ಉಡುಪಿ : ಜಾತಿ ನಿಂದನೆ ಮಾಡಿದ ಪ್ರಕರಣದ ಆರೋಪಿಯನ್ನು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ತಪ್ಪಿತಸ್ಥ ಎಂದು ತೀರ್ಮಾನಿಸಿ 1 ವರ್ಷ ಜೈಲು ಶಿಕ್ಷೆ ಹಾಗು 19,500 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಮಂಜುನಾಥ ಮಡಿವಾಳ ಶಿಕ್ಷೆಗೆ ಗುರಿಯಾದ ಆರೋಪಿ.
2019ರ ಮೇ 6ರಂದು ಸಂಜೆ 4 ಗಂಟೆಗೆ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಮುದ್ದೂರು ನಿವಾಸಿ ವಿಟಲ ಪರವ ಅವರು ಮುದ್ದೂರು ಎನ್ನುವಲ್ಲಿರುವ ಸತ್ಯೇಶ ಉಡುಪ ಅವರ ಅಂಗಡಿ ಕಟ್ಟಡದ ಬಳಿ ಹೋದಾಗ ನಾಲ್ಕೂರು ಗ್ರಾಮದ ನಿವಾಸಿಯಾದ ಆರೋಪಿ ಮಂಜುನಾಥ ಮಡಿವಾಳ ತನ್ನ ಆಟೋ ರಿಕ್ಷಾದಲ್ಲಿ ಅಲ್ಲಿಗೆ ಬಂದು ವಿಟಲ ಪರವ ಅವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದರು.
ಅನಂತರ ವಿಟಲ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದಿನ ಹೆಬ್ರಿ ಠಾಣೆಯ ಪಿಎಸ್‌ಐ ಸತೀಶ್ ಸಿ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾರ್ಕಳ ಉಪ ವಿಭಾಗದ ಅಂದಿನ ಸಹಾಯಕ ಪೊಲೀಸ್ ಅಧೀಕ್ಷಕ ಪಿ. ಕೃಷ್ಣಕಾಂತ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ 323, 504 ಹಾಗೂ ಎಸ್.ಸಿ./ಎಸ್.ಟಿ. ಕಾಯ್ದೆ ಕಲಂ ಅಡಿಯ ಅಪರಾಧಕ್ಕಾಗಿ ತಲಾ 6 ತಿಂಗಳ ಜೈಲು ಶಿಕ್ಷೆ 2,500 ರೂ. ದಂಡ, 324, 506 ಹಾಗೂ ಎಸ್.ಸಿ/ಎಸ್.ಟಿ.ಕಾಯ್ದೆ ಕಲಂ 3(1) (ಎಸ್) ಮತ್ತು 3(2)(ವಿ-ಎ) ರಡಿಯ ಅಪರಾಧಕ್ಕಾಗಿ ತಲಾ 1 ವರ್ಷ ಜೈಲು ಶಿಕ್ಷೆ 3 ಸಾವಿರ ರೂ. ದಂಡ ವಿಧಿಸಿದೆ.
ಆರೋಪಿಯಿಂದ ವಸೂಲಾದ ದಂಡದ ಮೊತ್ತದ ಪೈಕಿ 10 ಸಾವಿರ ರೂ.ದೂರುದಾರರಿಗೆ ಪರಿಹಾರ ರೂಪದಲ್ಲಿ ಪಾವತಿಸಬೇಕು ಎಂದು ಆದೇಶಿಸಿದೆ. ಸರಕಾರದ ಪರ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.