ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಅವರ ಜೀವನ ಸಾಧನೆಯ ಸಮಗ್ರ ದಾಖಲೀಕರಣ : ಡಾ.ತಲ್ಲೂರು

ಉಡುಪಿ : ಉಡುಪಿಯ ಖ್ಯಾತ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಯಕ್ಷಗಾನ ಜೀವನ ಸಾಧನೆ ಬಗ್ಗೆ ಸಮಗ್ರ ದಾಖಲೀಕರಣಕ್ಕೆ ರಾಜ್ಯ ಯಕ್ಷಗಾನ ಅಕಾಡೆಮಿ ಮುಂದಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಶನಿವಾರ ಉಡುಪಿಯ ಯಕ್ಷಗಾನ ಕಲಾರಂಗದ ವತಿಯಿಂದ ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಂಡ ಭೀಮ ಗೋಲ್ಡ್ ಬೆಂಗಳೂರು ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಒಂದು ವಾರದ ಯಕ್ಷಶಿಕ್ಷಣ ಸನಿವಾಸ ಶಿಬಿರ – 2025ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ಅವರು ಯಕ್ಷಗಾನ ಕಲೆಯ ಬೆಳವಣಿಗೆಗೆ ಹಗಲಿರುಳು ಶ್ರಮಿಸಿದವರು. ಕಾರಂತರೊoದಿಗೆ ದೇಶ ವಿದೇಶದಲ್ಲಿ ಯಕ್ಷಗಾನವನ್ನು ಪ್ರದರ್ಶಿಸಿ ಯಕ್ಷಗಾನದ ಕಂಪನ್ನು ಬೀರಿದವರು. ಅವರ ಬಳಿ ದೇಶವಿದೇಶದಿಂದ ನೂರಾರು ಯಕ್ಷಗಾನ ಆಸಕ್ತರು ಬಂದು ಹೆಜ್ಜೆಗಾರಿಕೆಯನ್ನು ಕಲಿತಿದ್ದಾರೆ. ಕಲಿಯುತ್ತಿದ್ದಾರೆ. ಅವರ ಈ ಮಹಾನ್ ಸಾಧನೆ ಯುವಪೀಳಿಗೆಗೆ ತಿಳಿಯಬೇಕು. ಈ ನಿಟ್ಟಿನಲ್ಲಿ ಬನ್ನಂಜೆ ಸಂಜೀವ ಸುವರ್ಣ ಅವರ ಬಗ್ಗೆ ಸಮಗ್ರ ದಾಖಲೀಕರಣವನ್ನು ಅಕಾಡೆಮಿ ನಡೆಸಲಿದೆ ಎಂದು ಅವರು ತಿಳಿಸಿದರು.

ಯಕ್ಷಗಾನ ಪರಿಪೂರ್ಣ ಕಲಾಪ್ರಕಾರವಾಗಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಯಕ್ಷಗಾನವನ್ನು ಕಲಿತ ಮಕ್ಕಳು ಗುರುಹಿರಿಯರಿಗೆ ವಿಧೇಯರಾಗಿ, ನೈತಿಕ ಮೌಲ್ಯಗಳನ್ನು ತುಂಬಿಕೊoಡು ಬೆಳೆಯುತ್ತಾರೆ. ಇದರಿಂದ ಸುಸಂಸ್ಕೃತ ಸಮಾಜದ ನಿರ್ಮಾಣವಾಗುತ್ತದೆ. ಅಲ್ಲದೆ ಯಕ್ಷಗಾನ ಕಲಿಕೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಕಾರಣವಾಗುತ್ತಿರುವುದನ್ನು ಕಂಡಿದ್ದೇವೆ. ಆದ್ದರಿಂದ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಬೇಕು. ನಮ್ಮ ಪುರಾಣಗಳ ಬಗ್ಗೆ ಜ್ಞಾನದೊಂದಿಗೆ ಸಂಸ್ಕಾರವನ್ನು ಬೆಳೆಸುವ ಕಾರ್ಯ ನಡೆಯಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಅವರು ಉದ್ಘಾಟಿಸಿ ಮಾತನಾಡಿ, ಜಾತಿ,ಮತ ಬೇದವಿಲ್ಲದೆ ಮಕ್ಕಳು ಯಕ್ಷಗಾನವನ್ನು ಕಲಿಯಲು ಮುಂದಾಗುತ್ತಿರುವುದು ಯಕ್ಷಗಾನ ಕಲೆಯ ಬೆಳವಣಿಗೆಗೆ ದೃಷ್ಟಿಯಿಂದ ಸ್ವಾಗತಾರ್ಹ, ಅಲ್ಲದೆ ಯಕ್ಷಗಾನ ಕಲಿಕೆಯಿಂದ ಅಕಾಡೆಮಿಕ್ ಶಿಸ್ತು ಕೂಡಾ ಬೆಳೆಯುತ್ತದೆ. ಸ್ಮರಣ ಶಕ್ತಿ, ಮಾತಿನ ಶಕ್ತಿ ಜೊತೆಗೆ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆ ಕೂಡಾ ಆಗುತ್ತದೆ. ಸಾತ್ವಿಕ ಗುಣವನ್ನು ಯಕ್ಷಗಾನ ಕಲಿಸಿಕೊಡುತ್ತದೆ. ಮಕ್ಕಳು ಉತ್ಸಾಹದಿಂದ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಭೀಮ ಗೋಲ್ಡ್‌ನ ರಾಘವೇಂದ್ರ ಭಟ್ ಹಾಗೂ ಗುರುಪ್ರಸಾದ್, ಡಾ. ಕಾವ್ಯಾ ನರೇಂದ್ರ ಬಲ್ಲಾಳ್, ಶಿಬಿರದ ನಿರ್ದೇಶಕ ಗುರು ಬನ್ನಂಜೆ ಸಂಜೀವ ಸುವರ್ಣ, ನರಸಿಂಹ ತುಂಗ, ಆದ್ಯತಾ ಭಟ್, ಕಲಾರಂಗದ ಪದಾಧಿಕಾರಿಗಳಾದ ಎಸ್.ವಿ.ಭಟ್, ಯು. ವಿಶ್ವನಾಥ ಶಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಎಚ್. ಎನ್. ಶೃಂಗೇಶ್ವರ, ಭುವನಪ್ರಸಾದ ಹೆಗ್ಡೆ, ವಿದ್ಯಾ ಪ್ರಸಾದ್, ಅಜಿತ್ ಕುಮಾರ್, ಮಹೇಶ್ ಕುಮಾರ್, ರತ್ನಾಕರ ಶೆಣೈ, ನಿತ್ಯಾನಂದ ಶೆಟ್ಟಿಗಾರ್, ನಾಗೇಂದ್ರ ಗಾಣಿಗ ಉಪಸ್ಥಿತರಿದ್ದರು.

ನಾರಾಯಣ ಎಂ. ಹೆಗಡೆ ಸ್ವಾಗತಿಸಿ, ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ವಂದಿಸಿದರು, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರದ ಸಂಯೋಜಕ ನಿರಂಜನ ಭಟ್ ನಿರೂಪಿಸಿದರು.

ಒಂದು ವಾರದ ಈ ಸನಿವಾಸ ಶಿಬಿರದಲ್ಲಿ ಯಕ್ಷಶಿಕ್ಷಣದ ಶಾಲೆಗಳ 60 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ