ಉಡುಪಿ ಶಾಸಕರ ಕಾರ್ಯವೈಖರಿಗೆ ಕಾಂಗ್ರೆಸ್ ನಾಯಕರ ಸರ್ಟಿಫಿಕೇಟ್ ಅಗತ್ಯವಿಲ್ಲ : ಸಂಧ್ಯಾ ರಮೇಶ್ ಆಕ್ರೋಶ

ಉಡುಪಿ : ಜಿಲ್ಲೆಯ ಬಗ್ಗೆ ನಿರಂತರವಾಗಿ ನಿರ್ಲಕ್ಷ್ಯ ವಹಿಸುತ್ತ ಸ್ವಪಕ್ಷದ ಕಾರ್ಯಕರ್ತರ ಗೋ ಬ್ಯಾಕ್ ಅಭಿಯಾನಕ್ಕೆ ಓಡೋಡಿ ಬಂದು ಕಾಟಾಚಾರಕ್ಕೆ ಪ್ರಾಕೃತಿಕ ವಿಕೋಪದ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡೆಯನ್ನು ಖಂಡಿಸಿದ ಉಡುಪಿ ಶಾಸಕರ ವಿರುದ್ಧ ಕಾಂಗ್ರೆಸ್ ಮುಖಂಡರು ಹತಾಶ ಹೇಳಿಕೆ ನೀಡುತ್ತಿದ್ದು, ಶಾಸಕರ ಕಾರ್ಯ ವೈಖರಿ, ಹಾಗೂ ಸಿದ್ಧಾಂತ ವಿಚಾರದಲ್ಲಿನ ಬದ್ಧತೆಯ ಬಗ್ಗೆ ಕಾಂಗ್ರೆಸ್ ನಾಯಕರ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸಂಧ್ಯಾ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮುಖಂಡರ ಪ್ರಕಾರ ಜಿಲ್ಲೆಯ ಜನತೆಯ ಧ್ವನಿಯಾಗಿ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಶ್ನಿಸುವುದೇ ತಪ್ಪೇ? ಸಚಿವರ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಿದರೆ ಮಹಿಳೆಯರ ಗೌರವದ ಬಗ್ಗೆ ಶಾಸಕರಿಗೆ ಸಂಸ್ಕಾರದ ಬಗ್ಗೆ ಪಾಠ ಮಾಡಲು ಮುಂದಾಗುವ ಕಾಂಗ್ರೆಸ್ ಮಹಿಳಾ ಮುಖಂಡರು, ತಮ್ಮ ಪಕ್ಷದ ಮಹಿಳಾ ಸಚಿವರಿಗೆ ಅವರ ಜವಾಬ್ದಾರಿಯನ್ನು ನೆನೆಪಿಸಲು ಮಾತ್ರ ಮರೆತಂತಿದೆ.

ಮೊನ್ನೆ ಬೈಂದೂರು ಸೋಮೇಶ್ವರ ಗುಡ್ಡ ಕುಸಿತ ವೀಕ್ಷಣೆಗೆ ಸಂದರ್ಭದಲ್ಲಿ ಸಾರ್ವಜನಿಕರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದನ್ನು ಕಾಂಗ್ರೆಸ್ ನಾಯಕರು ಸ್ವಲ್ಪ ನೆನಪು ಮಾಡಿಕೊಳ್ಳಲಿ.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯದ ಆರ್ಥಿಕ ವ್ಯವಸ್ಥೆ ದಿವಾಳಿ ಹಂತ ತಲುಪಿದ್ದು, ಯಾವುದೇ ಯೋಜನೆಗಳಿಗೆ ಅನುದಾನ ಮಂಜೂರು ಮಾಡಲಾಗದ ಸ್ಥಿತಿಗೆ ತಂದಿದ್ದರೂ, ಉಡುಪಿಯ ನಾಯಕರು ಶಾಸಕರಿಗೆ ಯಾವ ಹೊಸ ಯೋಜನೆ ತಂದಿದ್ದೀರಿ ಎಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ.

ಜಿಲ್ಲೆಯಲ್ಲಿ 5 ಮಂದಿ ಬಿಜೆಪಿ ಶಾಸಕರು ಎಂಬ ಕಾರಣಕ್ಕೆ ಶಾಸಕರನ್ನು ವಿಶ್ವಾಸಕ್ಕೆ ಪಡೆಯದೆ ಸರ್ವಾಧಿಕಾರಿ ಧೋರಣೆಯನ್ನು ತಳೆದಿರುವ ಸಚಿವರು ಪ್ರಶ್ನಾತೀತರೇ ಎಂಬುದನ್ನು ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಲಿ.

ಶಾಸಕರ ವಿರುದ್ಧ ವೈಯುಕ್ತಿಕ ಟೀಕೆಗೆ ಮುಂದಾಗುವ ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಪರಾಜಿತ ಅಭ್ಯರ್ಥಿಗಳ ಹಿನ್ನೆಲೆಯ ಬಗ್ಗೆಯೂ ವಿಮರ್ಶೆ ಮಾಡಿದರೆ ಉತ್ತಮ.

ಉಡುಪಿ ಶಾಸಕರು ಮಹಿಳೆಯರಿಗೆ ಗೌರವ, ಹಿಂದುತ್ವ, ಅಭಿವೃದ್ಧಿ ಹಾಗೂ ರಾಷ್ಟ್ರೀಯತೆಯ ವಿಚಾರದಲ್ಲಿ ಎಂದಿಗೂ ರಾಜೀಯಾಗಿಲ್ಲ, ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಹಂತ ಹಂತವಾಗಿ ಬೆಳೆದು ಇಂದು ಉಡುಪಿ ಶಾಸಕರಾಗಿ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಶಾಸಕರ ಕಾರ್ಯಕ್ಷಮತೆಗೆ ಉಡುಪಿಯ ಪ್ರಜ್ಞಾವಂತ ಜನತೆ ಕಳೆದ ಲೋಕಸಭೆ, ವಿಧಾನ ಪರಿಷತ್, ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಆಶೀರ್ವಾದ ಮಾಡಿದ್ದಾರೆ.

ಉಡುಪಿಯಲ್ಲಿ ಸರಣಿ ಸೋಲಿನ ಮೂಲಕ ಕಂಗೆಟ್ಟಿರುವ ಕಾಂಗ್ರೆಸ್ ಮುಖಂಡರು ಇದೀಗ ತಮ್ಮ ಅಸ್ತಿತ್ವಕ್ಕಾಗಿ ಶಾಸಕರ ವಿರುದ್ಧ ಹತಾಶ ಹೇಳಿಕೆಯ ಮೂಲಕ ಚಾಲ್ತಿಯಲ್ಲಿರುವ ವಿಫಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ವ್ಯಂಗ್ಯವಾಡಿದ್ದಾರೆ.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ