ಉಡುಪಿ : ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಲರಾ ಪ್ರಕರಣಗಳು ಕಂಡುಬಂದಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದ ಇದ್ದು ಸ್ವಚ್ಛತೆಗೆ ಆದ್ಯತೆ ನೀಡಿದ್ದಲ್ಲಿ, ಕಾಲರಾ ರೋಗದಿಂದ ದೂರವಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.
ಅವರು ಇಂದು ನಗರದ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆ ಹಾಗೂ ಡೆಂಗ್ಯೂ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಕಳೆದ ವಾರದಲ್ಲಿ 11 ಕಾಲರಾ ಪ್ರಕರಣಗಳು ವರದಿಯಾಗಿದ್ದು, ಕಾರ್ಕಳದ ಈದು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 5 ಪ್ರಕರಣಗಳು ಕಂಡುಬಂದರೆ, ಮಲ್ಪೆ, ಶಿರ್ವ, ಕಾಪು, ಕೆಮ್ಮಣ್ಣು ವಾಂತಿ ಬೇಧ ಪ್ರಕರಣಗಳು ಕಂಡುಬಂದು ಕಾಲರಾ ರೋಗ ಎಂದು ವರದಿ ಬಂದಿರುತ್ತದೆ. ಸಾರ್ವಜನಿಕರು ಕಾಲರಾ ರೋಗದ ಬಗ್ಗೆ ಮುಂಜಾಗೃತೆ ವಹಿಸಬೇಕು ಎಂದರು.
ಸಾರ್ವಜನಿಕರು ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಲ್ಲಾ ಸಮುದ್ರ ಉತ್ಪನ್ನಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸಬೇಕು. ಊಟ ತಯಾರಿ ಹಾಗೂ ಊಟ ಮಾಡುವ ಮುನ್ನ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಬೇಕು. ಶೌಚಾಲಯಗಳನ್ನು ಬಳಸಿದ ನಂತರ ಕೈಗಳನ್ನು ಸಾಬೂನಿನಿಂದ ತೊಳೆದು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಹೋಟೆಲ್, ರೆಸ್ಟೊರೆಂಟ್‌ನಲ್ಲಿ ಜನರಿಗೆ ಕುಡಿಯಲು ಬಿಸಿ ನೀರನ್ನು ನೀಡಬೇಕು. ಹೋಟೆಲ್‌ಗಳಲ್ಲಿ ಬಳಸುವ ಲೋಟ, ತಟ್ಟೆ ಹಾಗೂ ಪಾತ್ರೆಗಳನ್ನು ಸಹ ಬಿಸಿ ನೀರಿನಲ್ಲಿ ತೊಳೆಯಬೇಕು. ಯಾವುದೇ ಸಮುದ್ರದ ಉತ್ಪನ್ನಗಳನ್ನು ಮುಟ್ಟಿದಾಗ ಸರಿಯಾಗಿ ಕೈತೊಳೆದು ಆಹಾರ ಪದಾರ್ಥಗಳನ್ನು ಮುಟ್ಟುವುದು ಸೂಕ್ತ ಎಂದರು.
ಸಾರ್ವಜನಿಕರು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿನಿಸು ಹಾಗೂ ತಳ್ಳು ಗಾಡಿಯಲ್ಲಿ ಮಾರಾಟ ಮಾಡುವ ಆಹಾರಗಳನ್ನು ಹಾಗೂ ಹಣ್ಣುಗಳನ್ನು ಸೇವಿಸಬಾರದು. ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಲ್ಲಿ ಮಕ್ಕಳು ಕೈಗಳನ್ನು ಸ್ವಚ್ಛವಾಗಿ ತೊಳೆದು ಆಹಾರ ಉತ್ಪನ್ನಗಳನ್ನು ಬಳಸುವ ಬಗ್ಗೆ ಅರಿವು ಮೂಡಿಸಬೇಕು ಎಂದರು.