ನೈತಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ – ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗ್ರಹ

ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭ್ರಷ್ಟಾಚಾರ ಪ್ರಕರಣದಲ್ಲಿ ರಾಜ್ಯಪಾಲರು ವಿಚಾರಣೆಗೆ ಅವಕಾಶ ಕೊಟ್ಟಿದ್ದು, ಅದನ್ನು ಸಿದ್ದರಾಮಯ್ಯನವರು ನೈತಿಕವಾಗಿ ಪರಿಗಣಿಸಿ ರಾಜೀನಾಮೆ ಕೊಡಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಹಿಂದೆ ಇಂಥದ್ದೇ ಪ್ರಕರಣದಲ್ಲಿ ಸಿದ್ದರಾಮ್ಯನವರು ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜೀನಾಮೆಗೆ ಒತ್ತಾಯ ಮಾಡಿದ್ದು ಕೂಡ ಸತ್ಯ. 4 ದಶಕಗಳ ಕಾಲ ಸಾರ್ವಜನಿಕ ಜೀವನ ಮಾಡಿದ ಸಿದ್ದರಾಮ್ಯನವರು, ತಾವು ಪರಿಶುದ್ಧರು ಎಂದು ತಮಗೆ ತಾವೇ ಅಫಿಡವಿಟ್ ಹಾಕಿಕೊಂಡು ಅನೇಕ ಸಂದರ್ಭಗಳಲ್ಲಿ ಅವರ ಮೇಲೆ ಬಂದ ಎಲ್ಲ ಆರೋಪಗಳನ್ನು ಲೋಕಾಯುಕ್ತ ಮುಂದಿದ್ದ 106 ಕೇಸುಗಳಲ್ಲಿ 65 ಪ್ರಕರಣಗಳಲ್ಲಿ ಅವರೇ ಅವುಗಳಿಗೆ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದರು. ಚಳವಳಿ ರೂಪದಲ್ಲಿ ನಡೆಯುತ್ತಿದ್ದ ಲೋಕಾಯುಕ್ತವನ್ನು (ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ನ್ಯಾ. ವೆಂಕಟಾಚಲಯ್ಯ ಮೊದಲಾದವರ ನೇತೃತ್ವ) ಆ ಸಂಸ್ಥೆಯನ್ನೇ ಮುಚ್ಚಿಸಲು ಕಾರಣರಾಗಿದ್ದರು ಎಂದು ಕ್ಯಾಪ್ಟನ್ ಚೌಟ ಹೇಳಿದರು.

ಹೈಲೈಟ್ಸ್‌ :

ಹಿಂದೆಲ್ಲ ಅರ್ಕಾವತಿ ಬಡಾವಣೆ ರೀಡೂ ಹಗರಣದಲ್ಲಿ ಜನರನ್ನು ಯಾಮಾರಿಸಿದ ರೀತಿ ಈ ಬಾರಿ ಆಗುವುದಿಲ್ಲ. ಇದರಲ್ಲಿ ಎಲ್ಲ ದಾಖಲೆಗಳು ಸ್ಪಷ್ಟವಾಗಿ ಕಾಣುತ್ತಿವೆ. ನಡೆದಿರುವ ಎಲ್ಲ ನಡಾವಳಿಯನ್ನು ಗಮನಿಸಿದರೆ, ಮೇಲ್ನೋಟ ಎಂದಲ್ಲ; ದಾಖಲೆ ಸಮೇತ ಸಿದ್ದರಾಮಯ್ಯನವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡದ್ದು ಕಂಡುಬರುತ್ತದೆ.

ಭ್ರಷ್ಟಾಚಾರಕ್ಕೆ ಸಂಬಂಧಿಸಿ ಅನೇಕ ಕೋರ್ಟ್‌ಗಳು ಅನೇಕ ನಿರ್ದೇಶನಗಳನ್ನು ಕೊಟ್ಟಿವೆ. ಭ್ರಷ್ಟಾಚಾರದ ಸಂದರ್ಭದಲ್ಲಿ ಯಾವುದೋ ಒಂದು ಪ್ರೊಸೀಜರ್ ಎನ್ನುವುದಕ್ಕಿಂತ, ಭ್ರಷ್ಟಾಚಾರ ಎಂಬುದರ ಮೂಲೋತ್ಪಾಟನೆ ಆಗಬೇಕಾದ ಅಗತ್ಯವಿದೆ. ಸ್ವತಃ ಸಂವಿಧಾನದ ಮುಖ್ಯಸ್ಥರಾದ ಸಿದ್ದರಾಮಯ್ಯನವರ ಮೇಲೆ ನೀಡಿದ ದೂರಿನ ತನಿಖೆ ಮಾಡದೆ ಇದ್ದಲ್ಲಿ, ಸಂವಿಧಾನದ ಆಶಯ, ಜನರಲ್ಲಿ ಸಂವಿಧಾನದ ಬಗೆಗಿನ ನಂಬಿಕೆ, ಆ ನಂಬಿಕೆ ಹೊರಟುಹೋಗುತ್ತದೆ ಎಂದು ಸಂಸದರು ತಿಳಿಸಿದರು.

ಸಂವಿಧಾನದ ಮೌಲ್ಯ ಮತ್ತು ಆ ನಂಬಿಕೆ ಉಳಿಸಲು ಪಾರದರ್ಶಕ ತನಿಖೆ ಆಗಬೇಕು. ಹಿಂದೊಮ್ಮೆ ಅಡ್ವಾಣಿಯವರ ಮೇಲೆ ಇದೇ ರೀತಿ ಆಕ್ಷೇಪ ವ್ಯಕ್ತವಾಗಿತ್ತು. ರಾಮಕೃಷ್ಣ ಹೆಗಡೆ ಅವರ ಮೇಲೆ ರೇವಜಿತು ಪ್ರಕರಣದಲ್ಲಿ, ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಕೂಡ ಆರೋಪ ಬಂದಿತ್ತು. ಅವರೆಲ್ಲರೂ ವಿಚಾರಣೆ ಎದುರಿಸಿದ್ದರು. ಅವರು ತಪ್ಪಿತಸ್ಥರಲ್ಲ ಎಂದು ಪ್ರಕಟಿಸಿದ ಬಳಿಕ ಮತ್ತೆ ಸಾರ್ವಜನಿಕ ಜೀವನಕ್ಕೆ ಬಂದಿದ್ದರು. ಇದರಲ್ಲಿ ಸಿದ್ದರಾಮಯ್ಯನವರು ಅದೇ ಮೇಲ್ಪಂಕ್ತಿ ಹಾಕಬೇಕು. ಅವರು ಸ್ವತಃ ರಾಜೀನಾಮೆ ಕೊಡಬೇಕು. ಅವರ ವಿರುದ್ಧ ತನಿಖೆ ಆಗಬೇಕು. ತನಿಖೆಯಲ್ಲಿ ನಿರ್ದೋಷಿಯಾಗಿ ಹೊರಬಂದರೆ ರಾಜಕೀಯಕ್ಕೆ ಮತ್ತೆ ಬರಲಿ. ಆದರೆ, ತನಿಖೆ ಮಾಡದಂತಿರಲು ಜಾತಿ ವ್ಯವಸ್ಥೆ ಬಳಕೆ, ಬೇರೆ ಬೇರೆ ರೂಪವಾಗಿ ಪರಿವರ್ತನೆ ಸಲ್ಲದು. ಅವರ ಮಠಾಧೀಶರು, ಬೇರೆಬೇರೆಯವರು ರಕ್ತಪಾತ ಆಗುವುದಾಗಿ ಹೇಳುವುದು ಸರಕಾರ ಮತ್ತು ವ್ಯವಸ್ಥೆಯನ್ನು ಬೆದರಿಸುವ ತಂತ್ರ.

ಈ ಬೆದರಿಕೆ ತಂತ್ರವನ್ನು ಜನರು ಒಪ್ಪುವುದಿಲ್ಲ. ಸಿದ್ದರಾಮಯ್ಯನವರ ಈ ಮೋಸದ ತಂತ್ರ ಜನರಿಗೆ ಇವತ್ತು ಅರಿವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸೆಲ್ಫ್ ಅಟೆಸ್ಟೇಶನ್ ಅಫಿಡವಿಟ್ ಹಾಕಲು ಅವಕಾಶ ಮಾಡಿಕೊಟ್ಟಿದ್ದರು; ಸಿದ್ದರಾಮಯ್ಯನವರು ತಮಗೆ ತಾವೇ ತಪ್ಪಿತಸ್ಥರಲ್ಲ ಎಂದು ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಿದ್ದಾರೆ. ಅವರ ಮಾತನ್ನು ಸಿದ್ದರಾಮಯ್ಯನವರು ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಬೇರೇನೂ ಅಲ್ಲ ಎಂದು ಸಂಸದರು ಟೀಕಿಸಿದರು.

ಘನತೆವೆತ್ತ ರಾಜ್ಯಪಾಲರು ಕೊಟ್ಟ ತೀರ್ಮಾನ ಸರಿಯಾಗಿಯೇ ಇದೆ. ಇದರ ಸಂಬಂಧ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಿದೆ. 2011ರಲ್ಲಿ ಇದೇ ಥರದ ಪ್ರಕರಣದಲ್ಲಿ ಬಹಳ ರೋಷಾವೇಶದಿಂದ ಮಾತನಾಡಿದ ಸಿದ್ದರಾಮಯ್ಯನವರು, ತಮ್ಮ ವಿರುದ್ಧ ಆರೋಪ ಬಂದ ಸಂದರ್ಭದಲ್ಲೂ ಅವರೊಂದು ಉದಾಹರಣೆಯ ರೂಪದಲ್ಲಿ ನಡೆದುಕೊಳ್ಳಬೇಕು.

ಭಾರತದ ಸಾರ್ವಜನಿಕ ಜೀವನ ಬಹಳ ಪರಿಶುದ್ಧವಾಗಿ ಹೊರಹೊಮ್ಮಬೇಕು. ದೇಶದ ಸಂವಿಧಾನದ ವಿಚಾರದಲ್ಲಿ ಜನರಲ್ಲಿ ನಂಬಿಕೆ ಮೂಡಿಸುವ ನಿಟ್ಟಿನಲ್ಲಿ ಇದೊಂದು ಪ್ರಯತ್ನ ಆಗಬೇಕು. ಆ ದಿಸೆಯಲ್ಲಿ ಅವರು ಕೂಡಲೇ ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಮುಂದಿನ ಕ್ರಮಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕ್ಯಾಪ್ಟನ್ ಚೌಟ ಆಗ್ರಹಿಸಿದರು.

ಕಾಂಗ್ರೆಸ್ಸಿನ ಡಿಎನ್‌ಎ ಎಂದರೆ ಅದು ಭ್ರಷ್ಟಾಚಾರ. ಸುಮಾರು 14 ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರದ ಹಗರಣಗಳ ಜೊತೆಗೆ ಮೂಡಾ ಹಗರಣ ಹೊಸದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ಡಾ ಭರತ್ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಮತ್ತು ಯತೀಶ್ ಅರ್ವಾರ್, ಮಾಧ್ಯಮ ಸಂಚಾಲಕ ವಸಂತ ಪೂಜಾರಿ, ಹಿರಿಯ ಮುಖಂಡ ನಿತಿನ್ ಕುಮಾರ್, ಹಾಗೂ ಖಜಾಂಚಿ ಸಂಜಯ್ ಪ್ರಭು ಉತಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ