ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

ಸುರತ್ಕಲ್‌ : ಅಡುಗೆ ಮನೆಯ ಸಿಲಿಂಡರ್‌ನಿಂದ ಗ್ಯಾಸ್‌ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡು ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ತಡಂಬೈಲ್‌ ವೆಂಕಟರಮಣ ಕಾಲನಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಮನೆಯ ಯಜಮಾನ ವಾಮನ ಅವರ ಪತ್ನಿ ವಸಂತಿ (68) ಮತ್ತು ವಾಮನ ಅವರ ಅಕ್ಕ ಪುಷ್ಪಾ (72) ಗಾಯಾಳುಗಳು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ಯಾಸ್‌ ಸೋರಿಕೆಯಾಗಿರುವುದು ಗಮನಕ್ಕೆ ಬಾರದೆ ವಸಂತಿ ಮಧ್ಯಾಹ್ನ ಅಡುಗೆ ಕೋಣೆಗೆ ಹೋಗಿ ಸ್ಟವ್‌ಗೆ ಬೆಂಕಿ ಹಚ್ಚುತ್ತಿದ್ದಂತೆ ಏಕಾಏಕಿ ಬೆಂಕಿ ವ್ಯಾಪಿಸಿಕೊಂಡಿತು. ಅವರು ಸಹಾಯಕ್ಕಾಗಿ ಕೂಗಿದಾಗ ಹೊರಗೆ ಬಟ್ಟೆ ಒಗೆಯುತ್ತಿದ್ದ ಪುಷ್ಪಾ ಧಾವಿಸಿ ಬಂದು ಹೊರಗಿನಿಂದ ಬಾಗಿಲು ತೆರೆಯುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಅವರಿಗೂ ಚಾಚಿತು. ಅವರಿಬ್ಬರ ಕಿರುಚಾಟ ಕೇಳಿ ಅಕ್ಕಪಕ್ಕದವರು ಧಾವಿಸಿ ಇಬ್ಬರನ್ನೂ ಹೊರಗೆಳೆದು ಬೆಂಕಿ ನಂದಿಸಲು ಸಹಾಯ ಮಾಡಿದರು.

ವಸಂತಿ ಧರಿಸಿದ್ದ ಸೀರೆ ಅವರ ಮೈಗೆ ಅಂಟಿಕೊಂಡಿತ್ತು. ಬಳಿಕ ಸೀರೆಯನ್ನು ಕತ್ತರಿಸಿ ತೆಗೆಯಬೇಕಾಯಿತು. ಅದಾಗಲೇ ಕೈ, ಮುಖದ ಭಾಗ ಮತ್ತಿತರ ಕಡೆ ಬೆಂಕಿ ತಗಲಿತ್ತು ಎಂದು ನೆರವಿಗೆ ಧಾವಿಸಿದವರು ತಿಳಿಸಿದ್ದಾರೆ.

ಮನೆ ಯಜಮಾನ ವಾಮನ ಅಯ್ಯಪ್ಪ ವ್ರತಧಾರಿ ಯಾಗಿದ್ದು, ಮನೆ ಬಳಿಯಿರುವ ಸಣ್ಣ ಅಡುಗೆ ಕೋಣೆಯಲ್ಲಿ ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳುತ್ತಿದ್ದರು. ಕೋಣೆಯ ಒಳಗೆ ಮತ್ತೆರಡು ಅನಿಲ ಜಾಡಿಗಳಿದ್ದವು. ಆದರೆ ಅಪಾಯ ಸಂಭವಿಸಿಲ್ಲ.

ಇಂಡೇನ್‌ ಗ್ಯಾಸ್‌ ಏಜೆನ್ಸಿಯ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದರು. ಗ್ಯಾಸ್‌ ಪೈಪ್‌, ರೆಗ್ಯುಲೇಟರ್‌, ಸಿಲಿಂಡರ್‌ ತಪಾಸಣೆ ನಡೆಸಿದ್ದು, ರೆಗ್ಯುಲೇಟರ್‌ ಸಮೀಪ ಪೈಪ್‌ನಿಂದ ಅನಿಲ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸುರತ್ಕಲ್‌ ಪೊಲೀಸರು ಹಾಗೂ ಫಾರೆನ್ಸಿಕ್‌ ತಜ್ಞರು ಕೂಡ ಪರಿಶೀಲಿಸಿದ್ದಾರೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ