ಉಡುಪಿ : ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಬುಧವಾರ ನಡೆದ ಲಯನ್ಸ್ ಮತ್ತು ಲಿಯೋ ಕ್ಲಬ್ ಮಲ್ಪೆ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಲಯನ್ಸ್ ಜಿಲ್ಲೆ 317ಸಿ ಮಾಜಿ ಗವರ್ನರ್ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಲಯನೆಸ್ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಮಾಜಿ ಗವರ್ನರ್ ಶ್ರೀಧರ ಶೇಣವ, ಲಯನ್ಸ್ ಕ್ಲಬ್ ಮಲ್ಪೆಯ ನೂತನ ಅಧ್ಯಕ್ಷ ಸುಧಾಕರ ಪೂಜಾರಿ, ಪದಗ್ರಹಣ ಅಧಿಕಾರಿ ಡಾ. ಮೆಲ್ವಿನ್ ಡಿಸೋಜ, ಮುಖ್ಯ ಅತಿಥಿ ರೋ.ಹೇಮಂತ್ ಯು.ಕಾಂತ್, ಲಿಯೋ ಅಧ್ಯಕ್ಷ ನಂದನ್ ಡಿ.ಕುಂದರ್, ಕಾರ್ಯದರ್ಶಿ ರವೀಂದ್ರ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
ಡಾ.ತಲ್ಲೂರು ಶಿವರಾಮ ಶೆಟ್ಟರು ತಮ್ಮ ಸಂಪಾದನೆಯ ಒಂದು ಪಾಲನ್ನು ಕಲಾವಿದರ ಶ್ರೇಯುಸ್ಸಿಗೆ, ಕಲಾ ಪ್ರಚಾರಕ್ಕೆ, ಕಲೆಯ ಉಳವಿಗೆ ವ್ಯಯಿಸುವ ಮೂಲಕ ಸಮಾಜದ ಮನ ಗೆದ್ದಿದ್ದಾರೆ.
ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ನಾಡಿನ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಅನುಪಮ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಸರಕಾರ ಅವರನ್ನು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ನೇಮಕಗೊಳಿಸಿದೆ.
ಉಡುಪಿ ಜಿಲ್ಲೆಯ ಪ್ರತಿಷ್ಠಿತ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಸುಮಾರು 7 ವರ್ಷ ಕಾಲ ತುಂಬು ಚಟುವಟಿಕೆಗಳನ್ನು ನಡೆಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸುವಂತೆ ಮಾಡಿದವರು ಡಾ.ತಲ್ಲೂರು. ಕಲಾರಂಗ ಸಂಘಟಿಸುವ ವಿದ್ಯಾಪೋಷಕ್ ಸ್ಕಾಲರ್‌ಶಿಪ್‌ನ್ನು ವಿಸ್ತರಿಸುವ ಕಾರ್ಯ ಮಾಡಿದ್ದಾರೆ.
ಯಕ್ಷಗಾನದ ಪದ್ಮಶ್ರೀ ಚಿಟ್ಟಾಣಿ ಅವರ ಯಕ್ಷಗಾನ ಸಪ್ತಾಹ, ಅಷ್ಟಾಹ, ದಶಹ ಕಾರ್ಯಕ್ರಮಗಳು ಉಡುಪಿ ರಾಜಾಂಗಣದಲ್ಲಿ ಪ್ರತಿ ವರ್ಷ ಇವರ ಸಾರಥ್ಯದಲ್ಲಿಯೇ ನೆರವೇರುತ್ತಿದೆ. ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಪ್ರತಿಷ್ಠಾನದಿಂದ ಯಕ್ಷಗಾನ ಸಪ್ತಾಹ, ತೆಂಕುತಿಟ್ಟಿನ ದಶಾವತಾರಿ ಕೆ. ಗೋವಿಂದ ಭಟ್ಟರ ಯಕ್ಷ ಸಪ್ತಾಹ, ಪ್ರಸಿದ್ಧ ಅರ್ಥಧಾರಿ ಸಾಮಗ ಸಂಸ್ಮರಣೆ ಹೀಗೆ ಯಕ್ಷಗಾನದ ಪ್ರಸಿದ್ಧ ನಾಮರ ಹೆಸರಲ್ಲಿ ಯಕ್ಷಗಾನ ಕಾರ್ಯಕ್ರಮಗಳು, ಸಾಧಕ ಕಲಾವಿದರಿಗೆ ಪ್ರಶಸ್ತಿ ನೀಡುವ ಮೂಲಕ ಧನ್ಯತೆಯ ಭಾವ ಅನುಭವಿಸಿದ್ದಾರೆ. ಈ ವರ್ಷ ಹಟ್ಟಿಯಂಗಡಿ ಮೇಳದವರ ಪಂಚಾಹ ಕಾರ್ಯಕ್ರಮ ಮಾಡಿದ್ದಾರೆ.
ಕಲಾರಾಧನೆ ಮೂಲಕ ಸಂತೃಪ್ತಿ ಹೊಂದಿದ್ದ ಡಾ.ತಲ್ಲೂರು ಅವರು ಯಕ್ಷಗಾನ ಕಲಾರಂಗದ ಚುಕ್ಕಾಣಿ ಹಿಡಿದ ಮೇಲೆ ತಮ್ಮ 60ನೇ ವಯಸ್ಸಿನಲ್ಲಿ ಗೆಜ್ಜೆಕಟ್ಟಿ ಕುಣಿದರು. ಖ್ಯಾತ ಗುರು ಬನ್ನಂಜೆ ಸಂಜೀವ ಸುವರ್ಣರ ಬಳಿ ಯಕ್ಷಗಾನ ಕಲಿತರು. ಶ್ರೀಕೃಷ್ಣ, ಬಲರಾಮ, ಹನುಮ, ಸಂಜಯ, ಮಗಧ, ಮೊದಲಾದ ದೊಡ್ಡ ವೇಷಗಳನ್ನು ಸಮರ್ಥವಾಗಿ ನಿಭಾಯಿಸಿ ಈವರೆಗೆ 400ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಅವರ ಕಚೇರಿಗೆ ಹೋದಾಗ ಅವರು ನಿರ್ವಹಿಸಿದ ಪಾತ್ರಗಳ ಫೋಟೊಗಳು ಕಲಾಸಕ್ತರಿಗೆ ಧನ್ಯತೆಯ ಭಾವವನ್ನು ಮೂಡಿಸುತ್ತವೆ.
ಡಾ. ತಲ್ಲೂರು ಅವರ ಕಲಾರಾಧನೆಗೆ ಸಂದ ಪ್ರಶಸ್ತಿಗಳು, ಸಮ್ಮಾನಗಳನ್ನು ಗಮನಿಸಿದಾಗ ಬೆರಗು ಮೂಡುತ್ತದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅವರಿಗೆ 2022ನೇ ಸಾಲಿನ ‘ಗೌರವ ಡಾಕ್ಟರೇಟ್’ ನೀಡಿ ಗೌರವಿಸಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ತುರುವೆ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ, ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ, ಜಗಜ್ಯೋತಿ ಬಸವೇಶ್ವರ ಕಾಯಕಶ್ರೀ ಪ್ರಶಸ್ತಿ ಸೇರಿದಂತೆ ನಾಡಿನ ಪ್ರತಿಷ್ಠಿತ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿದೆ.