ಡೆಂಗ್ಯೂ ಜ್ವರ ನಿಯಂತ್ರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ : ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

ಉಡುಪಿ : ಜನಸಾಮಾನ್ಯರು ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಇರುವ ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅರಿತು ಅವುಗಳನ್ನು ಪಾಲನೆ ಮಾಡಿದ್ದಲ್ಲಿ ಮಾತ್ರ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ದಿನೇದಿನೇ ಉಲ್ಭಣಗೊಳ್ಳುತ್ತಿರುವ ಡೆಂಗ್ಯೂ ರೋಗ ನಿಯಂತ್ರಣ ಹಾಗೂ ನಿರ್ಮೂಲನೆಗಾಗಿ ಜನಜಾಗೃತಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಪ್ರತೀ ಶುಕ್ರವಾರ ಸೊಳ್ಳೆ ನಿರ್ಮೂಲನಾ ದಿನವಾಗಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿದ್ದು, ಇದಕ್ಕೆ ಶುಕ್ರವಾರ ಉಡುಪಿ ತಾಲೂಕಿನ ಕೊಡಂಕೂರು ವಾರ್ಡಿನ ಪ್ರಮೋದ್ ಬಡಾವಣೆಯಲ್ಲಿ ಮನೆಮನೆಗೆ ತೆರಳಿ ಡೆಂಗ್ಯೂ ಜಾಗೃತಿ ಕರಪತ್ರ ವಿತರಿಸುವ ಹಾಗೂ ಸಾರ್ವಜನಿಕರನ್ನು ಸಂದರ್ಶಿಸುವ ಮೂಲಕ ಡೆಂಗ್ಯೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ, ಜಿಲ್ಲೆಯ ಜನರು ಡೆಂಗ್ಯೂ ನಿಯಂತ್ರಣದ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಇದರ ನಿಯಂತ್ರಣದ ಬಗ್ಗೆ ತಿಳುವಳಿಕೆ ಹೊಂದುವುದರೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ಡೆಂಗ್ಯೂ ಅನ್ನು ನಿಯಂತ್ರಿಸಿ, ನಿರ್ಮೂಲನೆ ಮಾಡಲು ಮುಂದಾಗಬೇಕು ಎಂದರು.

ಡೆಂಗ್ಯೂ ಜ್ವರ ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದ್ದು, ಸೋಂಕು ಹೊಂದಿದ ಈಡಿಸ್ ಈಜಿಪ್ಟಿ ಮತ್ತು ಈಡಿಸ್ ಅಲ್ಬೋಪಿಕ್ಟಸ್ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಾಮಾನ್ಯವಾಗಿ ಈ ಸೊಳ್ಳೆ ಸ್ವಚ್ಛ ನೀರಿನಲ್ಲಿ ಸಂತಾನ ಅಭಿವೃದ್ಧಿ ಮಾಡುವ ಜೊತೆಗೆ ಹಗಲು ಹೊತ್ತಿನಲ್ಲಿ ಮನುಷ್ಯರಿಗೆ ಕಚ್ಚುತ್ತದೆ. ಇದರ ಹತೋಟಿಗೆ ಮುಖ್ಯವಾಗಿ ಮನೆಯ ಸುತ್ತಮುತ್ತ, ಟೆರಸ್ ಮೇಲೆ, ಸಿಮೆಂಟ್ ತೊಟ್ಟಿಗಳಲ್ಲಿ, ಡ್ರಂ, ಬ್ಯಾರಲ್, ಮಣ್ಣಿನ ಮಡಕೆಗಳು, ಅನುಪಯೋಗ ವಸ್ತುಗಳಲ್ಲಿ ಮಳೆಯ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನೀರಿನ ತೊಟ್ಟಿ, ಡ್ರಂ, ಬ್ಯಾರಲ್, ಏರ್‌ಕೂಲರ್‌ಗಳಲ್ಲಿ ಸಾಧ್ಯವಾದಷ್ಟು ವಾರದಲ್ಲಿ ಎರಡು ಮೂರು ಬಾರಿ ಖಾಲಿ ಮಾಡಿ, ಒಣಗಿಸಿ, ಭರ್ತಿ ಮಾಡಬೇಕು ಎಂದರು.

ಜಿಲ್ಲಾಧಿಕಾರಿಗಳಿಂದ ಕೊಡಂಕೂರು ವಾರ್ಡಿನ ಪ್ರಮೋದ್ ಬಡಾವಣೆಯ ಮನೆ ಮನೆಗೆ ಭೇಟಿ:

ಡೆಂಗ್ಯೂ ಜನಜಾಗೃತಿ ಹಾಗೂ ಪ್ರತೀ ಶುಕ್ರವಾರವನ್ನು ಈಡಿಸ್ ಸೊಳ್ಳೆ ನಿರ್ಮೂಲನಾ ಶುಕ್ರವಾರವಾಗಿ ಆಚರಿಸುತ್ತಿದ್ದು, ಇದರ ಅಂಗವಾಗಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರು ಪ್ರಮೋದ್ ಬಡಾವಣೆಯಲ್ಲಿ ಮನೆ ಮನೆಗಳಿಗೆ ತೆರಳಿ ಡೆಂಗ್ಯೂ ನಿಯಂತ್ರಣ ಮಾಹಿತಿಯ ಕರಪತ್ರಗಳನ್ನು ವಿತರಿಸುವ ಜೊತೆಗೆ ಸ್ಥಳೀಯ ವಾಸಿಗಳಾದ ಅಂಜನಮ್ಮ, ಲಕ್ಷ್ಮಿ, ಮಂಜುಳಾ, ಸವಿತಾ ಸೇರಿದಂತೆ ಅನೇಕ ಸ್ಥಳೀಯ ಗೃಹಿಣಿಯರಿಗೆ ಮನೆಯಲ್ಲಿನ ಲಾರ್ವಾ ನಾಶದ ಬಗ್ಗೆ ಹಾಗೂ ಈಡಿಸ್ ಸೊಳ್ಳೆಗಳ ಉತ್ಪತ್ತಿ ಕುರಿತು ಜಿಲ್ಲಾಧಿಕಾರಿಗಳು ಸತಃ ಮಾಹಿತಿ ನೀಡುವುದರೊಂದಿಗೆ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆ ಕಾಪಾಡುವುದು, ನೀರಿನ ಸಂಗ್ರಹ ಕುರಿತು ವಿವರಿಸಿದರು.

ಸಾಮಾನ್ಯವಾಗಿ ನೀರಿನ ಸಂಗ್ರಹಣಾ ಘಟಕ, ಪಾತ್ರೆಗಳಲ್ಲಿ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿದರೂ ಸಹ, ಸೊಳ್ಳೆಗಳ ಮರಿಗಳಾದ ಲಾರ್ವಾಗಳು ಪಾತ್ರೆಗಳ ಒಳಭಾಗದಲ್ಲಿ ಅಂಟಿಕೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ನೀರಿನ ಸಂಗ್ರಹ ವಸ್ತುಗಳನ್ನು ಚೆನ್ನಾಗಿ ತೊಳೆದು ಅವುಗಳನ್ನು ಒಣಗಿಸಿ, ನೀರನ್ನು ಶೇಖರಣೆ ಮಾಡುವುದರಿಂದ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪ್ರತೀ ಶುಕ್ರವಾರ ವಾರದ ಒಣಗಲು ದಿನವನ್ನು ಆಚರಿಸಲಾಗುತ್ತಿದೆ.

ಪ್ರತಿಯೊಬ್ಬ ಸಾರ್ವಜನಿಕರು ತಪ್ಪದೇ ತಮ್ಮ ತಮ್ಮ ಮನೆಯಲ್ಲಿ ಈ ರೀತಿಯ ಕ್ರಮವನ್ನು ವಹಿಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮನೆ ಮುಂದೆ ಶೇಖರಿಸಿದ ನೀರಿಗೆ ಬ್ಯಾಟರಿ ಹಾಕಿ ಲಾರ್ವಾ ಇರುವ ಬಗ್ಗೆ ಸಹ ಪರಿಶೀಲನೆ ನಡೆಸಿದರು ಹಾಗೂ ಕಾಲೋನಿಯ ಕೇರಿಯಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು. ಮಳೆಯಿಂದ ನಿಂತ ನೀರಿಗೆ ಆರೋಗ್ಯ ಹಾಗೂ ನಗರಸಭಾ ಸಿಬ್ಬಂದಿಗಳು ರಾಸಾಯನಿಕ ಸಿಂಪರಣೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ ಗಡಾದ್, ಪೌರಾಯುಕ್ತ ರಾಯಪ್ಪ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ತಾಲೂಕು ವೈದ್ಯಾಧಿಕಾರಿ ಡಾ. ವಾಸುದೇವ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು