ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ಮಣಿಪಾಲ ಜಿ.ಎಸ್.ಎಲ್.ಆರ್ ಘಟಕದ ಟ್ಯಾಂಕನ್ನು ಸ್ವಚ್ಛಗೊಳಿಸುವ ಹಿನ್ನೆಲೆ, ನವೆಂಬರ್ 14ರಂದು ಕುಡಿಯುವ ನೀರಿನ ಸರಬರಾಜು ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ಕುಡಿಯುವ ನೀರನ್ನು ಸಂಗ್ರಹಿಸಿಟ್ಟುಕೊಂಡು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
Development
ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಪ್ರಕರಣ : ಶಿಲ್ಪಿ ಕೃಷ್ಣ ನಾಯ್ಕ್ ಬಂಧನವಾಗಿದೆ.. ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ
ಉಡುಪಿ : ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಿಸಿರುವ ಪರಶುರಾಮ ಥೀಮ್ ಪಾರ್ಕ್ನಲ್ಲಿನ ಪರಶುರಾಮ ಮೂರ್ತಿ ನಿರ್ಮಾಣದ ಹಿಂದಿನ ಅಕ್ರಮ ವಿಳಂಬವಾಗಿ ಬೆಳಕಿಗೆ ಬಂದಿದೆ.
ವಂಚನೆ ಮಾಡಿದ ಶಿಲ್ಪಿ ಕೃಷ್ಣ ನಾಯ್ಕ ಈಗಾಗಲೇ ಬಂಧನಕ್ಕೊಳಗಾಗಿದ್ದು, ಉಳಿದ ಆರೋಪಿಗಳನ್ನು ಪೊಲೀಸರು ತತ್ಕ್ಷಣವೇ ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಆಗ್ರಹಿಸಿದರು.
ಪರಶುರಾಮನ ಮೂರ್ತಿಯ ಸೊಂಟದ ಮೇಲ್ಭಾಗ ಎಲ್ಲಿಗೆ ಹೋಗಿದೆ ಎಂಬ ಬಗ್ಗೆಯೂ ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಈ ಅಕ್ರಮದಲ್ಲಿ ಹಲವರ ಕೈವಾಡವಿದ್ದು ಪೊಲೀಸರು ಎಲ್ಲರನ್ನು ವಿಚಾರಣೆಗೆ ಒಳಗಪಡಿಸಬೇಕು. ಪ್ರಕರಣವನ್ನು ಅತಿ ಶೀಘ್ರದಲ್ಲಿ ಇತ್ಯರ್ಥಪಡಿಸಿ. ಉಮಿಕಲ್ ಬೆಟ್ಟದ ಮೇಲೆ ಹೊಸ ಮೂರ್ತಿಯನ್ನು ನಿರ್ಮಿಸಿ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪರಶುರಾಮನ ಮೂರ್ತಿ ವಿಚಾರದಲ್ಲಿ ಶಿಲ್ಪಿ ಕೃಷ್ಣ ನಾಯ್ಕಗೆ ತೊಂದರೆ ನೀಡುವುದು ನಮ್ಮ ಉದ್ದೇಶವಲ್ಲ. ತಪ್ಪಿಗೆ ನೇರ ಹೊಣೆಯಾಗಿರುವವರು ವಿಧಾನಸಭೆ ಸದಸ್ಯರಾಗಿದ್ದು, ಕಲಾವಿದ ಮಾತ್ರ ಜೈಲುಪಾಲಾಗಿದ್ದಾನೆ. ಮೂರ್ತಿ ನಿರ್ಮಾಣಕ್ಕೆಂದು ಮಂಜೂರಾದ 1.25 ಕೋಟಿ ರೂ.ಗಳನ್ನು ಟೆಂಡರ್ಗೂ ಮೊದಲೇ ಕೃಷ್ಣ ನಾಯ್ಕಗೆ ನೀಡಿದ್ದಾರೆ. ಕೇವಲ 45 ದಿನಗಳಲ್ಲಿ 33 ಅಡಿ ಕಂಚಿನ ಮೂರ್ತಿ ನಿರ್ಮಾಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ವಿಟ್ಲ ಜೋಗಿ ಮಠ ಪುನರ್ ನಿರ್ಮಾಣಕ್ಕಾಗಿ ಶ್ರೀ ಕ್ಷೇ. ಧ. ಗ್ರಾ. ಯೋ.ಯಿಂದ ಮಂಜೂರಾದ ಸಹಾಯಧನದ ಚೆಕ್ ಹಸ್ತಾಂತರ
ಬಂಟ್ವಾಳ : ತಾಲೂಕಿನ ವಿಟ್ಲ ಶ್ರೀ ಯೋಗೀಶ್ವರ ಜೋಗಿ ಮಠದ ಪುನರ್ ನಿರ್ಮಾಣ ಕಾರ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರಾದ 2 ಲಕ್ಷ ರೂ.ನ ಸಹಾಯಧನದ ಚೆಕ್ಕನ್ನು ವಿಟ್ಲ ಶ್ರೀ ಯೋಗೀಶ್ವರ ಮಠದ ಶ್ರೀ ರಾಜಗುರು ಶ್ರದ್ಧಾನಾಥಾಜಿ ಮಠಾಧೀಶರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ಯೋಜನಾಧಿಕಾರಿ ರಮೇಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಯಶವಂತ್ ವಿಟ್ಲ, ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಗೀತಾ ಪ್ರಕಾಶ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಕೃಷ್ಣಯ್ಯ ಬಳ್ಳಾಲ್, ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ನವೀನ್ ಚಂದ್ರ, ವಲಯ ಮೇಲ್ವಿಚಾರಕರಾಕಿ ಸರಿತಾ, ಉಪಸ್ಥಿತರಿದ್ದರು.
‘ಕಾರ್ಮಿಕರ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ’ ಉಡುಪಿ ಡಿಸಿ ಕರೆ
ಉಡುಪಿ : ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಅವರ ಪರವಾದ ಕಾನೂನುಗಳಿವೆ. ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಉದ್ಯೋಗದಾತರು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಕಾರ್ಮಿಕರ ದುಡಿಮೆಗೆ ಅನುಗುಣವಾಗಿ ಕನಿಷ್ಠ ವೇತನ ಕಾಯಿದೆಯಂತೆ ಸಂಬಳ, ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಇ.ಎಸ್.ಐ, ಪಿಎಫ್, ಹೆಚ್ಚುವರಿ ಕೆಲಸ ಮಾಡಿಸಿಕೊಂಡಲ್ಲಿ ಹೆಚ್ಚುವರಿ ಪೇಮೆಂಟ್ ನೀಡಬೇಕು. ಅಲ್ಲದೇ ಕಾರ್ಮಿಕರು ಸುರಕ್ಷತೆಯಿಂದ ಕೆಲಸ ಮಾಡಲು ಸುರಕ್ಷಿತ ವಾತಾವರಣವನ್ನು ಅವರಿಗೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಮಿಕರ ರಾಜ್ಯ ವಿಮಾ ಯೋಜನೆ, ವೈದ್ಯಕೀಯ ಸೇವೆ ಹಾಗೂ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಉದ್ಯೋಗದಾತರಿಗೆ, ಗುತ್ತಿಗೆದಾರರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ, ಕಾರ್ಮಿಕ ಇಲಾಖೆಯಿಂದ ಹಾಗೂ ಇತರೆ ಇಲಾಖೆಗಳಿಂದ ಅನುಷ್ಠಾನ ಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಮಿಕ ಕಾಯ್ದೆಗಳು ಬಲಿಷ್ಠವಾಗಿವೆ. ಇವುಗಳ ಬಗ್ಗೆ ಉದ್ಯೋಗದಾತರಿಗೆ ಕಾನೂನಿನ ಅರಿವು ಮೂಡಿಸಿ, ಆ ಮೂಲಕ ಕಾರ್ಮಿಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಸರಿಯಾಗಿ ನೀಡುವಂತೆ ನೋಡಿಕೊಳ್ಳಿ. ಮಾನವೀಯ ನೆಲೆಯೊಂದಿಗೆ ಕಾನೂನಿನ ಅಡಿಯಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುವ ಬಗ್ಗೆ ತಿಳುವಳಿಕೆ ಮೂಡಿಸಿದಾಗ ಕಾಯಿದೆಗಳು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳ್ಳುತ್ತವೆ ಎಂದವರು ನುಡಿದರು.
ಉಡುಪಿ : ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಭೆ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಮಾತನಾಡಿ ಉಡುಪಿ ತಾಲೂಕಿನ ಕಾಪು ಕ್ಷೇತ್ರದ 10 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ 94 ಸಿ. ಹಾಗೂ 94 ಸಿ.ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಕಡತಗಳನ್ನು ಶೀಘ್ರವೇ ವಿಲೆಗೊಳಿಸುವಂತೆ ತಿಳಿಸಿದರು. ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ತುರ್ತು ದುರಸ್ತಿಗೆ ಕ್ರಮ ಕೈಗೊಳ್ಳುವಂತೆ, ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಸಣ್ಣ ನೀರಾವರಿ ವ್ಯಾಪ್ತಿಗೆ ಬರುವ ಕಿಂಡಿ ಅಣೆಕಟ್ಟುಗಳಲ್ಲಿ ನೀರಿನ ಶೇಖರಣೆಯನ್ನು ಸಮರ್ಪಕವಾಗಿ ನಿರ್ವಹಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಕುಡಿಯುವ ನೀರು ಹಾಗೂ ಕೃಷಿ ಕಾರ್ಯಗಳಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. ಅನರ್ಹ ಬಿಪಿಎಲ್ ಕಾರ್ಡ್ ಎಂದು ಗುರುತಿಸಿರುವ ಪಡಿತರ ಚೀಟಿಗಳ ಫಲಾನುಭವಿಗಳ ದಾಖಲೆಗಳ ನೈಜತೆ ಪರಿಶೀಲನೆ ಮಾಡಿ ನಂತರವೇ ಅವರ ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ರವೀಂದ್ರ, ಉಡುಪಿ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ವಿಜಯ, ತಹಶೀಲ್ದಾರರಾದ ಗುರುರಾಜ್ ಹಾಗೂ ಉಡುಪಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾಹೆ ಸಂಶೋಧನಾ ದಿನ 2024 – ಜೂನಿಯರ್ಸ್ಗೆ ಸ್ಫೂರ್ತಿ ಮತ್ತು ಕುತೂಹಲವನ್ನು ಹುಟ್ಟುಹಾಕುವುದರ ಜೊತೆಗೆ ಸ್ಪೂರ್ತಿದಾಯಕ ಭವಿಷ್ಯ ಪ್ರೇರೇಪಿಸುವುದು
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಕುತೂಹಲವನ್ನು ಹುಟ್ಟುಹಾಕಲು ಮೀಸಲಾಗಿರುವ ಮಾಹೆ ಸಂಶೋಧನಾ ದಿನದ 2024ರಲ್ಲಿ ಜೂನಿಯರ್ಗೆ ಸ್ಫೂರ್ತಿ ನೀಡುವ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲು ಉತ್ಸುಕವಾಗಿದೆ.
ನವೆಂಬರ್ 15 ಮತ್ತು 16, 2024 ರಂದು ನಡೆಯುತ್ತಿರುವ ಇನ್ಸ್ಪೈರ್ ಜೂನಿಯರ್ 8 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ವಿಶೇಷವಾಗಿ ರಚಿಸಲಾದ ಒಂದು ಅನನ್ಯ ಕಾರ್ಯಕ್ರಮವಾಗಿದ್ದು, ಸಂಶೋಧನೆ ಮತ್ತು ನಾವೀನ್ಯತೆಗಳ ಜಗತ್ತಿನಲ್ಲಿ ಮರೆಯಲಾಗದ ಪ್ರಯಾಣವನ್ನು ನೀಡುತ್ತದೆ. ಮಣಿಪಾಲದ ಕೆಎಂಸಿ ಗ್ರೀನ್ಸ್ನಲ್ಲಿ ಆಯೋಜಿಸಲಾದ ಈ ಎರಡು ದಿನಗಳ ಕಾರ್ಯಕ್ರಮ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಮತ್ತು ಅವರ ಕುಟುಂಬಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಪರಿವರ್ತನಾ ಅವಕಾಶಗಳ ಆಳವಾದ ನೋಟವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ನವೆಂಬರ್ 12ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅವರು ಈ ಕಾರ್ಯಕ್ರಮದ ಮಹತ್ವದ ಕುರಿತು ಮಾತನಾಡುತ್ತಾ, “ಇನ್ಸ್ಪೈರ್ ಜೂನಿಯರ್” (ಜೂನಿಯರ್ಗೆ ಸ್ಫೂರ್ತಿ ನೀಡುವ ಕಾರ್ಯಕ್ರಮ) ಯುವ ವಿದ್ಯಾರ್ಥಿಗಳಲ್ಲಿ ಅನ್ವೇಷಣೆಯ ಉತ್ಸಾಹವನ್ನು ಹುಟ್ಟುಹಾಕುವ ಗುರಿಯನ್ನು ಹೊಂದಿರುವ ಅಸಾಧಾರಣ ಉಪಕ್ರಮವಾಗಿದೆ. ಇದು ಅವರಿಗೆ ವಿಜ್ಞಾನದಲ್ಲಿರುವ ವ್ಯಾಪಕವಾದ ಅವಕಾಶ ಮತ್ತು ಸಾಧ್ಯತೆಗಳನ್ನು ತೋರಿಸುವುದು ಮತ್ತು ಸಮಾಜಕ್ಕೆ ಅವರು ಅರ್ಥಪೂರ್ಣ ಕೊಡುಗೆಗಳನ್ನು ನೀಡಬಹುದಾದ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುವುದು. ಇನ್ಸ್ಪೈರ್ ಜೂನಿಯರ್ನಲ್ಲಿ, ವಿದ್ಯಾರ್ಥಿಗಳು ಕೇವಲ ವೀಕ್ಷಕರಾಗಿ ಮಾತ್ರವಲ್ಲದೆ ಉತ್ತೇಜಕ, ಹ್ಯಾಂಡ್ಸ್-ಆನ್ ಪರಿಸರದಲ್ಲಿ ಸಕ್ರಿಯ ಪಾಲ್ಗೊಳ್ಳುವವರಾಗಿ ಸಂಶೋಧನಾ ಪ್ರಪಂಚಕ್ಕೆ ಕಾಲಿಡಲು ಅವಕಾಶವನ್ನು ಹೊಂದಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಕಲಿಯಲು, ತೊಡಗಿಸಿಕೊಳ್ಳಲು ಮತ್ತು ವಿಜ್ಞಾನದಲ್ಲಿ ಭವಿಷ್ಯವು ನಿಜವಾಗಿ ಹೇಗಿರಬಹುದು ಎಂಬುದನ್ನು ನೋಡಲು ಒಂದು ಉತ್ತಮ ಅವಕಾಶವಾಗಿದೆ.
ಮಾಹೆ ಮಣಿಪಾಲದ ಅರೋಗ್ಯ ವಿಜ್ಞಾನಗಳ ಸಹ ಉಪ ಕುಲಪತಿ ಡಾ. ಶರತ್ ರಾವ್, ಮಾತನಾಡಿ “ಇನ್ಸ್ಪೈರ್ ಜೂನಿಯರ್” ಸಂಶೋಧನಾ ಕಾರ್ಯಕ್ರಮವು ಮುಂದಿನ ಪೀಳಿಗೆಯ ಕಲಿಯುವವರಿಗೆ ವಿವಿಧ ಶೈಕ್ಷಣಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೈಜ-ಪ್ರಪಂಚ ಜ್ಞಾನ ನೀಡುವ ಮೂಲಕ ಅನೇಕ ಸಂಶೋಧನಾ ಚಟಿವಟಿಕೆಗಳಿಗೆ ಅನುವು ಮಾಡಿಕೊಡಲಿದೆ. ವೈಜ್ಞಾನಿಕ ಚಟುವಟಿಕೆಗಳ ಜೊತೆಗೆ, ವಿದ್ಯಾರ್ಥಿಗಳು ಮತ್ತು ಪೋಷಕರು ವಾಣಿಜ್ಯ, ಸಂವಹನ, ತಾಂತ್ರಿಕ, ಉದಾರ ಕಲೆಗಳು, ಮಾನವೀಯತೆ (ಹುಮಾನಿಟೀಸ್), ಕಾನೂನು, ನಿರ್ವಹಣೆ, ಮಾಧ್ಯಮ ಅಧ್ಯಯನಗಳು, ವಿನ್ಯಾಸ, ಮನೋವಿಜ್ಞಾನ, ಸಮಾಜ ವಿಜ್ಞಾನಗಳು ಮತ್ತು ಆತಿಥ್ಯ ಸೇವೆ (ಹಾಸ್ಪಿಟಾಲಿಟಿಸ್) ಸೇರಿದಂತೆ ಮಾಹೆಯ ವ್ಯಾಪಕ ಶೈಕ್ಷಣಿಕ ಕೊಡುಗೆಗಳನ್ನು ಪ್ರತಿನಿಧಿಸುವ ವಿವಿಧ ಮಳಿಗೆಗಳನ್ನು ಕಾಣಬಹುದು. ಎಲ್ಲಾ ಪಾಲ್ಗೊಳ್ಳುವವರನ್ನು ಈ ಮಳಿಗೆಗಳಿಗೆ ಭೇಟಿ ನೀಡಲು ಮತ್ತು ಮಾಹೆ ನೀಡುವ ವೈವಿಧ್ಯಮಯ ಶೈಕ್ಷಣಿಕ ಮಾರ್ಗಗಳ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಪಡೆಯಲು ನಾವು ಪ್ರೋತ್ಸಾಹಿಸುತ್ತೇವೆ, ನಮ್ಮ ಸಂಸ್ಥೆಯೊಳಗಿನ ವಿಶಾಲ ಸಾಧ್ಯತೆಗಳ ಬಗ್ಗೆ ಉತ್ಸಾಹವನ್ನು ಬೆಳೆಸುತ್ತೇವೆ. ಸಂವಾದಾತ್ಮಕ ಪ್ರಯೋಗಗಳು, ಲ್ಯಾಬ್ ಟೂರ್ಗಳು ಮತ್ತು ನಮ್ಮ ಅಧ್ಯಾಪಕರೊಂದಿಗೆ ನೇರ ಸಂವಹನ ಮೂಲಕ, ವಿದ್ಯಾರ್ಥಿಗಳು ಎಲ್ಲಾ ವಿಭಾಗಗಳಲ್ಲಿ ತಮ್ಮ ಭಾವೋದ್ರೇಕಗಳನ್ನು ಅನ್ವೇಷಿಸಲು ಮತ್ತು ಮುಂದುವರಿಸಲು ಪ್ರೇರೇಪಿಸುವಂತಹ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ನಾವು ಹೊಂದಿದ್ದೇವೆ.
ಇನ್ಸ್ಪೈರ್ ಜೂನಿಯರ್ ಕಾರ್ಯಕ್ರಮದಲ್ಲಿನ ಪಾಲ್ಗೊಳ್ಳುವಿಕೆ ಅನುಭವವು ಯುವ ಕಲಿಯುವವರಿಗೆ ವಿಜ್ಞಾನವನ್ನು ಜೀವಂತಗೊಳಿಸಲು ವಿನ್ಯಾಸಗೊಳಿಸಲಾದ ಚಟುವಟಿಕೆಗಳಿಂದ ತುಂಬಿರುತ್ತದೆ. ಈ ತಲ್ಲೀನಗೊಳಿಸುವ ಕಾರ್ಯಕ್ರಮವು ಸಂವಾದಾತ್ಮಕ ಪ್ರದರ್ಶನಗಳು ಮತ್ತು ಸ್ಪರ್ಧಾತ್ಮಕ ರಸಪ್ರಶ್ನೆಗಳು ಮತ್ತು ಕಲ್ಪನೆಯ ಸವಾಲುಗಳನ್ನು ಸಹ ಒಳಗೊಂಡಿದೆ, ಅಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನ, ಸೃಜನಶೀಲತೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ವಿನೋದ ಮತ್ತು ಅರ್ಥಪೂರ್ಣ ರೀತಿಯಲ್ಲಿ ಪರೀಕ್ಷಿಸಬಹುದು. ಮಾಹೆಯ ಸಂಶೋಧಕರನ್ನು ಭೇಟಿ ಮಾಡುವ ಮೂಲಕ ಮತ್ತು ಅವರ ಸಂಶೋಧನಾ ಕೆಲಸದ ಪರಿಣಾಮವನ್ನು ವೀಕ್ಸಿಸುವ ಮೂಲಕ, ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಭವಿಷ್ಯವನ್ನು ರೂಪಿಸಬಹುದು ಮತ್ತು ತಮ್ಮ ಸ್ವಂತ ಪರಿಶೋಧನೆ ಮತ್ತು ನಾವೀನ್ಯತೆಯ ಪ್ರಯಾಣವನ್ನು ಪ್ರಾರಂಭಿಸಬಹುದು.
ಇನ್ಸ್ಪೈರ್ ಜೂನಿಯರ್ ಕಾರ್ಯಕ್ರಮವು ಮಾಹೆ ಮಣಿಪಾಲದ ಸಂಶೋಧನಾ ದಿನ 2024 ಕಾರ್ಯಕ್ರಮದ ಭಾಗವಾಗಿದೆ, ಇದರಲ್ಲಿ ಸಹಯೋಗ (ನವೆಂಬರ್ 13-14), ಇಂಟರ್ ಡಿಸಿಪ್ಲಿನರಿ ರಿಸರ್ಚ್ ಎಕ್ಸ್ಪೋ ಮತ್ತು ಎನ್ರಿಚ್ (ನವೆಂಬರ್ 13-14), MAHE ಯ ಪ್ರಮುಖ ಸಂಶೋಧನಾ ಸಂಪನ್ಮೂಲಗಳು ಮತ್ತು ಮೂಲಸೌಕರ್ಯಗಳ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಗಳು ವೃತ್ತಿಪರ ಸಹಯೋಗ ಮತ್ತು ಸಂಪನ್ಮೂಲ ಹಂಚಿಕೆಗೆ ವೇದಿಕೆಯನ್ನು ಒದಗಿಸುತ್ತವೆ, ವಿಶ್ವವಿದ್ಯಾನಿಲಯದ ರೋಮಾಂಚಕ ಸಂಶೋಧನಾ ಸಂಸ್ಕೃತಿಯನ್ನು ಮತ್ತಷ್ಟು ಉತ್ಕೃಷ್ಟಗೊಳಿಸುತ್ತವೆ.
ಮಾಹೆ ಮಣಿಪಾಲವು 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳನ್ನು ಅವರ ಪೋಷಕರು ಮತ್ತು ಶಿಕ್ಷಕರೊಂದಿಗೆ ಇನ್ಸ್ಪೈರ್ ಜೂನಿಯರ್ನಲ್ಲಿ ಭಾಗವಹಿಸಲು ಮತ್ತು ವಿಜ್ಞಾನ ಮತ್ತು ಸಂಶೋಧನೆಯಲ್ಲಿನ ಮಿತಿಯಿಲ್ಲದ ಅವಕಾಶಗಳನ್ನು ಅನ್ವೇಷಿಸಲು ಪ್ರೀತಿಯಿಂದ ಆಹ್ವಾನಿಸುತ್ತಿದೆ. ಈ ಘಟನೆಯು ಯುವ ಮನಸ್ಸುಗಳಲ್ಲಿ ಕುತೂಹಲ ಮತ್ತು ಶ್ರೇಷ್ಠತೆಯ ಸಂಸ್ಕೃತಿಯನ್ನು ಬೆಳೆಸುವ ಮಾಹೆಯ ಬದ್ಧತೆಗೆ ಸಾಕ್ಷಿಯಾಗಿದೆ, ಮಾತ್ರವಲ್ಲದೆ ಜೀವಮಾನದ ಕಲಿಕೆ ಮತ್ತು ನಾವೀನ್ಯತೆಯ ಹಾದಿಯಲ್ಲಿ ಮುನ್ನಡೆಯಲು ಸಹಕರಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ನಿಮ್ಮ ಹಾಜರಾತಿಯನ್ನು ಖಚಿತಪಡಿಸಲು, ದಯವಿಟ್ಟು ಸಂಪರ್ಕಿಸಿ:
- ಡಾ. ವಿನೋದ್ ಸಿ ನಾಯಕ್: +91 98452 40393 | [email protected]
- ಡಾ. ರಾಜೇಶ್ ಕೃಷ್ಣ ಭಂಡಾರಿ: +91 98445 42567 | [email protected]
- ಡಾ. ಚೈತ್ರಾ ರಾವ್: +91 94488 57793 | [email protected]
- ಡಾ. ಶಂಕರ್ MB: +91 91102 40992 | [email protected]
ನಿಧಿಗಾಗಿ ರಸ್ತೆ ಅಗೆದ ಸರ್ಕಾರ! – ಗಮನಸೆಳೆಯುತ್ತಿದೆ ವಿಶಿಷ್ಟ ಒಕ್ಕಣೆಯ ಬ್ಯಾನರ್
ಮಂಗಳೂರು : ಆದಾಯ ಗಳಿಕೆಯಲ್ಲಿ ರಾಜ್ಯಕ್ಕೇ ಅಗ್ರಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಸಂಪರ್ಕಿಸುವ ಪ್ರಮುಖ ರಾಜ್ಯ ರಸ್ತೆ (ಕುಮಾರಧಾರ-ಕೈಕಂಬ)ಯಲ್ಲಿ ಅಪಾಯಕಾರಿ ಹೊಂಡ-ಗುಂಡಿಗಳು ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರವನ್ನೇ ಅಣಕವಾಡುವ ಬ್ಯಾನರ್ ಒಂದು ಕೈಕಂಬ ರಸ್ತೆಯಲ್ಲಿ ಕಂಡು ಬಂದಿದೆ.
“ಯಾರೋ ಮಾಂತ್ರಿಕರು ಕೈಕಂಬದಿಂದ – ಕುಕ್ಕೆ ಸುಬ್ರಹ್ಮಣ್ಯ ವರೆಗಿನ ರಸ್ತೆಯಲ್ಲಿ ನಿಧಿಯಿದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮದ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೆಯೇ ಬಿಟ್ಟಿದ್ದಾರೆ, ನಿಧಾನವಾಗಿ ಚಲಿಸಿ” ಎಂಬ ಬ್ಯಾನರ್ ಅಳವಡಿಸಲಾಗಿದೆ. ಕೈಕಂಬದಿಂದ ಸುಬ್ರಹ್ಮಣ್ಯವರೆಗಿನ ರಸ್ತೆಯ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯರೇ ಈ ಬ್ಯಾನರ್ ಅಳವಡಿಸಿರಬಹುದೆಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಸ್ಥಳೀಯ ವಾಹನ ಸವಾರರು ಈ ರಸ್ತೆಯ ಹೊಂಡಗುಂಡಿಗಳನ್ನು ಟೇಪ್ ಹಿಡಿದು ಅಳತೆ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಕುಮಾರಧಾರ ಸೇತುವೆ ಬಳಿ ಸುಮಾರು 12 ಫೀಟ್ ಅಗಲಕ್ಕೆ 3 ಫೀಟ್ ಆಳದ ಹೊಂಡ ಪತ್ತೆಯಾಗಿದೆ ಎಂದು ಗುಂಡಿಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಗುಂಡಿಗೆ ಜಲ್ಲಿಹುಡಿಗಳನ್ನು ಹಾಕಿ ಮುಚ್ಚಿದ್ದರು. ಇದೀಗ ಮತ್ತೆ ಗುಂಡಿಗಳು ಸವಾರರಿಗೆ ತೊಂದರೆ ಕೊಡುತ್ತಿವೆ.
ಅಪಘಾತಗಳು ನಡೆದು ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆಯವರು ಆದಷ್ಟು ಬೇಗ ಈ ಹೊಂಡಗಳನ್ನು ಮುಚ್ಚಬೇಕಾಗಿದೆ. ಯಾವಾಗ ಈ ರಸ್ತೆಯ ಹೊಂಡಗಳಿಗೆ ಮುಕ್ತಿ ದೊರೆಯುತ್ತದೆಯೋ ಎಂದು ಕಾದು ನೋಡಬೇಕಿದೆ.
ಎಂ.ಆರ್.ಪಿ.ಎಲ್ ಸಂಸ್ಥೆಯಿಂದ 1500 ಫಲಾನುಭವಿ ಕುಟುಂಬಗಳಿಗೆ 20 ಲಕ್ಷ ಬೆಲೆಯ ಸಿರಿಧಾನ್ಯ ವಿತರಣೆ
ಸುರತ್ಕಲ್ : ಎಂ.ಆರ್.ಪಿ.ಎಲ್ ಸಂಸ್ಥೆ ತಮ್ಮ ಸಿ.ಎಸ್.ಆರ್. ಅನುದಾನದ ಮೂಲಕ ನಿರಂತರ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು ಮಾದರಿ ಸಂಸ್ಥೆಯಾಗಿ ಮೂಡಿ ಬಂದಿದೆ ಎಂದು ಎಂ.ಆರ್.ಪಿ.ಎಲ್ ಸಿ.ಎಸ್.ಆರ್. ವಿಭಾಗದ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಹೇಳಿದರು.
ಅವರು ತಮ್ಮ ಸಂಸ್ಥೆ ವತಿಯಿಂದ ಎಂಡೋಸಲ್ಪಾನ್, ಎಚ್.ಐ.ವಿ, ರಕ್ತಬಲಹೀನತೆ, ಕ್ಷಯದಿಂದ ಬಳಲುವವರಿಗೆ ವೃದ್ದಾಶ್ರಮ ಮತ್ತಿತರ ಕಡೆಗಳಿಗೆ ಸುಮಾರು 20 ಲಕ್ಷ ರೂಪಾಯಿ ಬೆಲೆಬಾಳುವ ಪೌಷ್ಠಿಕಾಂಶಯುಕ್ತ ಸಿರಿಧಾನ್ಯಗಳನ್ನು ವಿತರಿಸಿ ಮಾತನಾಡಿ ಎಂ.ಆರ್.ಪಿ.ಎಲ್ ಸಂಸ್ಥೆ ಈ ಹಿಂದೆಯೂ ಎಂಡೋಸಲ್ಪಾನ್ ಪೀಡಿತರಾಗಿದ್ದು ಮಲಗಿದಲ್ಲಿಯೇ ಇದ್ದ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳನ್ನು ನೀಡಿದ್ದು, ವೃದ್ದಾಶ್ರಮ ಮತ್ತು ಅಸ್ಪತ್ರೆಗಳಿಗೆ ಅಂಬುಲೆನ್ಸ್ ವಾಹನ ನೀಡಿ ಸಹಕಾರ ನೀಡಿದೆ. ಇದೀಗ ಅನಾರೋಗ್ಯದಿಂದ ಬಲಳುವ 1500 ಫಲಾನುಭವಿಗಳಿಗೆ ಸಿರಿಧಾನ್ಯ ನೀಡಿ ಸಹಕಾರ ನೀಡಲಾಗಿದೆ, ಫಲಾನುಭವಿಗಳು ಇದರಿಂದ ತಮ್ಮ ಆರೋಗ್ಯವನ್ನು ವೃದ್ದಿಸಬಹುದಾಗಿದೆ, ಒಟ್ಟು 20 ಲಕ್ಷ ರೂಪಾಯಿ ಬೆಲೆಬಾಳುವ 1800 ಕಿಲೋ ಸಿರಿಧಾನ್ಯ ವಿತರಿಸಲಾಗಿದ್ದು, ಹೆಚ್ಚಿನ ಕಡೆಗಳಿಗೆ ತೆರಳಿ ನೇರವಾಗಿ ಫಲಾನಿಭವಿಗಳಿಗೆ ನೀಡಲಾಗಿದೆ ಎಂದರು.
ಈ ಸಂದರ್ಭ ಎಂ.ಆರ್.ಪಿ.ಎಲ್ ಅಧಿಕಾರಿ ಸ್ಟೀವನ್ ಪಿಂಟೋ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ಪೀಕರ್ ಯು.ಟಿ.ಖಾದರ್ ಮೇಲಿನ ಆಕ್ರೋಶ; ತಪ್ಪಾಗಿ ಗ್ರಹಿಸಿದ ಡಿವೈಎಫ್ಐ ಕಾರ್ಯಕರ್ತರಿಂದ ಕೇಂದ್ರ ಸಚಿವರ ಕಾರಿಗೆ ಮುತ್ತಿಗೆ
ಉಳ್ಳಾಲ : ರಸ್ತೆಹೊಂಡಕ್ಕೆ ಸ್ಕೂಟರ್ ಬಿದ್ದು ರಸ್ತೆಗೆಸೆಯಲ್ಪಟ್ಟ ಸಹಸವಾರೆ ಮೇಲೆಯೇ ಟ್ಯಾಂಕರ್ ಹರಿದು ಆಕೆ ಮೃತಪಟ್ಟ ಹಿನ್ನೆಲೆಯಲ್ಲಿ ರಸ್ತೆತಡೆ ನಡೆಸಿದ ಡಿವೈಎಫ್ಐ ಕಾರ್ಯಕರ್ತರು ಸ್ಪೀಕರ್ ಯು.ಟಿ.ಖಾದರ್ ಅವರ ಕಾರು ಎಂದು ಕೇಂದ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್ ಅವರ ಕಾರಿಗೆ ಮುತ್ತಿಗೆ ಹಾಕಿದ ಘಟನೆ ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ಶನಿವಾರ ಸಂಜೆ ನಡೆದಿದೆ.
ತೊಕ್ಕೊಟ್ಟು-ಕೊಣಾಜೆ ರಸ್ತೆಯ ಸೇವಾಸೌಧದ ಮುಂಭಾಗ ರಸ್ತೆಗುಂಡಿಗೆ ಬಿದ್ದ ಸ್ಕೂಟರ್ನಿಂದ ರಸ್ತೆಗೆಸೆಯಲ್ಪಟ್ಟ ಮಹಿಳೆಯ ಮೇಲೆಯೇ ಟ್ಯಾಂಕರ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ನಡೆದ ಬೆನ್ನಲ್ಲೇ ಸ್ಥಳೀಯರು ಆಕ್ರೋಶಕ್ಕೀಡಾಗಿ ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ಶನಿವಾರ ಸಂಜೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು.
ರಾತ್ರಿ ಮತ್ತೆ ಅದೇ ಸ್ಥಳದಲ್ಲಿ ಡಿವೈಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ, ಕೇಂದ್ರದ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳೂರಿಗೆ ಹಿಂತಿರುಗುತ್ತಿದ್ದರು. ಕಾರು ಚೆಂಬುಗುಡ್ಡೆಯ ಪ್ರತಿಭಟನೆ ನಡೆಸುತ್ತಿದ್ದ ದಾರಿಯಾಗಿ ಬರುತ್ತಿದ್ದಂತೆ ಡಿವೈಎಫ್ಐ ಕಾರ್ಯಕರ್ತರು ಎದುರಾಗಿದ್ದಾರೆ. ಆಗ ಪ್ರತಿಭಟನಾಕಾರರು ಪೊಲೀಸ್ ಎಸ್ಕಾರ್ಟ್ ವಾಹನವನ್ನು ಗಮನಿಸಿ ಕ್ಷೇತ್ರದ ಶಾಸಕ, ಸ್ಪೀಕರ್ ಯು.ಟಿ.ಖಾದರ್ ಅವರ ಕಾರು ಎಂದು ತಪ್ಪಾಗಿ ಗ್ರಹಿಸಿ ಕೇಂದ್ರ ಸಚಿವರ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನ ಚದುರಿಸಿ ಸಚಿವರ ಕಾರು ತೆರಳಲು ಅನುವು ಮಾಡಿಕೊಟ್ಟಿದ್ದಾರೆ.
ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ದ್ವಿಪಥಗೊಳಿಸಲು 343.74 ಕೋಟಿ ರೂ. ಅನುದಾನ ಬಿಡುಗಡೆ : ಸಂಸದ ಕ್ಯಾ. ಬ್ರಿಜೇಶ್ ಚೌಟ
ಮಂಗಳೂರು : ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 343.74 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಮಂಗಳೂರಿನಿಂದ ಮೂಡಿಗೆರೆಯಾಗಿ ತುಮಕೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟಿಯಲ್ಲಿ 75 ಕಿ.ಮೀ ನಿಂದ 86.20 ಕಿ.ಮೀ. ಅಂತರದವರೆಗೆ ಅಭಿವೃದ್ದಿಯಾಗಲಿದೆ. ಆ ಮೂಲಕ ಚಾರ್ಮಾಡಿ ಘಾಟ್ ಪ್ರದೇಶದ ರಸ್ತೆಯು ದ್ವಿಪಥವಾಗಿ ಅಗಲೀಕರಣಗೊಳ್ಳಲಿದೆ. ಈ ಹೆದ್ದಾರಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ ಎಂದು ಸಂಸದರು ಹೇಳಿದ್ದಾರೆ.
ರಾಜ್ಯದ ಪ್ರಮುಖ ಹೆದ್ದಾರಿಯಾದ ಚಾರ್ಮಾಡಿ ಘಾಟ್ನ್ನು ಮೇಲ್ದರ್ಜೆಗೇರಿಸುವುದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಸುಗಮ ಸರಕು ಸಾಗಾಣೆಯೊಂದಿಗೆ ಈ ಭಾಗದ ವ್ಯಾಪಾರ-ವಹಿವಾಟು ಕೂಡ ವೃದ್ಧಿಸಲಿದೆ. ಆ ಮೂಲಕ, ಕರ್ನಾಟಕದ ವಾಣಿಜ್ಯ ಹೆಬ್ಬಾಗಿಲು ಎಂದು ಗುರುತಿಸಿಕೊಂಡಿರುವ ಕರಾವಳಿ ಮತ್ತಷ್ಟು ಪ್ರಗತಿ ಪಥದಲ್ಲಿ ಮುನ್ನಡೆಯಲಿದೆ ಎಂದರು. ಹೀಗಾಗಿ, ಚಾರ್ಮಾಡಿ ಘಾಟ್ ಹೆದ್ದಾರಿ ದ್ವಿಪಥಗೊಳಿಸಲು 343,74,00,000 ರೂ. ಬಿಡುಗಡೆಗೊಳಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಇಲಾಖೆ ಅಧಿಕಾರಿಗಳಿಗೆ ಜಿಲ್ಲೆಯ ಜನತೆ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಕ್ಯಾ. ಚೌಟ ಹೇಳಿದ್ದಾರೆ.