ಕಸ್ತೂರಿ ರಂಗನ್‌ ವರದಿ ವಿರುದ್ಧ ಕಾನೂನು ಹೋರಾಟ ರೂಪಿಸಲು ಸಮಾಲೋಚನ ಸಭೆ – ಶಾಸಕ ಗುರುರಾಜ್‌ ಗಂಟಿಹೊಳೆ ಭಾಗಿ

ಬೈಂದೂರು : ಕಸ್ತೂರಿ ರಂಗನ್‌ ವರದಿ ಅನುಷ್ಠಾನದಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಗೆ ಎದುರಾಗಬಹುದಾದ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ಹೋರಾಟ ಸಂಬಂಧ ರಚಿಸಿರುವ ಬೈಂದೂರು ಫೌಂಡೇಶನ್‌ ವತಿಯಿಂದ ಶಾಸಕರಾದ ಗುರುರಾಜ ಗಂಟಿಹೊಳೆ ಅವರ ನೇತೃತ್ವದಲ್ಲಿ ಕುಂದಾಪುರದಲ್ಲಿ ಸಮಾಲೋಚನೆ ಸಭೆ ನಡೆಯಿತು.

ಬೈಂದೂರು ಕ್ಷೇತ್ರಕ್ಕೆ ಹೆಚ್ಚು ಸಮಸ್ಯೆ ನೀಡುತ್ತಿರುವ ಸಿಆರ್‌ಝಡ್‌, ಡೀಮ್ಡ್‌ ಫಾರೆಸ್ಟ್‌(ವನ್ಯಜೀವಿ), ಕಸ್ತೂರಿ ರಂಗನ್‌ ವರದಿ ಅನುಷ್ಠಾನಕ್ಕೆ ಮುಂದಾಗಿರುವ ವಿಚಾರವೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಹಿರಿಯ ವಕೀಲರು ಹಾಗೂ ಕಾನೂನು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಶೀಘ್ರವೇ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರನ್ನು ಭೇಟಿ ಮಾಡಿ ಈ ವಿಷಯ ಕುರಿತು ಇನ್ನಷ್ಟು ಚರ್ಚೆ ಮಾಡುವ ಬಗ್ಗೆಯೂ ನಿರ್ಧರಿಸಲಾಯಿತು.
ಶಾಸಕರಾದ ಗುರುರಾಜ್‌ ಗಂಟಿಹೊಳೆ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಒಂದು ಭಾಗವಾದರೆ‌, ಸರ್ಕಾರದ ಕೆಲವು ನೀತಿಗಳು ಜನ ಸಾಮಾನ್ಯರಿಗೆ ಮಾರಕವಾಗುವ ಸಾಧ್ಯತೆಯೂ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಹೋರಾಟವನ್ನು ರೂಪಿಸಬೇಕಾಗುತ್ತದೆ. ಬೈಂದೂರು ಫೌಂಡೇಶನ್‌ ಮೂಲಕ ಕಸ್ತೂರಿ ರಂಗನ್‌ ವರದಿ ಅನುಷ್ಠಾನ ವಿರೋಧಿಸಿ ಕಾನೂನು ಹೋರಾಟಕ್ಕೆ ನಾವು ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕೆ ಬೇಕಾದ ದಾಖಲೆ, ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದ್ದೇವೆ. ಇದರ ಜತೆಗೆ ಫೌಂಡೇಶನ್‌ ಮೂಲಕ ಸಿಆರ್‌ಝಡ್‌, ಡೀಮ್ಡ್‌ ಫಾರೆಸ್ಟ್‌ ಇತ್ಯಾದಿ ಸಮಸ್ಯೆಗಳ ಬಗ್ಗೆಯೂ ಹೋರಾಟಕ್ಕೆ ರೂಪುರೇಷೆ ಸಿದ್ದಪಡಿಸುತ್ತಿದ್ದೇವೆ ಎಂದರು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ