ಚೆಕ್ ಅಮಾನ್ಯ ಪ್ರಕರಣ : ಆರೋಪಿಗೆ 2.50 ಲಕ್ಷ ರೂ. ದಂಡ, ಒಂದು ವರ್ಷ ಜೈಲು ಶಿಕ್ಷೆ

ಬಂಟ್ವಾಳ : ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುದು ಗ್ರಾಮದ ಹಸನಬ್ಬ ಅವರಿಗೆ ಶಿಕ್ಷೆ ಪ್ರಕಟಿಸಿ ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಮಾನ್ಯ ನ್ಯಾಯಾಲಯದ ನ್ಯಾಯಾಧೀಶರಾದ ಭಾಗ್ಯಮ್ಮ ಅವರಿದ್ದ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಫರಂಗಿಪೇಟೆ ಶಾಖೆಯಿಂದ ಆರೋಪಿ ಹಸನಬ್ಬ ಅವರು 2012ರಲ್ಲಿ ಅಡವು ಸಾಲ ಪಡೆದುಕೊಂಡಿದ್ದರು. ಆರೋಪಿ ಬ್ಯಾಂಕಿನಿಂದ ಸಾಲ ಪಡೆದಕೊಂಡ ಬಳಿಕ ಸರಿಯಾದ ಸಮಯಕ್ಕೆ ಹಣ ಮರುಪಾವತಿಸದೆ ಸಾಲವನ್ನು ಸುಸ್ತಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆರೋಪಿ ವಿರುದ್ಧ ಸಹಕಾರಿ ಕಾಯ್ದೆಯನ್ವಯ ಕಾನೂನು ಪ್ರಕ್ರಿಯೆ ಆರಂಭಿಸಿತ್ತು. 2019ರಲ್ಲಿ ಆರೋಪಿಯ ಆಸ್ತಿಯನ್ನು ಹರಾಜಿಗಿಡುವ ಸಂದರ್ಭದಲ್ಲಿ ಹಸನಬ್ಬ ಶಾಖೆಗೆ ಆಗಮಿಸಿ ಸಾಲದ ಭಾಗಶಃ ಬಾಕಿಗೆ ಚೆಕ್ ನೀಡಿದ್ದರು. ಈ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಕೋರ್ಟ್ ಮೆಟ್ಟಿಲೇರಿತ್ತು.

ನಾನು ಫಿರ್ಯಾದಿ ಬ್ಯಾಂಕ್‌ನಲ್ಲಿ ಯಾವುದೇ ಲೋನ್ ತೆಗೆದುಕೊಂಡಿಲ್ಲ ಮತ್ತು ಯಾವುದೇ ಚೆಕ್ ನೀಡಿಲ್ಲ. ಆದುದರಿಂದ ನಾನು ಬ್ಯಾಂಕಿಗೆ ಯಾವುದೇ ಹಣ ಕಟ್ಟಲು ಬಾಕಿ ಇಲ್ಲ ಎಂದು ಆರೋಪಿ ನ್ಯಾಯಾಲಯಕ್ಕೆ ಸಾಕ್ಷಿ ನೀಡಿದ್ದ. ಅಲ್ಲದೆ, ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ಸುಳ್ಳು ಮನವಿಯನ್ನೂ ಮಾಡಿದ್ದ.

ಆದರೆ, 2019ರಲ್ಲಿ ಇದೇ ಆರೋಪಿ ತನ್ನ ಆಸ್ತಿಯ ಹರಾಜಿಗಿಟ್ಟ ಸಂದರ್ಭದಲ್ಲಿ ನೀಡಲಾಗಿದ್ದ ಮನವಿ ಪತ್ರವನ್ನು ಹಾಗೂ ಸಾಲದ ತಖ್ತೆ ಸಹಿತ ದಾಖಲೆಗಳನ್ನು ಪರಿಗಣಿಸಿದ ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಆರೋಪಿ ಸದ್ರಿ ಪ್ರಕರಣದ ಅಪರಾಧಿ ಎಂದು ತೀರ್ಮಾನಿಸಿತು.

ಚೆಕ್ ಅಮಾನ್ಯ ಪ್ರಕರಣದ ಅಪರಾಧಿ ಹಸನಬ್ಬ ಅವರು ಫಿರ್ಯಾದಿ ಬ್ಯಾಂಕಿಗೆ ರೂ. 2,50,000/- ಪರಿಹಾರ ನೀಡಬೇಕು, ಜೊತೆಗೆ ರೂ. 10,000/- ದಂಡ ಪಾವತಿಸಬೇಕು ಹಾಗೂ ಇದಕ್ಕೆ ತಪ್ಪಿದ್ದಲ್ಲಿ ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿತು.

ಫಿರ್ಯಾದಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಪರ ವಕೀಲರಾದ ಸುಕೇಶ್ ಕುಮಾರ್ ಶೆಟ್ಟಿ ವಾದ ಮಂಡಿಸಿದ್ದರು.

Related posts

ಡಿ.5ರಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 5‌ನೇ జిಲ್ಲಾ ಸಮ್ಮೇಳನ

ಫೆಂಗಾಲ್ ಚಂಡಮಾರುತ – ಉಳ್ಳಾಲದ ಕಿನ್ಯಾದಲ್ಲಿ ನೆರೆ ಅವಾಂತರ; ಸ್ಪೀಕರ್ ಖಾದರ್ ಭೇಟಿ, ಪರಿಶೀಲನೆ

ನದಿಗಿಳಿದಿದ್ದ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ಮೃತ್ಯು