ಕಾನ್‌ಸ್ಟೇಬಲ್‌ ಕೊಲೆ ಯತ್ನ ಪ್ರಕರಣ – ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ, ದಂಡ

ಮಂಗಳೂರು : ಉಳ್ಳಾಲ ಠಾಣಾ ಕಾನ್‌ಸ್ಟೇಬಲ್‌ ಒಬ್ಬರನ್ನು ಕೊಲೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳಿಗೆ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10ವರ್ಷ ಜೈಲು ಶಿಕ್ಷೆ ಮತ್ತು ತಲಾ 16ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಉಳ್ಳಾಲದ ನಿವಾಸಿಗಳಾದ ಮುಸ್ತಾಕ್ (32) ಮತ್ತು ಜಾಕೀರ್ (36) ಶಿಕ್ಷೆಗೊಳಗಾದ ಆರೋಪಿಗಳು. ಪ್ರಕರಣದ 2ನೇ ಆರೋಪಿ ಯಾಸೀನ್ ಮತ್ತು 3ನೇ ಆರೋಪಿ ಅಶ್ರಫ್(50) ತಲೆಮರೆಸಿಕೊಂಡಿದ್ದಾರೆ.

2015ರ ಡಿ.17ರಂದು ರಾತ್ರಿ ನಾಲ್ವರು ಆರೋಪಿಗಳು ಉಳ್ಳಾಲದ ಸಾರ್ವಜನಿಕ ಸ್ಥಳದಲ್ಲಿ ಬಾಟಲಿಗಳನ್ನು ಎಸೆದು ಗಲಾಟೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಠಾಣೆಯ ಆಗಿನ ಹೆಡ್‌ಕಾನ್‌ಸ್ಟೇಬಲ್ ಉಮೇಶ್‌ ಮತ್ತು ಕಾನ್‌ಸ್ಟೇಬಲ್ ರವೀಂದ್ರ ಸ್ಥಳಕ್ಕೆ ತೆರಳಿ ಗಲಾಟೆ ಮಾಡುತ್ತಿದ್ದ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ದುಷ್ಕರ್ಮಿಗಳು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಸಂದರ್ಭ ಮೊದಲ ಆರೋಪಿ ಮುಸ್ತಾಕ್ ನಿಮ್ಮಲ್ಲೊಬ್ಬರನ್ನು ಕೊಲೆ ಮಾಡಿದರೆ ಬುದ್ಧಿ ಬರುತ್ತದೆ ಎಂದು ತನ್ನ ಕೈಯಲ್ಲಿದ್ದ ಚಾಕುವಿನಿಂದ ರವೀಂದ್ರರಿಗೆ ಇರಿದು ಕೊಲೆಗೆ ಯತ್ನಿಸಿದ್ದ. ಈ ವೇಳೆ ಉಮೇಶ್ ತಡೆದಿದ್ದರು. ಒಂದನೇ ಆರೋಪಿ ಮತ್ತು ಇತರರು ರವೀಂದ್ರರ ಕೈಗಳನ್ನು ಹಿಡಿದು ಬಲವಾಗಿ ತಿರುಗಿಸಿದ್ದಾರೆ. ಮುಸ್ತಾಕ್ ಚೂರಿಯಿಂದ ರವೀಂದ್ರ ಅವರ ಎಡಕೈಗೆ ರಕ್ತಬರುವಂತೆ ತಿರುವಿದ್ದ. ಉಮೇಶ್‌ರಿಗೂ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಎಂದು ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ಬಗ್ಗೆ ಆಗಿನ ಉಳ್ಳಾಲ ಠಾಣೆಯ ಎಎಸ್‌ಐ ಗುರಪ್ಪ ಕಾಂತಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್‌.ವಿ. ಆರೋಪ ಸಾಬೀತಾಗಿದೆ ಎಂದು ಘೋಷಿಸಿದರಲ್ಲದೆ, ಒಂದನೇ ಮತ್ತು ನಾಲ್ಕನೇ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.

ಐಪಿಸಿ ಕಲಂ 504ರಡಿ 2 ವರ್ಷ ಕಾರಾಗೃಹ ವಾಸ ಮತ್ತು 2 ಸಾವಿರ ರೂ. ದಂಡ, 506 ರಡಿ 7 ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ, 353ರಡಿ 2 ವರ್ಷ ಜೈಲು 2 ಸಾವಿರ ರೂ. ದಂಡ, 332ರಡಿ 2 ವರ್ಷ ಜೈಲು 2 ಸಾವಿರ ರೂ. ದಂಡ, 307ರಡಿ 10 ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕರಾದ ಬಿ.ಶೇಖರ್ ಮತ್ತು ಚೌಧರಿ ಮೋತಿಲಾಲ್ ವಾದಿಸಿದ್ದರು.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ