ಮಂಗಳೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗಗಳಲ್ಲಿ ‘ಚಡ್ಡಿ ಗ್ಯಾಂಗ್’ ಎಂಬ ಹೈದರಾಬಾದ್, ಮಧ್ಯಪ್ರದೇಶ, ರಾಜಸ್ಥಾನ ಮೂಲದ ಕಳ್ಳರ ತಂಡವೊಂದು ಸಕ್ರಿಯವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರವಾಗಿರಬೇಕೆಂದು ಪೊಲೀಸ್ ಇಲಾಖೆ ತಿಳಿಸಿದೆ.
ಶನಿವಾರ ರಾತ್ರಿ ಮಂಗಳೂರಿನ ಕೋಡಿಕಲ್‌ನಲ್ಲಿ ನಡೆದ ಮನೆಯೊಂದಕ್ಕೆ ನುಗ್ಗಿ ಇದೇ ತಂಡ ಕಳವು ಎಸಗಿರುವ ಬಗ್ಗೆ ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ. ಪಕ್ಕದ ಮನೆಯ ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೃತ್ಯದ ದೃಶ್ಯಗಳು ಸೆರೆಯಾಗಿವೆ. ಚಡ್ಡಿ ಧರಿಸಿರುವ ಐವರು ಕೈಯಲ್ಲಿ ಟಾರ್ಚ್ ಹಿಡಿದುಕೊಂಡು ಮನೆಯ ಬಳಿ ಬಂದಿದ್ದಾರೆ. ಇವರು ನಸುಕಿನ ವೇಳೆ 2.04ಕ್ಕೆ ಒಳಪ್ರವೇಶಿಸಿ 3.42ಕ್ಕೆ ವಾಪಸಾಗಿದ್ದಾರೆ. ಈ ಕಳ್ಳರ ಡ್ರೆಸ್ ಕೋಡ್ ನೋಡಿದರೆ ಅದು ಚಡ್ಡಿ ಗ್ಯಾಂಗ್‌ನ ಡ್ರೆಸ್‌ಕೋಡ್‌ನ್ನು ಹೋಲುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರು ಟಾರ್ಚ್‌ಗಳನ್ನು ಬಳಸಿ ಕಳವಿಗೆ ಮನೆಯನ್ನು ಹುಡುಕಾಡುತ್ತಿದ್ದರು. ಮಾತ್ರವಲ್ಲದೆ ಸಿಸಿಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯದಂತೆ ಅವರು ಆ ಮನೆಯಲ್ಲಿ ಸರಿಸುಮಾರು 1.40 ಗಂಟೆ ಉಳಿದುಕೊಂಡಿದ್ದರು. ಮನೆಯಿಂದ ಹೊರಬಂದವರು ರಸ್ತೆಪಕ್ಕದ ಮೆಟ್ಟಿಲುಗಳಲ್ಲಿ ಇಳಿದುಕೊಂಡು ಹೋಗಿದ್ದರು.
ಚಡ್ಡಿ – ಬನಿಯಾನ್ ತೊಟ್ಟು, ತಲೆ ಮೇಲೊಂದು ಬಟ್ಟೆ ಸುತ್ತಿಕೊಳ್ಳುವ ಚಡ್ಡಿ ಗ್ಯಾಂಗ್‌ನ ಸದಸ್ಯರು ಸೊಂಟದಲ್ಲಿ ಆಯುಧಗಳನ್ನು ಇಟ್ಟುಕೊಳ್ಳುತ್ತಾರೆ. ನಿರಂತರ ಮಳೆಯ ದಿನಗಳಲ್ಲಿ ರಾತ್ರಿ ಮನೆಮಂದಿ ಗಾಢನಿದ್ದೆಯಲ್ಲಿರುವ ವೇಳೆ ಚಡ್ಡಿಗ್ಯಾಂಗ್ ಮನೆಗಳಿಗೆ ನುಗ್ಗಿ ಕಳವುಗೈಯ್ಯುತ್ತದೆ ಎಂದು ತಿಳಿದು ಬಂದಿದೆ.
‘ಚಡ್ಡಿ ಗ್ಯಾಂಗ್’ ಅಥವಾ ಕಳ್ಳರ ಬಗ್ಗೆ ಸಾರ್ವಜನಿಕರು ಎಚ್ಚರಿಕೆವಹಿಸುವಂತೆ ಮಂಗಳೂರು ಪೊಲೀಸರು ಮನವಿ ಮಾಡಿದ್ದಾರೆ. ರಾತ್ರಿ ವೇಳೆ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಳ್ಳಬೇಕು. ಬೆಲೆಬಾಳುವ ಸೊತ್ತುಗಳನ್ನು ಬ್ಯಾಂಕ್‌ನ ಸೇಫ್ ಲಾಕರ್‌ನಲ್ಲಿಡಬೇಕು. ಮನೆಯ ಹೊರಗಿರುವ ಸಿಸಿ ಕ್ಯಾಮರಾಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಅಪರಿಚಿತ/ಸಂಶಯಾಸ್ಪದ ವ್ಯಕ್ತಿಗಳು, ಮಹಿಳೆಯರನ್ನು ಗಮನಿಸಿದರೆ 112 ಅಥವಾ ಪೊಲೀಸ್ ಠಾಣೆಗೆ ಕರೆ ಮಾಡಬೇಕು. ದಾರಿದೀಪ, ಸಾರ್ವಜನಿಕ ದೀಪಗಳು ಉರಿಯುತ್ತಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟವರಿಗೆ ತಿಳಿಸಬೇಕು. ಒಂಟಿ ಮನೆಗಳು/ಲಾಕ್ಸ್‌ಹೌಸ್/ಹಿರಿಯ ನಾಗರಿಕರು/ಮಹಿಳೆಯರು ಮಾತ್ರ ಇರುವ ಮನೆಗಳಿದ್ದಲ್ಲಿ ಬೀಟ್ ಪೊಲೀಸ್‌ರಿಗೆ ಮಾಹಿತಿ ನೀಡಬೇಕು.