ದಂಪತಿ ಜಗಳ ಠಾಣೆಯಲ್ಲಿ ಇತ್ಯರ್ಥ : ವಾಪಾಸ್ ಬರುವಾಗ ಹೊಳೆಗೆ ಹಾರಿದ ಪತಿ

ಉಡುಪಿ : ಕುಂದಾಪುರ ತಾಲೂಕಿನ ಕಂಡೂರಿನಲ್ಲಿ ಗಂಡ ಹೆಂಡತಿ ಪರಸ್ಪರ ಜಗಳ ಮಾಡಿಕೊಂಡ ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲೇರಿ ಬಳಿಕ ವಾಪಸು ಬರುವಾಗ ಪತಿ ವಾರಾಹಿ ಹೊಳೆಗೆ ಹಾರಿದ ಘಟನೆ ಇಂದು ನಡೆದಿದೆ.

ಹೊಳೆಗೆ ಹಾರಿದ ವ್ಯಕ್ತಿಯನ್ನು ಕಾಳಾವರ ಗ್ರಾಮದ ಅಂಗನವಾಡಿ ಸಮೀಪ ನಿವಾಸಿ ಹರೀಶ್ ಭೋವಿ (40) ಎಂದು ಗುರುತಿಸಲಾಗಿದೆ. ಹರೀಶ್‌ ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದರು. ಆಗಾಗ ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು. ಮಂಗಳವಾರ ಬೆಳಿಗ್ಗೆ ಜಗಳ ತಾರಕಕ್ಕೇರಿ ಮಕ್ಕಳನ್ನು ಬಾವಿಗೆ ದೂಡಲೆತ್ನಿಸಿದ್ದರು ಎನ್ನಲಾಗಿದೆ. ಇದರಿಂದ ಆತಂಕಗೊಂಡ ಪತ್ನಿ ಕಂಡ್ಲೂರು ಠಾಣೆಗೆ ದೂರು ನೀಡಿದ್ದರು.

ಪೊಲೀಸರು ಗಂಡ ಹೆಂಡತಿಯನ್ನು ಠಾಣೆಗೆ ಕರೆಯಿಸಿ ಪಂಚಾಯಿತಿ ಮಾಡಿ ಕಳುಹಿಸಿದ್ದರು. ಠಾಣೆಯಿಂದ ಬರುತ್ತಿದ್ದ ವೇಳೆ ಕಂಡ್ಳೂರು ಸೇತುವೆ ಸಮೀಪ ಆಟೋ ಚಾಲಕನಿಗೆ ರಿಕ್ಷಾ ನಿಧಾನಿಸುವಂತೆ ತಿಳಿಸಿದ ಹರೀಶ್ ಸೇತುವೆಯಿಂದ ವಾರಾಹಿ ಹೊಳೆಗೆ ಹಾರಿದ್ದಾರೆ.

ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯರು, ಪೊಲೀಸರು, ಅಗ್ನಿಶಾಮಕದಳ, ಮುಳುಗುತಜ್ಞರು ಹರೀಶ್ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿದರು. ಆದರೆ ವಿಪರೀತ ಮಳೆ, ಉಕ್ಕಿ ಹರಿಯುತ್ತಿರುವ ನದಿ ನೀರಿನಲ್ಲಿ ಪತ್ತೆ ಕಾರ್ಯ ಸಫಲವಾಗಿಲ್ಲ.

ಹರೀಶ್‌ಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಹಿರಿಯ ಮಗಳು ಮೂರನೇ ತರಗತಿ ಹಾಗೂ ಕಿರಿಯ ಮಗಳು ಅಂಗನವಾಡಿಗೆ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ