ಪುತ್ತಿಗೆ ಶ್ರೀಗಳ ಸುವರ್ಣ ಪೀಠಾರೋಹಣ ಸಂಭ್ರಮ, ಕರಾವಳಿ ಸಂಸ್ಕೃತೋತ್ಸವ

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮಠದ ವತಿಯಿಂದ ಎ.5ರ ಬೆಳಗ್ಗೆಯಿಂದ ರಾತ್ರಿ‌ಯವರೆಗೂ ರಾಜಾಂಗಣದಲ್ಲಿ ಸುವರ್ಣ ಪೀಠಾರೋಹಣ ಸಂಭ್ರಮ, ಶ್ರೀ ಪುತ್ತಿಗೆ ವಿದ್ಯಾಪೀಠದ 40ನೇ ವಾರ್ಷಿಕೋತ್ಸವ, ಶ್ರೀ ಪುತ್ತಿಗೆ ಸುಗುಣ ಸ್ಕೂಲ್‌ನ ಪ್ರಥಮ ವಾರ್ಷಿಕೋತ್ಸವ ಹಾಗೂ ಕರಾವಳಿ ಸಂಸ್ಕೃತೋತ್ಸವ ನಡೆಯಲಿದೆ.

ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸುವರ್ಣ ಪೀಠಾ‌ರೋಹಣ ಸಂಭ್ರಮದ ಅಂಗವಾಗಿ ಬೆಳಗ್ಗೆ 6.30ರಿಂದ ಬೆಳಗ್ಗೆ 10‌ರವರೆಗೆ ಶ್ರೀ ಪುತ್ತಿಗೆ ವಿದ್ಯಾಪೀಠದ ಹಳೇ ವಿದ್ಯಾರ್ಥಿಗಳು ನಾರಾಯಣನ ಅಜಾದಿರೂಪಗಳ ಸ್ಮರಣೆಯೊಂದಿಗೆ 51 ಕುಂಡಗಳಲ್ಲಿ ವ್ಯಾಸಯಾಗವನ್ನು ನಡೆಸುವರು. ಬೆಳಗ್ಗೆ 10ಕ್ಕೆ ಯಾಗದ ಪೂರ್ಣಾಹುತಿ ನಡೆಯಲಿದೆ ಎಂದು ಬುಧವಾರ ಗೀತಾಮಂದಿರದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.

40ನೇ ವಾರ್ಷಿಕೋತ್ಸವ ಪುತ್ತಿಗೆ, ಪಾಡಿಗಾರು, ಬೆಂಗಳೂರು, ಚೆನ್ನೈಹಾಗೂ ಕೋಲ್ಕತಾದಲ್ಲಿ ಪುತ್ತಿಗೆ ವಿದ್ಯಾಪೀಠವಿದೆ. ಈ ವರ್ಷದಿಂದ ತೀರ್ಥಹಳ್ಳಿಯಲ್ಲಿ ಅರಂಭಿಸಲಾಗುವುದು. ಈ ವಿದ್ಯಾಪೀಠಗಳು ಸಾಕಷ್ಟು ಸಂಖ್ಯೆಯ ಅರ್ಚಕರು, ಪುರೋಹಿತರು ಹಾಗೂ ವಿದ್ವಾಂಸರನ್ನು ಸಮಾಜಕ್ಕೆ ನೀಡಿದೆ. ಇಲ್ಲಿ ವೇದಾಧ್ಯಯನ ಮಾಡಿರುವವರು ವಿದೇಶಗಳಲ್ಲಿಯೂ ಧರ್ಮ ಪ್ರಚಾರ ಸೇವೆಯಲ್ಲಿ ನಿರತರಾಗಿದ್ದಾರೆ.

ವಿದ್ಯಾಪೀಠದ 40ನೇ ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ವಿಪ್ರ ಮಕ್ಕಳಲ್ಲಿ ಧರ್ಮ ಶ್ರದ್ಧೆಯ ಪ್ರವರ್ಧನ ಹೇಗೆ? ಎಂಬ ವಿಷಯದಲ್ಲಿ ಚಿಂತನ-ಮಂಥನ ನಡೆಯಲಿದೆ. ವಿ| ಕುಮಾರ ಗುರು ತಂತ್ರಿ, ವಿ| ವಾಸುದೇವ ಭಟ್‌ ಪಾವಂಜೆ, ವಿ| ವೆಂಕಟೇಶಾಚಾರ್ಯ ಪಡುಬಿದ್ರಿ, ವಿ| ಸ್ಕಂದಪ್ರಸಾದ ಭಟ್‌ ಕಡಂದಲೆ ಭಾಗವಹಿಸಲಿದ್ದಾರೆ. ವಿ| ಡಾ| ಷಣ್ಮುಖ ಹೆಬ್ಟಾರ್‌ ನಿರ್ವಹಿಸಲಿದ್ದಾರೆ. ಸಾಧಕರಾದ ಹೈದರಬಾದ್‌ನ ವಿ| ನಾಗೇಂದ್ರಾಚಾರ್ಯ, ರಾಮೇಶ್ವರದ ವೇ| ಮೂ| ಎಸ್‌.ಅನಂತ ಅಡಿಗ, ಮುಂಬಯಿಯ ವೇ| ಮೂ| ಶ್ರೀಪತಿ ಆಚಾರ್ಯ, ನಂದಿಕೂರು ವೆ| ಮೂ| ಮಧ್ವರಾಯ ಭಟ್‌, ಕೊರಂಗ್ರಪಾಡಿ ಆಗಮ ವಿದ್ವಾನ್‌ ಕೆ.ಎಸ್‌.ಕೃಷ್ಣಮೂರ್ತಿ ತಂತ್ರಿ, ಬೆಂಗಳೂರು ವೆ| ಮೂ| ಡಾ| ಕೆ. ನಾಗರಾಜ ನಕ್ಷತ್ರಿ ಅವರನ್ನು ಸಮ್ಮಾನಿಸಲಾಗುವುದು ಎಂದು ಅವರು ಹೇಳಿದರು.

ಸುಗುಣ ಶಾಲೆಯ ವಾರ್ಷಿಕೋತ್ಸವ ಶ್ರೀ ಪುತ್ತಿಗೆ ವೈದಿಕ- ಲೌಕಿಕ ವಿದ್ಯಾಪೀಠವಾದ ಸುಗುಣ ಶಾಲೆಯ ಮೊದಲ ವಾರ್ಷಿಕೋತ್ಸವವು ಸಂಜೆ 4ರಿಂದ ರಾತ್ರಿ 8 ರವರೆಗೆ ನಡೆಯಲಿದೆ. ಮಕ್ಕಳಲ್ಲಿ ಸಂಸ್ಕೃತ ಸಂಸ್ಕೃತಿಯ ಬಗ್ಗೆ ಜಾಗೃತಿ ಹೇಗೆ? ಎಂಬ ಚರ್ಚೆಯಲ್ಲಿ ಅಖೀಲ ಭಾರತ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ| ಗೋವಿಂದ ಕುಲಕರ್ಣಿ, ವಿ| ಡಾ| ಎನ್‌. ವೆಂಕಟೇಶಾಚಾರ್ಯ, ವಾಗ್ಮಿ ರೋಹಿತ್‌ ಚಕ್ರ ಪಾಲ್ಗೊಳ್ಳುವರು. ಡಾ| ಗೋವಿಂದ ಕುಲಕರ್ಣಿ, ಉದ್ಯಮಿ ರಾಮದಾಸ ಮಡಮಣ್ಣಾಯ ಅವರನ್ನು ಸಮ್ಮಾನಿಸಲಾಗುವುದು ಎಂದರು.

ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಶ್ರೀ ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿ| ಪ್ರಸನ್ನ ಆಚಾರ್ಯ, ಶ್ರೀಮಠದ ಪ್ರಮೋದ್‌ ಸಾಗರ್‌, ಸುನೀಲ್‌ ಆಚಾರ್ಯ, ರಮೇಶ್‌ ಭಟ್‌ ಸುದ್ದಿಗೋಷ್ಠಿಯಲ್ಲಿದ್ದರು.

ಕರಾವಳಿ ಸಂಸ್ಕೃತೋತ್ಸವ ಮಧ್ಯಾಹ್ನ 12.30ರಿಂದ ಸಂಜೆ 4 ರವರೆಗೆ ಕರಾವಳಿ ಸಂಸ್ಕೃತೋತ್ಸವ ನಡೆಯಲಿದೆ. ಅನೇಕ ಪ್ರೌಢಶಾಲೆಯ 250ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಆಗಮಿಸಿ ಸಂಸ್ಕೃತ ಕಿರು ನಾಟಕ, ಗಾಯನ ಇತ್ಯಾದಿಗಳನ್ನು ನಡೆಸಿಕೊಡುವರು. ಮಕ್ಕಳಲ್ಲಿ ಸಂಸ್ಕೃತ ಭಾಷೆಯ ಬಗ್ಗೆ ಇನ್ನಷ್ಟು ಆಸಕ್ತಿ ಮೂಡಿಸುವ ಪ್ರಯತ್ನ ಇದು ಎಂದು ಸ್ವಾಮೀಜಿಯವರು ತಿಳಿಸಿದರು.

Related posts

ಸಂಘಟಿತವಾಗಿ ಸರಕಾರಿ ಶಾಲೆಗಳನ್ನು ಉಳಿಸೋಣ – ಶಾಸಕ ಗಂಟಿಹೊಳೆ ಕರೆ

ಭಾರತ ಸರ್ಕಾರ ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಲಿದೆ – ಸುನಿಲ್ ಕುಮಾರ್

37 ಮರಳು ಬ್ಲಾಕ್‌ಗಳಲ್ಲಿ ಮರಳು ತೆರವುಗೊಳಿಸಲು ಆಶಯ ಪತ್ರ ವಿತರಣೆ : ಸಿಇಓ ಬಾಯಲ್