆ ಯತ್ನ; ಸಿಸಿಟಿವಿ ಮಾನಿಟರಿಂಗ್ ತಂಡದ ಸಮಯ ಪ್ರಜ್ಞೆಯಿಂದ ಕಳ್ಳತನ ವಿಫಲ

ಕುಂದಾಪುರ : ಕಮಲಶಿಲೆ ದೇವಸ್ಥಾನದಲ್ಲಿ ಶನಿವಾರ ತಡರಾತ್ರಿ ಗೋ ಕಳ್ಳತನಕ್ಕೆ ಯತ್ನಿಸಿದ್ದನ್ನು ಇಲ್ಲಿನ ಸಿಸಿಟಿವಿ ತಂಡ ಸಕಾಲದಲ್ಲಿ ಎಚ್ಚರಿಸಿ ಸಂಭಾವ್ಯ ಕಳ್ಳತನವನ್ನು ವಿಫಲಗೊಳಿಸಿದೆ.

ಕಮಲಶಿಲೆ ದೇವಸ್ಥಾನದ ಗೋಶಾಲೆಯಲ್ಲಿ ರಾತ್ರಿ ಎರಡು ಗಂಟೆ ಸುಮಾರಿಗೆ ಇಬ್ಬರು ವ್ಯಕ್ತಿಗಳು ಎದುರಿನ ಬಾಗಿಲಿನ ಬೀಗ ಮುರಿದು ಬದಿಯ ಬಾಗಿಲ ಮೂಲಕ ನುಗ್ಗಿ ಮೂರು ಹಸುಗಳ ಹಗ್ಗವನ್ನು ಕತ್ತಿಯಿಂದ ಕಡಿದು ಸಾಗಾಟಕ್ಕೆ ಯತ್ನಿಸಿದ್ದರು. ದೇವಸ್ಥಾನದ ವತಿಯಿಂದ ಸೈನ್‌ ಇನ್‌ ಸೆಕ್ಯುರಿಟೀಸ್‌ ಸಂಸ್ಥೆಯ ಲೈವ್‌ ಮಾನಿಟರಿಂಗ್‌ ಸಿಸಿಟಿವಿ ಹಾಕಿಸಲಾಗಿದ್ದು ಈ ಸಂಸ್ಥೆ 24 ತಾಸು ಸಿಸಿಟಿವಿ ಮೇಲೆ ನೇರ ನಿಗಾ ಇಟ್ಟು ಪೊಲೀಸ್‌ ಇಲಾಖೆಗೆ ಇಂತಹ ಕಳ್ಳತನ, ಅನುಮಾನಾಸ್ಪದ ವ್ಯಕ್ತಿಗಳ ಓಡಾಟ, ಸಂಶಯಾಸ್ಪದ ಚಟುವಟಿಕೆಗಳ ಮಾಹಿತಿಯನ್ನು ತತ್‌ಕ್ಷಣ ನೀಡುತ್ತದೆ.

ಕುಂದಾಪುರದ ಅಂಕದಕಟ್ಟೆಯಲ್ಲಿರುವ ಮಾನಿಟರಿಂಗ್‌ ಸೆಂಟರ್‌ನ ಸಿಬಂದಿ ದೇವಸ್ಥಾನದ ಗೋಶಾಲೆಯಲ್ಲಿ ಜಾನುವಾರುಗಳ ಹಗ್ಗ ಕಡಿಯುತ್ತಿರುವುದನ್ನು ಕಂಡು ಬೀಟ್‌ ಪೊಲೀಸ್‌, ಎಸ್‌ಐ, ದೇವಾಲಯದ ಭದ್ರತಾ ವಿಭಾಗದವರಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ವಿಭಾಗ‌ದವರು ಕೂಡಲೇ ಗೋಶಾಲೆಗೆ ಹೋದಾಗ ಶಂಕಿತರು ಸ್ಥಳದಿಂದ ಪರಾರಿಯಾಗಿದ್ದಾರೆ.

ನಾಪತ್ತೆಯಾಗಿದ್ದ ಒಂದು ದನ ಸಮೀಪದಲ್ಲಿ ಹೊರಗಿದ್ದು ಉಳಿದ ಎಲ್ಲ ದನಗಳೂ ಅಲ್ಲಿಯೇ ಸುರಕ್ಷಿತವಾಗಿದ್ದವು. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !