ಮರಳು ಅಭಾವ ನೀಗಿಸಲು ಸಮನ್ವಯ ಸಭೆ: ಯು.ಟಿ.ಖಾದರ್‌…!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡುತ್ತಿರುವ ಮರಳು ಅಭಾವ ನೀಗಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂಬಂಧಿಸಿದ ಇಲಾಖೆಗಳ ಸಮನ್ವಯ ಸಭೆ ನಡೆಸಬೇಕಿದೆ. ಕಡಿಮೆ ದರದಲ್ಲಿ ಜನರಿಗೆ ಮರಳು ದೊರೆಯಬೇಕು. ಈ ಕುರಿತು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದೆ ನಾನು ಸಚಿವನಾಗಿದ್ದಾಗ ಸ್ಯಾಂಡ್‌ ಬಜಾರ್‌ ಎಂಬ ಮೊಬೈಲ್‌ ಆ್ಯಪ್‌ ರೂಪಿಸಿ ಅದರ ಮೂಲಕ ನಿಗದಿತ ಸಮಯದಲ್ಲಿ ನಿಗದಿತ ಬೆಲೆಗೆ ಜನರಿಗೆ ಮರಳು ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಸರಕಾರ ಬದಲಾದ ಮೇಲೆ ಆ ವ್ಯವಸ್ಥೆ ನಿಲ್ಲಿಸಲಾಗಿದೆ. ಈಗ ಮತ್ತೆ ಸ್ಯಾಂಡ್‌ ಬಜಾರ್‌ ಆ್ಯಪ್‌ ವ್ಯವಸ್ಥೆ ಜಾರಿಯಾಗಬೇಕು ಎಂದರು.

ಅಕ್ರಮ ಮರಳುಗಾರಿಕೆ ತಡೆಯುವ ಹಿನ್ನೆಲೆಯಲ್ಲಿ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖಾದರ್‌ ಅವರು ಅಧಿಕಾರಿಗಳಿಗೆ ಅಧಿಕಾರ, ಕಚೇರಿ ನೀಡಿದ್ದು ಜನರ ಸಮಸ್ಯೆ ನೀಗಿಸಲಿಕ್ಕಾಗಿಯೇ ಹೊರತು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅಲ್ಲ. ಗಣಿ ಇಲಾಖೆ ಮತ್ತು ಪೊಲೀಸ್‌ ಇಲಾಖೆಗಳ ನಡುವೆ ಸಮನ್ವಯತೆಯನ್ನು ಜಿಲ್ಲಾಡಳಿತ ಮರು ಸ್ಥಾಪಿಸಿ ಜನರ ಸಮಸ್ಯೆ ನೀಗಿಸಲು ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.

ಆಸ್ಕರ್‌ ಫರ್ನಾಂಡಿಸ್‌ ಕೇಂದ್ರ ಸಚಿವರಾಗಿದ್ದ ಕಾಲದಲ್ಲಿ ತೀವ್ರ ಮರಳು ಅಭಾವ ಎದುರಾದಾಗ ಒಂದೇ ದಿನದಲ್ಲಿ ಸಿಆರ್‌ಝಡ್‌ ವ್ಯಾಪ್ತಿಯ ಮರಳು ದಿಬ್ಬ ತೆರವುಗೊಳಿಸುವ ಆದೇಶ ಜಾರಿ ಮಾಡಿ ಜನರಿಗೆ ಮರಳು ನೀಡುವ ಕಾರ್ಯ ಮಾಡಲಾಗಿತ್ತು. ಈಗ ಮತ್ತೆ ಮರಳು ಅಭಾವ ಸೃಷ್ಟಿ ಆಗಿರುವಾಗ ಕೇಂದ್ರ ಸರಕಾರದಿಂದ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸುವ ಆದೇಶವನ್ನು ಏಕೆ ಮಾಡಲಾಗುತ್ತಿಲ್ಲ? ಎಂದು ಸ್ಪೀಕರ್‌ ಪ್ರಶ್ನಿಸಿದರು.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ

ತಾಲೂಕು ಸರಕಾರಿ ಆಸ್ಪತ್ರೆ,‌‌ ಆರೋಗ್ಯ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ