ಬೈಂದೂರು : ಕುಂದಾಪುರ ತಾಲೂಕು ಕಚೇರಿಯಲ್ಲಿ ನಡೆದ ವಂಡ್ಸೆ ಹೋಬಳಿಯ ಗ್ರಾಮಗಳಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ವಾಸ್ತವ್ಯದ ಮನೆ ಕಟ್ಟಿಕೊಂಡ ಅರ್ಹ 32 ಮಂದಿ ಫಲನುಭವಿಗಳಿಗೆ 94ಸಿ ಅಡಿ ಹಕ್ಕುಪತ್ರವನ್ನು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿತರಿಸಿದರು.
ಬಳಿಕ ಮಾತನಾಡಿದ ಅವರು, 94ಸಿ ಅಡಿ ಎಲ್ಲಾ ಅರ್ಹರಿಗೂ ಹಕ್ಕು ಪತ್ರ ದೊರಕಿಸಿ ಕೊಡಲು ಬದ್ಧ. ಸಾಕಷ್ಟು ವರ್ಷಗಳಿಂದ ವಿವಿಧ ಹಂತದ ಅಧಿಕಾರಿಗಳ ಬಳಿಯಲ್ಲಿ 94ಸಿ ಅರ್ಜಿಗಳು ಸಮರ್ಪಕ ವಿಲೇವಾರಿ ಆಗದೇ ವಿಳಂಬವಾಗುತ್ತಿದ್ದರಿಂದ ಗ್ರಾಮೀಣ ಭಾಗದ ಬಡ ಕುಟುಂಬಗಳು ಸಂಕಷ್ಟ ಅನುಭವಿಸಿ ಬೇರೆ ಬೇರೆ ಸರಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇಂದು ಅಂತಹ 32 ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದ್ದು, ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ವಂಡ್ಸೆ ಹೋಬಳಿಯ ಬಾಕಿ ಉಳಿದ ಎಲ್ಲಾ ಅರ್ಹ ಬಡ ಕುಟುಂಬಕ್ಕೂ 94 ಅಡಿ ಭೂಮಿಯ ಹಕ್ಕು ಪತ್ರ ಒದಗಿಸುತ್ತೇವೆ ಎಂದು ಶಾಸಕರು ಭರವಸೆ ನೀಡಿದ್ದಾರೆ.
ಸಭೆಯಲ್ಲಿ ಬೈಂದೂರು ತಹಶೀಲ್ದಾರ್ ಮಲ್ಲಿಕಾರ್ಜುನ್, ಉಪ ತಹಶೀಲ್ದಾರ್ ಪ್ರಕಾಶ್, ಕಂದಾಯ ನಿರೀಕ್ಷಕ ರಾಘವೇಂದ್ರ ಮತ್ತು ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.